ಮಂಗಳೂರು: ಚದುರಂಗವು ಬುದ್ಧಿಗೆ ಕಸರತ್ತು ನೀಡುವ ಆಟವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಚದುರಂಗ ಕ್ರೀಡಾಪಟುಗಳನ್ನು ಹೊರಹೊಮ್ಮಿಸಿದ ದೇಶ ನಮ್ಮದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ದ.ಕ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಗಳೂರು ಉತ್ತರ ವಲಯ, ಸಂತ ಅಲೋಶಿಯಸ್ ಕಾಲೇಜು ಹಿ.ಪ್ರಾ. ಶಾಲೆಯ ಆಶ್ರಯದಲ್ಲಿ 3 ದಿನಗಳ ಕಾಲ ನಡೆಯುವ 14 ಮತ್ತು 17ರ ವಯೋಮಿತಿಯ ಬಾಲಕ, ಬಾಲಕಿಯರ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯನ್ನು ಅವರು ಮಂಗಳವಾರ ಉದ್ಘಾಟಿಸಿದರು.
ಸಚಿವ ಯು. ಟಿ.ಖಾದರ್ ಮಾತನಾಡಿ, ತಾಳ್ಮೆ, ಸಹನೆಯ ಜತೆಗೆ ಮೆದುಳನ್ನು ಶಕ್ತಿಯುತವಾಗಿ ಮಾಡುವ ಶಕ್ತಿ ಚದುರಂಗ ಆಟಕ್ಕಿದೆ. ತಾಳ್ಮೆ, ಸಹನೆಯಿಂದ ಮುಂದುವರಿದರೆ ಯಶಸ್ಸು ಖಚಿತ ಎಂಬುದನ್ನೂ ಈ ಆಟ ತಿಳಿಸಿಕೊಡುತ್ತದೆ ಎಂದರು.
ಅಂತಾರಾಷ್ಟ್ರೀಯ ಮಟ್ಟದ ಚೆಸ್ ಸಾಧಕ ವಿಯಾನ್ನಿ ಆ್ಯಂಟನಿಯೋ ಡಿಕುನ್ಹಾ, ವೇಟ್‌ಲಿಫ್ಟರ್ ಆ್ಯಸ್ಟಿನ್ ಡಿ’ಸೋಜಾ, ಇಂಟರ್‌ನ್ಯಾಶನಲ್ ಸ್ಟ್ರಾಂಗೆಸ್ಟ್ ಮ್ಯಾನ್ ಪ್ರಸಾದ್ ಶೆಟ್ಟಿ, ಟೇಬಲ್ ಟೆನಿಸ್ ಸಾಧಕ ಕರಣ್ ಗೊಲ್ಲರಕೇರಿ, ಅಂತಾರಾಷ್ಟ್ರೀಯ ಈಜು ಸಾಧಕ ಮನೋಹರ್ ಪ್ರಭು ಅವರನ್ನು ಈ ವೇಳೆ ಸಮ್ಮಾನಿಸಲಾಯಿತು.
ಶಾಸಕ ಜೆ. ಆರ್.ಲೋಬೊ ಅಧ್ಯಕ್ಷತೆ ವಹಿಸಿದ್ದರು. ಸಂತ ಅಲೋಶಿಯಸ್ ಶಿಕ್ಷಣ ಸಮೂಹ ಸಂಸ್ಥೆಗಳ ರೆಕ್ಟರ್ ಫಾ| ಡೈನೇಶಿಯಸ್ ವಾಸ್, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ದಿವಾಕರ್ ಶೆಟ್ಟಿ, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಲಿಲ್ಲಿ ಪಾಯ್ಸ, ಫಾ| ರವಿ ಸಂತೋಷ್ ಕಾಮತ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ರಘುನಾಥ, ಸಂತ ಅಲೋಶಿಯಸ್ ಕಾಲೇಜು ಸಂಚಾಲಕ ಫಾ| ಎರಿಕ್ ಮಥಾಯಸ್, ಅಲೋಶಿಯಸ್ ಶಾಲಾ ಪಿಟಿಎ ಉಪಾಧ್ಯಕ್ಷ ಲಾಯ್ ನರೊನ್ಹಾ, ಸಂತ ಅಲೋಶಿಯಸ್ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಅರುಣ್ ಬ್ಯಾಪ್ಟಿಸ್ಟ್, ಹರೀಶ್, ಮಂಗಳೂರು ಉತ್ತರ ವಲಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಸಂತ ಅಲೋಶಿಯಸ್ ಕಾಲೇಜು ಹಿ.ಪ್ರಾ. ಶಾಲೆ ಮುಖ್ಯೋಪಾಧ್ಯಾಯಿನಿ ಫಿಲೋಮಿನಾ ಲೂವಿಸ್ ಉಪಸ್ಥಿತರಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ. ಶಿವರಾಮಯ್ಯ ಸ್ವಾಗತಿಸಿದರು. ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ. ಎಲ್. ವಂದಿಸಿದರು. ಬಿ. ರಾಮಚಂದ್ರ ರಾವ್ ನಿರೂಪಿಸಿದರು.
600 ಮಂದಿ ಸ್ಪರ್ಧಾಳುಗಳು
ರಾಜ್ಯದ ವಿವಿಧ 34 ಶೈಕ್ಷಣಿಕ ಜಿಲ್ಲೆಗಳಿಂದ ಸುಮಾರು 600 ಮಂದಿ ವಿದ್ಯಾರ್ಥಿಗಳು ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿದ್ದಾರೆ. 14 ಮತ್ತು 17ರ ವಯೋಮಿತಿ ವಿಭಾಗದಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಸ್ಪರ್ಧೆ ನಡೆಯಲಿದೆ. ಅ. 12ರಂದು ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.