ಲಕ್ನೋ: ಕೋವಿಡ್-19 ಸೋಂಕು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ಚೇತನ್ ಚೌಹಾಣ್ ಅವರಿಗೂ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ.
ಚೇತನ್ ಚೌಹಾಣ್ ಅವರು ಶುಕ್ರವಾರ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಸದ್ಯ ಅವರ ಗಂಟಲು ದ್ರವ ಪರೀಕ್ಷೆಯ ಫಲಿತಾಂಶ ಬಂದಿದ್ದು, ಕೋವಿಡ್ ಪಾಸಿಟಿವ್ ಆಗಿದೆ.
ಸದ್ಯ ಚೇತನ್ ಚೌಹಾಣ್ ಅವರು ಲಕ್ನೋದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೌಹಾಣ್ ಅವರ ಮನೆಯವರನ್ನೂ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಚೇತನ್ ಚೌಹಾಣ್ ಅವರು ಕೋವಿಡ್ ಪಾಸಿಟಿವ್ ಆದ ವಿಶ್ವದ ಮೂರನೇ ಮಾಜಿ ಕ್ರಿಕೆಟ್ ಆಟಗಾರ. ಈ ಮೊದಲು ಪಾಕಿಸ್ಥಾನದ ಶಾಹೀದ್ ಅಫ್ರೀದಿ ಮತ್ತು ಸ್ಕಾಟ್ಲೆಂಡ್ ನ ಮಜೀದ್ ಹಕ್ ಗೆ ಸೋಂಕು ದೃಢವಾಗಿತ್ತು. ಸೂಕ್ತ ಚಿಕಿತ್ಸೆಯ ನಂತರ ಇಬ್ಬರೂ ಗುಣಮುಖರಾಗಿದ್ದಾರೆ.
ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಟ್ವೀಟ್ ಮಾಡಿದ್ದು, ಚೇತನ್ ಚೌಹಾಣ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಬೇಗ ಗುಣಮುಖರಾಗಿ ಬನ್ನಿ ಸರ್ ಎಂದು ಹಾರೈಸಿದ್ದಾರೆ.
ಚೇತನ್ ಚೌಹಾಣ್ ಅವರು ಟೀಂ ಇಂಡಿಯಾ ಪರವಾಗಿ 40 ಟೆಸ್ಟ್ ಪಂದ್ಯವಾಡಿದ್ದು 2084 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಚೌಹಾಣ್ ಏಳು ಪಂದ್ಯವಾಡಿದ್ದಾರೆ.