ಭಟ್ಕಳ: ಇಲ್ಲಿನ ಗ್ರಾಮ ದೇವತೆ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವವು ರಾಮನವಮಿಯ ಪರ್ವಕಾಲದಲ್ಲಿ ಭಕ್ತರ ಹರ್ಷೊದ್ಘಾರಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವಕ್ಕೆ ಯುಗಾದಿಯ ಮಾರನೆಯ ದಿನದಂದು ವಿವಿಧ ಧಾರ್ಮಿಕ ವಿಧಿ ವಿದಾನಗಳೊಂದಿಗೆ ಗರುಡನ ಪಟವನ್ನು ಧ್ವಜಸ್ತಂಭಕ್ಕೆ ಕಟ್ಟುವ ಮೂಲಕ ಚಾಲನೆ ನೀಡಲಾಗಿತ್ತು. ಪ್ರತಿ ದಿನವೂ ಕೂಡಾ ಒಂದೊಂದು ಉತ್ಸವವ ನಡೆದು, ಸಪ್ತಮಿ ಹಾಗೂ ಅಷ್ಟಮಿಯಂದು ಹೂವಿನ ರಥೋತ್ಸವ ನಡೆಯಿತು. ರಾಮನವಮಿಯಂದು ಬೆಳಿಗ್ಗೆ ದೇವರು ರಥಾರೋಹಣ ಮಾಡುವ ಮೂಲಕ ಬೆಳಿಗ್ಗೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದ್ದು ಸಂಜೆ ಸಾವಿರಾರು ಭಕ್ತರ ಹರ್ಷೋದ್ಘಾರಗಳ ನಡುವೆ ರಥೋತ್ಸವ ನಡೆಯಿತು.
ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ರಥೋತ್ಸವದ ಕಾರ್ಯಗಳು ಸಾಂಗವಾಗಿ ನೆರವೇರುವಂತೆ ನೋಡಿಕೊಂಡರು. ದೇವಸ್ಥಾನದ ರಥೋತ್ಸವ ಕಾರ್ಯದ ಧಾರ್ಮಿಕ ವಿಧಿ ವಿದಾನಗಳನ್ನು ವೇ.ಮೂ. ರಮಾನಂದ ಅವಭೃತ ಅವರ ನೇತೃತ್ವದ ಅರ್ಚಕರ ತಂಡ ನೆರವೇರಿಸಿದರು. ದೇವಸ್ಥಾನದ ಅರ್ಚಕ ವಿನಾಯಕ ಭಟ್ಟ ಅವರು ದೇವರ ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ರಥೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಸುನಿಲ ನಾಯ್ಕ, ಮಾಜಿ ಶಾಸಕ ಮಂಕಾಳ ಎಸ್. ವೈದ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಧರ ಮೊಗೇರ, ಶಿವರಾಮ ನಾಯ್ಕ, ನಾಗೇಶ ಪೈ, ಪ್ರಮುಖರಾದ ವಸಂತ ಖಾರ್ವಿ, ಸುರೇಂದ್ರ ಭಟ್ಕಳ, ಗೋವಿಂದ ನಾಯ್ಕ, ರಾಜೇಶ ನಾಯ್ಕ, ಈಶ್ವರ ಎನ್. ನಾಯ್ಕ, ಎಂ.ಆರ್. ನಾಯ್ಕ, ಕೃಷ್ಣಾ ನಾಯ್ಕ ಆಸರಕೇರಿ, ರಘುವೀರ ಬಾಳ್ಗಿ, ಶಾಂತಾರಾಮ ಭಟ್ಕಳ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಾತ್ರೆಯ ಪ್ರಯುಕ್ತ ಬಂದೋಬಸ್ತ್‍ಗಾಗಿ ಹೆಚ್ಚುವರಿ ಎಸ್.ಪಿ. ಬದರೀನಾಥ, ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ, ಅರವಿಂದ ಕಲಗುಜ್ಜಿ, ನಗರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ದಿವಾಕರ ಪಿ.ಎಂ., ಗ್ರಾಮೀಣ ಸರ್ಕಲ್ ಇನ್ಸಪೆಕ್ಟರ್ ಮಹಾಬಲೇಶ್ವರ ನಾಯ್ಕ, ವಿವಿಧ ಭಾಗಗಳಿಂದ ಆಗಮಿಸಿದ ಸರ್ಕಲ್ ಇನ್ಸಪೆಕ್ಟರ್‍ಗಳು, ಸಬ್ ಇನ್ಸಪೆಕ್ಟರ್‍ಗಳು ಹಾಗೂ ಸಿಬ್ಬಂದಿಗಳು ಬಂದೋಬಸ್ತ ಕಾರ್ಯ ನೆರವೇರಿಸಿದರು.
