Advertisement

ಗಡಿನಾಡಿನ ಲಿಟಲ್‌ ಚೆಸ್‌ ಮಾಸ್ಟರ್ ಗಗನ್‌, ಗಾನ

08:05 AM Mar 20, 2018 | Karthik A |

ಬದಿಯಡ್ಕ: ಗಗನ್‌ ಭಾರದ್ವಾಜ್‌ ಕುಂಬಳೆ ಉಪಜಿಲ್ಲಾ ಮಟ್ಟದ ಚೆಸ್‌ ಪಂದ್ಯಾಟದಲ್ಲಿ ಸತತ ನಾಲ್ಕನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾನೆ. ಚೆಸ್‌ ಅಸೋಸಿಯೇಶನ್‌ ಕಾಸರಗೋಡು ನಡೆಸಿದ ಜಿಲ್ಲಾ ಮಟ್ಟದ 15ವರ್ಷದ ಕೆಳಗಿನವರ ಹಾಗೂ 17 ವರ್ಷದ ಕೆಳಗಿನವರ ಹಾಗೂ ಸೀನಿಯರ Rapid ಟೂರ್ನಿಯಲ್ಲೂ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದ್ದಾನೆ. ಅನೇಕ ಬಾರಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸಿದ ಕೀರ್ತಿಯೂ ಈತನಿಗೆ ಸಲ್ಲುತ್ತದೆ. ಈ ವರ್ಷ ತ್ರಿಶ್ಶೂರಿನಲ್ಲಿ ಜರುಗಿದ ಕೇರಳ ರಾಜ್ಯ ಮುಕ್ತ ಪಂದ್ಯದಲ್ಲಿ 15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಚಾಂಪ್ಯನ್‌ಶಿಪ್‌ ತನ್ನ ಮಡಿಲಿಗೆ ತುಂಬಿಕೊಂಡಿದ್ದು  2017ನೇ ಸಾಲಿನ ಕೇರಳ್ಳೋತ್ಸವ ಚೆಸ್‌ ಸ್ಪರ್ಧೆಯಲ್ಲೂ ಮೊದಲನೆಯವನಾಗಿ ಮಿಂಚಿದ್ದಾನೆ. ಆ ಮೂಲಕ ಕುಂಬ್ದಾಜೆ ಪಂಚಾಯತಿನ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿ ಹೆಮ್ಮೆಯ ಕ್ರೀಡಾಳುವಾಗಿ ಗುರುತಿಸಲ್ಪಟ್ಟಿರುತ್ತಾನೆ. ಚದುರಂಗದ ಆಟದ ನಡುವೆಯೂ ಕಳೆದ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ 85%ಕ್ಕಿಂತಲೂ ಹೆಚ್ಚು  ಅಂಕಗಳನ್ನು ಗಳಿಸಿರುವುದು ಗಮನಾರ್ಹ.

