Advertisement

ಹೈದ್ರಾಬಾದ್‌ ಕರ್ನಾಟಕದಲ್ಲಿ ಅಲೆಮಾರಿಗಳ ಸಮೀಕ್ಷೆ: ಚೇತನ್‌

11:17 AM Dec 02, 2018 | Team Udayavani |

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶದ ಅಲೆಮಾರಿ ಜನಾಂಗದ ಸೌಲಭ್ಯ ವಂಚಿತರನ್ನು ಗುರುತಿಸಿ, ಅಂತವರಿಗೆ ಸರ್ಕಾರದ ವತಿಯಿಂದ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯುವ ಕರ್ನಾಟಕ ವೇದಿಕೆ ಶ್ರಮಿಸುತ್ತಿದೆ ಎಂದು ವೇದಿಕೆ ರಾಜಾಧ್ಯಕ್ಷ ಮತ್ತು ನಟ ಚೇತನ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಅಲೆಮಾರಿ ಜನಾಂಗದವರಿಗೆ ಮೂಲಭೂತ ಸೌಲಭ್ಯ ಸಿಗಬೇಕು, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂದು ಯುವ ಕರ್ನಾಟಕ ವೇದಿಕೆಯು ಪ್ರಗತಿಪರ, ಜನಪರ, ಮಹಿಳೆಯರು ಮತ್ತು ಯುವ ಶಕ್ತಿಯೊಂದಿಗೆ ಕಾರ್ಯಪ್ರವೃತ್ತವಾಗಿದೆ ಎಂದರು.
 
ಕೇವಲ ವೇದಿಕೆ ಮೇಲೆ ಭಾಷಣ ಮಾಡುವುದಲ್ಲ. ಅಲೆಮಾರಿ ಜನಾಂಗದವರ ಜೀವನ ಸರಿಪಡಿಸುವುದು ನಮ್ಮ ಜವಾಬ್ದಾರಿ ಆಗಿದೆ. ಸಮಾನತೆ ಸಮಾಜವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಅಲೆಮಾರಿಗಳ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಅಲೆಮಾರಿ ಜನಾಂಗದವರಿಗೆ ವಾಸಿಸಲು ಮನೆಯಿಲ್ಲ. ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ. ಆರೋಗ್ಯದ ಸಮಸ್ಯೆ ಇದೆ. ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ.

ಚಿಕ್ಕ ಮಯಸ್ಸಿನಲ್ಲಿ ಹೆಣ್ಣು ಮಕ್ಕಳನ್ನು ಮದುವೆ ಮಾಡಲಾಗುತ್ತಿದೆ. ಮಕ್ಕಳು ಕೂಲಿ ಕೆಲಸ ಮತ್ತು ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಹೀಗೆ ಅನೇಕ ಸಮಸ್ಯೆಗಳು ಅವರನ್ನು ಕಾಡುತ್ತಿವೆ. ಇದಕ್ಕೆಲ್ಲ ಸರ್ಕಾರಿ ಸಮೀಕ್ಷೆಗಳಿಂದ ಹೊರಗುಳಿದಿರುವುದೇ ಕಾರಣವಾಗಿದೆ ಎಂದರು.

ಇವೆಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಅಲೆಮಾರಿ ಜನಾಂಗದವರನ್ನು ಗುರುತಿಸುವ ಕಾರ್ಯದಲ್ಲಿ ತೊಡಗಲಾಗಿದೆ. ಮೊದಲಿಗೆ ಅವರಿಗೆ ಸರಿಯಾದ ಸೂರಿನ ವ್ಯವಸ್ಥೆ, ಮಕ್ಕಳಿಗೆ ವಸತಿ ಶಾಲೆಗಳನ್ನು ಕಲ್ಪಿಸಬೇಕೆಂದು ವೇದಿಕೆ ಮನಗಂಡಿದೆ. ಜತೆಗೆ ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರ ಅಭಿವೃದ್ಧಿಯೂ ನಮ್ಮ ಉದ್ದೇಶವಾಗಿದೆ ಎಂದರು.

