Advertisement
ಚೆರ್ಕಳ – ಕಲ್ಲಡ ಅಂತಾರಾಜ್ಯ ರಸ್ತೆಯಲ್ಲಿ ಪಳ್ಳತ್ತಡ್ಕ ಸೇತುವೆಯಲ್ಲೂ ಬೃಹತ್ ಹೊಂಡ ಗುಂಡಿ ಸೃಷ್ಟಿಯಾಗಿದ್ದು, ವಾಹನ ಚಾಲಕರಿಗೆ ತಮ್ಮ ವಾಹನವನ್ನು ಸುಗಮವಾಗಿ ಸಾಗಿಸಲು ಸಾಧ್ಯವಾಗದೆ ಹಿಡಿ ಶಾಪ ಹಾಕುವ ಪರಿಸ್ಥಿತಿ ಎದುರಾಗಿದೆ. ಅಲ್ಲಲ್ಲಿ ಡಾಮರು ಕಿತ್ತು ಹೋಗಿದ್ದು ಯಾವುದೇ ಕ್ಷಣದಲ್ಲೂ ಅಪಾಯಕ್ಕೆ ಕಾರಣವಾಗುವಂತಿದೆ.
ಮಳೆ ಆರಂಭಕ್ಕೆ ಮುನ್ನವೇ ಹೊಂಡ ಗುಂಡಿ ಬಿದ್ದು ಶೋಚನೀಯ ಸ್ಥಿತಿಯಲ್ಲಿರುವ ರಸ್ತೆ ದುರಸ್ತಿಗಾಗಿ ವಿವಿಧ ಸಂಘ ಸಂಸ್ಥೆಗಳು ಹಲವು ಬಾರಿ ಲೋಕೋಪಯೋಗಿ ಇಲಾಖೆಯನ್ನು ಆಗ್ರಹಿಸಿದ್ದರೂ ರಸ್ತೆ ದುರಸ್ತಿ ಮಾಡದಿರುವುದರಿಂದ ರಸ್ತೆ ಮತ್ತಷ್ಟು ಕೆಟ್ಟು ಹೋಗಲು ಕಾರಣವಾಯಿತು. ರಸ್ತೆ ಹೊಂಡ ಮುಚ್ಚಿ ಶೀಘ್ರವೇ ದುರಸ್ತಿಗೊಳಿಸದಿದ್ದಲ್ಲಿ ಚಳವಳಿ ನಡೆಸಲು ನೇತೃತ್ವ ನೀಡಲಾಗುವುದು ಎಂದು ಸ್ಥಳೀಯರು ಮುನ್ನೆಚ್ಚರಿಕೆ ನೀಡಿದ್ದಾರೆ.
Related Articles
Advertisement
ಪಾದಚಾರಿಗಳಿಗೂ ಕಂಟಕ ರಸ್ತೆ ಬದಿಯಲ್ಲಿ ನಡೆದು ಹೋಗುವವರ ಮೇಲೂ ವಾಹನಗಳಿಂದ ಕೆಸರು ನೀರಿನ ಅಭಿಷೇಕ ದಿನಂಪ್ರತಿ ನಡೆಯುತ್ತಿದೆ. ಇಂತಹ ಸಂದರ್ಭಗಳಲ್ಲಿ ಪಾದಚಾರಿಗಳು ವಾಹನ ಚಾಲಕರಿಗೆ ಹಿಡಿ ಶಾಪ ಹಾಕುವುದನ್ನೂ ನೋಡಬಹುದು. ರಸ್ತೆ ಹೊಂಡವನ್ನು ತಪ್ಪಿಸಲು ರಸ್ತೆಯ ಪಕ್ಕಕ್ಕೆ ಸರಿಯುವ ವಾಹನಗಳು ಕಾಲ್ನಡಿಗೆ ಯಲ್ಲಿ ಸಾಗುವ ದಾರಿಹೋಕರಿಗೆ ಢಿಕ್ಕಿ ಹೊಡೆಯುವುದೂ ಇದೆ. ಹೊಂಡಗುಂಡಿ ರಸ್ತೆಯಲ್ಲಿ ಸುಗಮವಾಗಿಸಾಗಲು ಸಾಧ್ಯವಾಗದಿರುವುದರಿಂದ ಸಾರಿಗೆ ಬಸ್‌ಗಳು ಹಾಗೂ ಖಾಸಗಿ ಬಸ್‌ಗಳಿಗೆ ನಿಗದಿತ ಸಮಯದಲ್ಲಿ ತಲುಪಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಹೊಂಡಗುಂಡಿಗಳಿಲ್ಲದಿದ್ದಲ್ಲಿ ಅತ್ಯಂತ ವೇಗದಲ್ಲಿ ಬಸ್‌ಗಳನ್ನು