Advertisement


ತೆಲಂಗಾಣ‌ದಲ್ಲಿ ನಡೆದ ರಾಷ್ಟ್ರಮಟ್ಟದ ಚೆಸ್‌ ಪಂದ್ಯಾಟದಲ್ಲಿ ಕೇರಳವನ್ನು ಪ್ರತಿನಿದೀಕರಿಸಿ ವೈಯುಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುವ ಗಾನ ಸಮೃದ್ಧಿ ಪ್ರತಿಭಾವಂತ ವಿದ್ಯಾರ್ಥಿನಿ. ಚೆಸ್‌, ಚಿತ್ರಕಲೆ, ಸಂಗೀತ, ನೃತ್ಯಗಳಲ್ಲಿ ಪಳಗಿರುವ ಈಕೆಗೆ ಕೂಚುಪ್ಪುಡಿ ಹಾಗೂ ಜಾನಪದ ನೃತ್ಯಗಳಲ್ಲಿ ರೆಜಿ ಮಾಸ್ಟರ್‌ ಕಾಂಞಂಗಾಡ್‌ ಮಾರ್ಗದರ್ಶಕರಾಗಿದ್ದಾರೆ. ಮಂಗಳೂರು ಡೆರಿಕ್‌ ಚೆಸ್‌ ಸ್ಕೂಲಿನ ಬೇಸಗೆ ಶಿಬಿರಗಳಲ್ಲಿ ಭಾಗವಹಿಸಿ ತರಭೇತಿ ಪಡೆದಿರುವ ಅವರಿಗೆ ಮೊದಲಿಗೆ ಕಾಂಞಗಾಂಡ್‌ ರಾಮನ್‌ ನಂಬೂದಿರಿ ತರಭೇತುದಾರರಾಗಿದ್ದರು. ಪ್ರಸ್ತುತ ಸುಬ್ರಹ್ಮಣ್ಯ ಕಾಂಞಗಾಂಡ್‌ ಅವರಿಂದ ಹೆಚ್ಚಿನ ತರಭೇತಿಯನ್ನು ಪಡೆಯುತ್ತಿದ್ದಾರೆ. ಮುಳ್ಳೇರಿಯ ಅಕ್ಷರಧಾಮ ಫೌಂಡೇಶನ್‌, ಕಾಸರಗೋಡು ಚೆಸ್‌ ಪೇರೆಂಟ್ಸ್‌ ಫೋರಮ್‌ ಪ್ರೋತ್ಸಾಹವೂ ಇವರಿಗಿದೆ. ಕಾಸರಗೋಡು ಚೆಸ್‌ ಅಸೋಸಿಯೇಶನ್‌ ನ ರಾಜೇಶ್‌ ಮಾಸ್ಟರ್‌ ಅವರ ಉತ್ತಮ ಮಾರ್ಗದರ್ಶನ, ಹೆತ್ತವರ ಪ್ರೋàತ್ಸಾಹ ಈ ಸಾಧಕರಿಗಿದೆ. ಪನೆಯಾಲ ಶಾಸ್ತಾರ ಎ.ಎಲ್‌.ಪಿ. ಶಾಲೆ ಹಾಗೂ ಏತಡ್ಕ ಎ.ಯು.ಪಿ.ಶಾಲೆ ಯ ಹಳೇ ವಿದ್ಯಾಥಿಗಳಾಗಿದ್ದು ಪ್ರಸ್ತುತ  ಅನ್ನಪೂರ್ಣೇಶ್ವರಿ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಪ್ಲಸ್‌ ವನ್‌ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ. ತರಬೇತಿ ಪಡೆದು ಹೆಚ್ಚಿನ ಸಾಧನೆ ಮಾಡುವ ಕನಸು ಹೊತ್ತಿರುವ ಪುಟಾಣಿಗಳು ಜಿಲ್ಲೆಯ ಶ್ರೇಯಾಂಕಿತ ಆಟಗಾರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಣ್ಣ – ತಂಗಿಯ ಸಾಧನೆ


ಚದುರಂಗದ ಚೌಕದೊಳಗೆ ಕಪ್ಪು ಬಿಳುಪು ಕಾಯಿಗಳ ರಣಾಂಗಣದಲ್ಲಿ ವಿಜಯದ ಮೆಟ್ಟಿಲನ್ನು ಏರುತ್ತಿರುವ ಈ ಅಣ್ಣ ತಂಗಿಯರ ಸಾಧನೆ ಅಪಾರವಾದುದು. ತಮ್ಮದೇ ಆದ ವಿಶಿಷ್ಟ ಚಲನೆಗಳ ಮೂಲಕ ಎದುರಾಳಿಯನ್ನು ಬುದ್ಧಿಯ ಖಡ್ಗದಲ್ಲಿ ಕೊಚ್ಚಿಹಾಕುವ ಜಾಣತನ ಇವರ ಆಯುಧ. ಕಿರಿಯರಾದರೂ ಪ್ರಯತ್ನ, ಬೆಂಬಲ, ಪ್ರೋತ್ಸಾಹಗಳು ಮುನ್ನಡೆಸಿದ ದೂರ ಬೆರಗುಮೂಡಿಸುತ್ತದೆ.

ಎ.ಎಲ್‌. ಪಿ. ಶಾಲೆ ಪನೆಯಾಲದಲ್ಲಿ ಮುಖ್ಯೋಪಾಧ್ಯಾಯರಾಗಿರುವ ಗೋಪಾಲಕೃಷ್ಣ ಭಟ್‌ ಹಾಗೂ ನಯನ ದಂಪತಿಯ ಮಕ್ಕಳಾದ ಗಗನ್‌ ಭಾರದ್ವಾಜ್‌ ಹಾಗೂ ಗಗನ ಸಮೃದ್ಧಿ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಯನ್ನು ಮಾಡಿರುವ ಗಡಿನಾಡಿನ ಹೆಮ್ಮೆಯ ಪ್ರತಿಭೆಗಳು. 

Advertisement

Udayavani is now on Telegram. Click here to join our channel and stay updated with the latest news.

Next