Advertisement

Chess tournament ಚದುರಂಗ ವೀರ ಗುಕೇಶ್‌: ಗುರುವನ್ನೇ ಮೀರಿಸಿದ ಶಿಷ್ಯ!

01:26 AM Aug 09, 2023 | Team Udayavani |

ಅದು 2018. ಅಂಡರ್‌ 13 ಮಟ್ಟದ ಚೆಸ್‌ ಪಂದ್ಯಾವಳಿ. ಅಲ್ಲೊಬ್ಬ 11 ವರ್ಷದ ಬಾಲಕನೊಬ್ಬ ಪ್ರಶಸ್ತಿ ಜಯಿಸಿದ್ದ. ಅಂದು ಈ ಬಾಲಕನಿಗೆ ಪ್ರಶಸ್ತಿ ಕೊಟ್ಟವರು ಐದು ಬಾರಿಯ ಚೆಸ್‌ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌. ಪ್ರಶಸ್ತಿ ಪಡೆದ ಬಾಲಕನ ಹೆಸರು ಡಿ.ಗುಕೇಶ್‌!

Advertisement

ಈಗ ಅದೇ ಬಾಲಕ 17ರ ಹರೆಯಕ್ಕೆ ಬಂದಿದ್ದಾನೆ. 1991ರಿಂದ ಜಗತ್ತಿನ ಟಾಪ್‌ 10 ಆಟಗಾರರಲ್ಲಿ ಒಬ್ಬರು ಮತ್ತು ಭಾರತದ ನಂ.1 ಚೆಸ್‌ ಆಟಗಾರರಾಗಿದ್ದ ಅದೇ ವಿಶ್ವನಾಥನ್‌ ಆನಂದ್‌ ಅವರನ್ನು ಹಿಂದಿಕ್ಕಿ ನಂ.1 ಆಗಿದ್ದಾನೆ. ಆ.3ರಂದು, ಲೈವ್‌ ರೇಟಿಂಗ್‌ನಲ್ಲಿ ವಿಶ್ವನಾಥನ್‌ ಆನಂದ್‌ ಅವರನ್ನು ಹಿಂದಿಕ್ಕಿ ಜಾಗತಿಕ ಟಾಪ್‌ ರ್‍ಯಾಂಕಿಂಗ್‌ನಲ್ಲೂ ಮೇಲೇರಿದ್ದಾನೆ. ಅಷ್ಟೇ ಅಲ್ಲ, ಸ್ವತಃ ವಿಶ್ವನಾಥನ್‌ ಆನಂದ್‌ ಅವರಿಂದಲೇ ಶಹಬ್ಟಾಸ್‌ಗಿರಿ ಗಿಟ್ಟಿಸಿಕೊಂಡಿದ್ದಾನೆ.

ಹೌದು ಭಾರತವೀಗ ಚೆಸ್‌ ಚಾಂಪಿಯನ್‌ಗಳ ತಾಣವಾಗುತ್ತಿದೆ. ಆರ್‌. ಪ್ರಗ್ಯಾನಂದ, ಬಿ.ಅಭಿರಾಂ, ರೌನಕ್‌ ಸಾಧ್ವಿನಿ, ನಿಹಾಲ್‌ ಸರಿನ್‌ ಕೂಡ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇವರೆಲ್ಲರೂ ಈಗಷ್ಟೇ ಹರೆಯಕ್ಕೆ ಬಂದವರು. ಇವರ ಕೋಚ್‌ ಆರ್‌.ಬಿ. ರಮೇಶ್‌ ಅವರ ಮಾರ್ಗದರ್ಶನದಲ್ಲಿ ಇವರೆಲ್ಲೂ ಜಗತ್ತಿನಾದ್ಯಂತ ಉತ್ತಮವಾದ ಸಾಧನೆಯನ್ನೇ ಮಾಡುತ್ತಿದ್ದಾರೆ.