ಓಡಿಸುವುದರಿಂದಾಗಿ ವಾಹನ ಅಪಘಾತಕ್ಕೂ ಕಾರಣವಾಗುತ್ತಿದೆ. ಈ ರಸ್ತೆಯಲ್ಲಿ ವಾಹನ ಅಪಘಾತ ಸಂಭವಿಸದ ದಿನಗಳೇ ಇಲ್ಲ. ಹೀಗಿದ್ದರೂ ಸಂಬಂಧಪಟ್ಟವರು ಈ ರಸ್ತೆಯ ಬಗ್ಗೆ ಗಮನ ಹರಿಸಿಲ್ಲ. ಅವಗಣನೆಗೆ ತುತ್ತಾಗಿರುವ ಈ ರಸ್ತೆ ದುರಸ್ತಿ ಕಾರ್ಯ ನಡೆಯುವುದಾದರೂ ಎಂದು? ಚೆರ್ಕಳದಿಂದ ಬದಿಯಡ್ಕ, ಪೆರ್ಲ, ವಿಟ್ಲ ದಾರಿಯಾಗಿ ಕಲ್ಲಡ್ಕಕ್ಕೆ ಬಸ್ ಸರ್ವೀಸ್ ಇದೇ ರಸ್ತೆಯಲ್ಲಿ ನಡೆಸುತ್ತಿದೆ. ಈ ರಸ್ತೆಯಲ್ಲಿ ಕೇರಳ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳು, ಖಾಸಗಿ ಬಸ್‌ಗಳು ಸಹಿತ ನೂರರಷ್ಟು ಬಸ್‌ಗಳು ಪ್ರತಿದಿನ ಸರ್ವೀಸ್ ನಡೆಸುತ್ತಿವೆ. ಇದಲ್ಲದೆ ನೂರಾರು ಖಾಸಗಿ ಶಾಲಾ ಬಸ್‌ಗಳು ಮತ್ತು ಇತರ ವಾಹನಗಳೂ ಇದೇ ರಸ್ತೆಯಲ್ಲಿ ಸಾಗುತ್ತಿವೆ. ಕಾಸರಗೋಡು, ಚೆರ್ಕಳಕ್ಕೆ ತಲುಪಬೇಕಾದ ಪೆರ್ಲ, ಬದಿಯಡ್ಕ, ನೆಲ್ಲಿಕಟ್ಟೆ, ಮುಳ್ಳೇರಿಯ ಮೊದಲಾದೆಡೆಗಳಲ್ಲಿರುವ ಸಾವಿರಾರು ಪ್ರಯಾಣಿಕರು ಬಹುತೇಕ ಆಶ್ರಯಿಸುವುದು ಇದೇ ರಸ್ತೆಯನ್ನು. ಎಡನೀರು ಜಂಕ್ಷನ್‌ನ ವಿವಿಧೆಡೆಗಳಲ್ಲಿ ರಸ್ತೆ ಕಾಂಕ್ರೀಟು ಮಾಡಿದ್ದು ಉಳಿದ ಭಾಗಗಳಲ್ಲಿ ರಸ್ತೆ ಸ್ಥಿತಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ರಸ್ತೆಯಲ್ಲಿ ಹೊಂಡಗಳದ್ದೇ ಸಾಮ್ರಾಜ್ಯ. ರಸ್ತೆ ದಯನೀಯ ಸ್ಥಿತಿಯಲ್ಲಿರುವುದರಿಂದ ಆಟೋ ರಿಕ್ಷಾ, ಟ್ಯಾಕ್ಸಿಗಳು ಬಾಡಿಗೆಗೆ ಸರ್ವೀಸ್ ನಡೆಸಲು ನಿರಾಕರಿಸುತ್ತಿವೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ. ರಸ್ತೆಯಲ್ಲಿ ಸರ್ವೀಸ್ ಮಾಡುವ ಬಸ್‌ಗಳ ಬಿಡಿಭಾಗಗಳು ಪದೇ ಪದೇ ಕೆಟ್ಟು ಹೋಗುವುದರಿಂದ ಆಗಾಗ ಬಸ್ ಸರ್ವೀಸ್ ಮೊಟಕುಗೊಳ್ಳುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. – ಪ್ರದೀಪ್ ಬೇಕಲ್