Advertisement

ಚೆಸ್‌ನಲ್ಲಿ ಮಿಂಚಿದ ಗಡಿನಾಡಿನ ಕನ್ನಡ ಹುಡುಗ

04:10 AM Dec 19, 2018 | Karthik A |

ಬದಿಯಡ್ಕ: ಗಡಿನಾಡಿನ ಬಾಲಕನೊಬ್ಬ ತನ್ನ ಬುದ್ಧಿ ಸಾಮರ್ಥ್ಯದಿಂದ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾನೆ. ಆ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಡಿನಾಡಿನ ಪ್ರತಿಭೆಗಳು ಮಾಡಿದ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ ಮೂಡಿಸಿದ ಬಾಲಕನೇ ಗಗನ್‌ ಭಾರದ್ವಾಜ್‌. ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೆ„ಯರ್‌ ಸೆಕೆಂಡರಿ ಶಾಲೆಯ ವಿದ್ಯಾರ್ಥಿ, ಕುಂಬ್ಡಾಜೆ ಕಾನಕಜೆಯ ಗಗನ್‌ ಕೇರಳ ರಾಜ್ಯದ ಸೀನಿಯರ್‌ ವಿಭಾಗದ ಚೆಸ್‌ ತಂಡದಲ್ಲಿ ಸ್ಪರ್ಧಿಸಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಪಡೆದಿದ್ದಾನೆ. ಕೇರಳ ತಂಡ ಚಾಂಪ್ಯಯನ್‌ಶಿಪ್‌ ಪಡೆಯುವಲ್ಲಿ ಈತ ಪ್ರಧಾನ ಪಾತ್ರ ವಹಿಸಿದ್ದು ಜಿಲ್ಲೆ ಹೆಮ್ಮೆ ಪಡುವಂತೆ ಮಾಡಿದ್ದಾನೆ.

Advertisement

ನ್ಪೋರ್ಟ್ಸ್ ಆ್ಯಂಡ್‌ ಗೇಮ್ಸ್‌ ಫೆಡರೇಶನ್‌ ಆಫ್‌ ಇಂಡಿಯದ ಆಶ್ರಯದಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನಾರಾಯಣಪುರಂನಲ್ಲಿ ಡಿ.9ರಿಂದ ಡಿ.12ರ ತನಕ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಎದುರಾಳಿಗಳಿಗೆ ಪ್ರಬಲವಾದ ಪೈಪೋಟಿ ನೀಡಿ ಕೇರಳ ರಾಜ್ಯ ಚಾಂಪಿಯನ್‌ಶಿಪ್‌ ತನ್ನದಾಗಿಸಿಕೊಂಡಿದೆ. ದೇಶದ ಎಲ್ಲ ರಾಜ್ಯಗಳಿಂದ ಆಯ್ಕೆಯಾದ 5 ಮಂದಿಯ ತಂಡಗಳು ಸ್ಪರ್ಧಾಕಣದಲ್ಲಿದ್ದವು. ಹಲವು ಬಾರಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ತನ್ನ ಚದುರಂಗದ ನಿಪುಣತೆಯನ್ನು ಮೆರೆದಿರುವ ಗಗನ್‌ ಭಾರದ್ವಾಜ್‌ ಎ.ಎಲ್‌.ಪಿ. ಶಾಲೆ ಪನೆಯಾಲ ಇಲ್ಲಿನ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್‌ ಮತ್ತು ನಯನ ದಂಪತಿಯ ಪುತ್ರ. ಪ್ರಸ್ತುತ ಅಗಲ್ಪಾಡಿ ಶಾಲೆಯ ಪ್ಲಸ್‌ ಟು ವಿದ್ಯಾರ್ಥಿ. ಚದುರಂಗದ ಚೌಕದೊಳಗೆ ಕಪ್ಪು ಬಿಳುಪು ಕಾಯಿಗಳ ಚಲನವಲನಗಳಲ್ಲಿನ ಸೂಕ್ಷ್ಮತೆಯನ್ನು ಸರಿಯಾಗಿ ಗಮನಿಸಿ ಜಾಣತನದಿಂದ, ಬುದ್ಧಿವಂತಿಕೆಯಿಂದ ಗೆಲುವನ್ನು ತನ್ನದಾಗಿಸುವ  ಈ ಕಿರಿವಯಸ್ಸಿನ ದೊಡ್ಡ ಸಾಧನೆ ಶ್ಲಾಘನೀಯ.

ಮಂಗಳೂರಿನ ಡೆರಿಕ್‌ ಚೆಸ್‌ ಶಾಲೆಯ ಬೇಸಗೆ ಶಿಬಿರಗಳಲ್ಲಿ ಭಾಗವಹಿಸಿ ತರಬೇತಿ ಪಡೆದಿರುವ ಗಗನ್‌ ಈ ಹಿಂದೆ ಕಾಂಞಂಗಾಡ್‌ ರಾಮನ್‌ ನಂಬೂದಿರಿ ತರಬೇತುದಾರರಾಗಿದ್ದು ಈಗ ಸುಬ್ರಹ್ಮಣ್ಯ ಕಾಂಞಂಗಾಡ್‌ ಹೆಚ್ಚಿನ ತರಭೇತಿ ನೀಡುತ್ತಿದ್ದಾರೆ. ಕಾಸರಗೋಡು ಚೆಸ್‌ ಅಸೋಸಿಯೇಷನ್‌ನ ರಾಜೇಶ್‌ ಮಾಸ್ಟರ್‌ ಬೆಂಬಲ ಹಾಗೂ ಮಾರ್ಗದರ್ಶನ ನೀಡುತ್ತಿದ್ದಾರೆ.

ಶಾಲೆ, ಉಪಜಿಲ್ಲೆ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುವಲಯ ಮಟ್ಟಕ್ಕೆ ಆಯ್ಕೆಯಾದ ಗಗನ್‌ ಅಲ್ಲಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ರಾಷ್ಟ್ರಮಟ್ಟದ ಸ್ಪರ್ಧಾ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾನೆ. ಚೆಸ್‌ ಅಸೋಸಿಯೇಶನ್‌ ಸೀನಿಯರ್‌ ರ್ಯಾಪಿಡ್‌ ಟೂರ್ನಿ, ಕೇರಳೋತ್ಸವ ಚೆಸ್‌ ಸ್ಪರ್ಧೆ, ಕೇರಳ ರಾಜ್ಯ ಮುಕ್ತ ಚೆಸ್‌ ಸ್ಪರ್ಧೆಗಳಲ್ಲಿ ತನ್ನ ಕೈಚಳಕ ತೋರಿದ್ದಾನೆ. ಕನ್ನಡ ಹುಡುಗನ ಈ ಗೆಲುವಿನ ಜೈತ್ರಯಾತ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡುವಂತಾಗಲಿ ಎಂಬ ಹಾರೈಕೆ ಕಾಸರಗೋಡಿನ ಕನ್ನಡಿಗರದ್ದು.

Advertisement

Udayavani is now on Telegram. Click here to join our channel and stay updated with the latest news.

Next