ಅಂದ ಹಾಗೆ ಡಿ.ಗುಕೇಶ್‌ ಚೆನ್ನೈ ಮೂಲದವರು. 17 ವರ್ಷದ ಇವರು ಈಗ ಗ್ರಾಂಡ್‌ ಮಾಸ್ಟರ್‌. ಇತ್ತೀಚೆಗಷ್ಟೇ ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ  ಚೆಸ್‌ ವಿಶ್ವಕಪ್‌ 2022ರಲ್ಲಿ ಅತಿಥೇಯ ದೇಶದ ಮಿಸ್ಟರ್ಡಿನ್‌ ಇಸ್ಕಾಂಡರೋವ್‌ ವಿರುದ್ಧ ಗೆದ್ದು ಪಾಯಿಂಟ್‌ ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವನಾಥನ್‌ ಆನಂದ್‌ ಅವರನ್ನು ಶ್ರೇಯಾಂಕದಲ್ಲಿ ಹಿಂದಿಕ್ಕಿದ್ದಾರೆ.

ಗುಕೇಶ್‌ ಅವರ ಚೆಸ್‌ ಜರ್ನಿ ಆರಂಭವಾಗಿದ್ದು ಅವರ ಶಾಲೆ ಆಯೋಜನೆ ಮಾಡಿದ್ದ ಬೇಸಗೆ ಶಿಬಿರದಲ್ಲಿ. ಆರು ವರ್ಷ ಚಿಕ್ಕವನಿರುವಾಗಲೇ ಚೆಸ್‌ ಬಗ್ಗೆ ಆಸಕ್ತಿ  ಬೆಳೆಸಿಕೊಂಡಿದ್ದರು. ಈತನ ಆಸಕ್ತಿ ನೋಡಿ ತಂದೆ ರಜನಿಕಾಂತ್‌ ಮತ್ತು ತಾಯಿ ಪದ್ಮಾ ಚೆಸ್‌ ತರಬೇತಿಗೂ ಕಳುಹಿಸಲು ಶುರು ಮಾಡಿದರು. ಅನಂತರದ್ದೆಲ್ಲವೂ ಇತಿಹಾಸ. 11ನೇ ವರ್ಷಕ್ಕೇ ಇಂಟರ್‌ನ್ಯಾಶನಲ್‌ ಮಾಸ್ಟರ್‌ ಆದ ಗುಕೇಶ್‌, 9 ವರ್ಷದೊಳಗಿನವರ ಏಷ್ಯಾ ಸ್ಕೂಲ್‌ ಚೆಸ್‌ ಚಾಂಪಿಯನ್‌ ಶಿಪ್‌ ಅನ್ನೂ ಗೆದ್ದರು. ಗ್ರಾಂಡ್‌ ಮಾಸ್ಟರ್‌ ಆಗುವ ಮುನ್ನವೇ ಇಂಟರ್‌ನ್ಯಾಶನಲ್‌ ಮಾಸ್ಟರ್‌ ಆಗಿದ್ದುದು ಗುಕೇಶ್‌ ವಿಶೇಷತೆ.  ಏಷ್ಯಾ ಯೂತ್‌ ಚೆಸ್‌ ಚಾಂಪಿಯನ್‌ ಶಿಪ್‌ನಲ್ಲಿ 5 ಬಂಗಾರದ ಪದಕ, ಅಂಡರ್‌ 12 ವಿಶ್ವ ಯೂತ್‌ ಚೆಸ್‌  ಚಾಂಪಿಯನ್‌ಶಿಪ್‌ನಲ್ಲಿ ಗೆದ್ದು ಅಮೋಘ ಸಾಧನೆಯನ್ನೂ ಮಾಡಿದರು. ಜತೆಗೆ 12ನೇ ವಯಸ್ಸಿಗೇ ಗ್ರಾಂಡ್‌ ಮಾಸ್ಟರ್‌ ಆಗಿ ಭಾರತದಲ್ಲಿ  ದಾಖಲೆಯನ್ನೇ ನಿರ್ಮಿಸಿದರು. 16 ವರ್ಷದವನಾಗಿದ್ದಾಗ   ಗುಕೇಶ್‌  ವಿಶ್ವದ ನಂ. 1 ಆಟಗಾರ ಮ್ಯಾಗ್ನಸ್‌ ಕಾರ್ಲಸನ್‌ ಅವರನ್ನು ಮಣಿಸಿದ್ದರು.

Advertisement

ಈಗ ಗುಕೇಶ್‌ ಅವರು ಲೈವ್‌ ರೇಟಿಂಗ್‌ನಲ್ಲಿ 2755.9 ಅಂಕ ಗಳಿಸಿ ಭಾರತದಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ವಿಶ್ವನಾಥನ್‌ ಆನಂದ್‌ 2754.0 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next