Advertisement

ನಗರದ ಶಹಾಬಾದ ರಸ್ತೆಯ ನೃಪತುಂಗ ಕಾಲೋನಿಗೆ ನಮ್ಮ ತಂಡ ಭೇಟಿ ಕೊಟ್ಟಿದ್ದು, ಅಲ್ಲಿ ಕಳೆದ 50 ವರ್ಷಗಳಿಂದ 100ಕ್ಕೂ ಅಧಿಕ ಬುಡಗ ಜಂಗಮ ಕುಟುಂಬಗಳು ವಾಸಿಸುತ್ತಿವೆ. ಅಲ್ಲಿನ ಜನರು ಹಲವಾರು ಸಮಸ್ಯೆಗಳನ್ನು ನಮ್ಮ ತಂಡದ ಎದುರು ಹೇಳಿಕೊಂಡಿದ್ದಾರೆ. ಅವರಿಗೆ ವಾಸಿಸಲು ಶಾಶ್ವತವಾಗಿ ಸೂರು, ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ವೇದಿಕೆ ಕಾರ್ಯ ಸಮಿತಿ ಸದಸ್ಯ ನಾಗಣ್ಣ ಮಾತನಾಡಿ, ಅಲೆಮಾರಿ ಜನಾಂಗದವರು ಹಿಂದೆ ಹಾವು, ಕರಡಿ ಆಡಿಸಿಕೊಂಡು ಜೀವನ ಸಾಗುತ್ತಿದ್ದರು. ಆದರೆ, ಅವುಗಳನ್ನು ಕಿತ್ತುಕೊಂಡು ಅವರ ಜೀವನೋಪಾಯಕ್ಕೆ ಪರ್ಯಾಯ ವ್ಯವಸ್ಥೆ ಮಾಡದೇ ಇರುವುದು ಅಲೆಮಾರಿಗಳ ಚಿಂತಾಜನಕ ಪರಿಸ್ಥಿತಿಗೆ ಕಾರಣವಾಗಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಲೆಮಾರಿಗಳಿಗೆ ಜಾತಿ ಪ್ರಮಾಣಪತ್ರ ಸಿಗುತ್ತಿಲ್ಲ. ಇದರಿಂದ ಅವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮೂಢನಂಬಿಕೆಗಳಿಗೆ ಅಲೆಮಾರಿಗಳು ಬಲಿಯಾಗುತ್ತಿದ್ದಾರೆ. ಹೀಗಾಗಿ ವಿಶೇಷ ಪ್ಯಾಕೇಜ್‌ ಘೋಷಿಸಿ ವೈಜ್ಞಾನಿಕವಾಗಿ ಸರ್ಕಾರ ಅನುಷ್ಠಾನ ಮಾಡಬೇಕು ಎಂದರು. ವೇದಿಕೆ ಪ್ರಧಾನ ಕಾರ್ಯದರ್ಶಿ ಸಂಪತ್‌ ಸುಬ್ಬಯ್ಯ, ಜೈ ಕನ್ನಡಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಸಚಿನ್‌ ಫರಹತಾಬಾದ, ರಾಜು  ಕಪನೂರ ಇದ್ದರು. 

ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕೆಂದು ಅಲೆಮಾರಿ ಜನಾಂಗದವರನ್ನು ಗುರುತಿಸಲು ಸಮೀಕ್ಷೆ ನಡೆಸಲಾಗುತ್ತಿದ್ದು, ಅವರಿಗೆ ಹಂತ-ಹಂತವಾಗಿ ಪರಿಹಾರ ಒದಗಿಸುವುದು ನಮ್ಮ ಉದ್ದೇಶವಾಗಿದೆ. ಈಗಾಗಲೇ ಕೊಡಗಿನ ದಿಡ್ಡಳ್ಳಿಯಲ್ಲಿ 300 ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲಾಗಿದೆ. ಕಳೆದ ತಿಂಗಳು ಬೀದರ್‌ನಲ್ಲಿ ಸಮೀಕ್ಷೆ ನಡೆಸಿ ಅಲೆಮಾರಿಗಳನ್ನು ಗುರುತಿಸಲಾಗಿದೆ. ಇದರಲ್ಲಿ ನೂರು ಕುಟುಂಬಗಳಿಗೆ ಮನೆ ಕಟ್ಟಿಕೊಡುವ ಬಗ್ಗೆ ಅಲ್ಲಿನ ಜಿಲ್ಲಾಡಳಿತದಿಂದ ಭರವಸೆ ಸಿಕ್ಕಿದೆ. ಅದೇ ರೀತಿ, ಕಲಬುರಗಿ, ಯಾದಗಿರಿ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. 
ಚೇತನ್‌, ರಾಜ್ಯಾಧ್ಯಕ್ಷ, ಯುವ ಕರ್ನಾಟಕ ವೇದಿಕ

Advertisement

Udayavani is now on Telegram. Click here to join our channel and stay updated with the latest news.

Next