ಇದನ್ನೂ ಓದಿ : ರಾಮನವಮಿಯ ಶುಭ ದಿನ : ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲ ಗೆಹ್ಲೋಟ್
ಸೌಹಾರ್ಧತೆಯ ಸಂಕೇತ ಭಟ್ಕಳ ರಥೋತ್ಸವ, ಮುಸ್ಲಿಂ ಕುಟುಂಬಕ್ಕೆ ವಿಶೇಷ ಆಹ್ವಾನ: ಚೆನ್ನಪಟ್ಟಣ ಹನುಮಂತ ದೇವಸ್ಥಾನಕ್ಕೆ 1500ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ದೇವಸ್ಥಾನವನ್ನು ಚೆನ್ನಭೈರಾದೇವಿ ಜೀರ್ಣೋದ್ಧಾರ ಮಾಡಿ ಜಮೀನು ಉಂಬಳಿ ಬಿಟ್ಟ ಬಗ್ಗೆ ಕೂಡಾ ಉಲ್ಲೇಖವಿದೆ. ಹಿಂದೆ 1947ಕ್ಕೂ ಪೂರ್ವದಲ್ಲಿ ಇದ್ದ ಕಲೆಕ್ಟರ್ ಓರ್ವರು ರಥೋತ್ಸವವನ್ನು ನಡೆಸುವುದಕ್ಕೆ ಅಡ್ಡಿ ಪಡಿಸಿದ್ದರೆನ್ನಲಾಗಿದೆ. ರಥದ ಗಾಲಿಗಳು ಶಿಥಿಲವಾಗಿದ್ದರಿಂದ ರಥವನ್ನು ಎಳೆಯ ಕೂಡದು, ಆದರೆ ರಥೋತ್ಸವದ ಪೂರ್ವಭಾವಿ ಧಾರ್ಮಿಕ ಕಟ್ಟಲೆಗಳನ್ನು ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಆದೇಶ ಮಾಡಿದ್ದರೆನ್ನಲಾಗಿದೆ.
ಆಗ ಸಮಾಜದ ಮುಖಂಡರು ಕೆಲವರು ಕಲೆಕ್ಟರ್ ಅವರ ಬಳಿ ಮನವಿ ಮಾಡಿಕೊಂಡಾಗ ರಥದ ಗಾಲಿಯು ಶಿಥಿಲವಾಗಿದ್ದು ರಥೋತ್ಸವದ ವೇಳೆಯಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿಮ್ಮಲ್ಲಿ ಯಾರಾದರೂ ತಯಾರಿದ್ದರೆ ಮಾತ್ರ ಪರವಾನಿಗೆ ನೀಡುವುದಾಗಿ ಹೇಳಿದ್ದರಂತೆ. ಆಗ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವರು ಹಾಕಿದ ಶರತ್ತಿನಂತೆ ಆ ಕಾಲದಲ್ಲಿ ಅಷ್ಟೊಂದು ಆಸ್ತಿ ಹೊಂದಿದವರು ಯಾರು ಇಲ್ಲವಾಗಿದ್ದರಿಂದ ಮತ್ತೆ ಸಂಕಷ್ಟ ಎದುರಾಗಿತ್ತು. ಆದರೆ ಈ ಸುದ್ದಿ ತಿಳಿದ ಸುಲ್ತಾನ್ ಸ್ಟ್ರೀಟ್‍ನಲ್ಲಿರುವ ಚರ್ಕಿನ್ ಕುಟುಂಬದ ಪ್ರಮುಖರೋರ್ವರು ತಾವು ಜಾಮೀನು ನಿಲ್ಲುವುದಾಗಿ ಹೇಳಿದ್ದರಂತೆ ಅಲ್ಲದೆ ಯಾವುದೇ ಅನಾಹುತವಾದರೆ ಸರಕಾರಕ್ಕೆ ನಷ್ಟವನ್ನು ಭರಿಸಲು ಸಿದ್ದನಿದ್ದೇನೆ ಎಂದು ಹೇಳಿದ್ದರಿಂದ ಇವರ ಮಾತಿಗೆ ಒಪ್ಪಿದ ಬಳಿಕ ರಥೋತ್ಸವ ಸಾಂಗವಾಗಿ ನಡೆಯಿತು ಎನ್ನುವುದು ಇತಿಹಾಸ.
ಮುಂದಿನ ವರ್ಷದಿಂದ ಹೊಸ ಗಾಲಿಗಳೊಂದಿಗೆ ರಥೋತ್ಸವ ಸಾಂಗವಾಗಿ ನಡೆಯಿತಾದರೂ ಸಂಕಷ್ಟದ ಕಾಲದಲ್ಲಿ ಜಾಮೀನು ನಿಂತಿದ್ದ ಕುಟುಂಬಕ್ಕೆ ಪ್ರತಿ ವರ್ಷವೂ ದೇವಸ್ಥಾನದ ಪ್ರಮುಖರು ವಾದ್ಯದೊಂದಿಗೆ ಹೋಗಿ ಅವರಿಗೆ ಹೂವು ಹಣ್ಣು ಕೊಟ್ಟು ರಥೋತ್ಸವಕ್ಕೆ ಆಹ್ವಾನ ಮಾಡಿ ಬರುವ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ. ಅದೇ ರೀತಿಯಾಗಿ ಈ ವರ್ಷವೂ ಕೂಡಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಧರ ಮೊಗೇರ ಅವರ ನೇತೃತ್ವದಲ್ಲಿ ಪ್ರಮುಖರು ಹೋಗಿ ಅನ್ಸಾರಿ ಶಾಬಂದ್ರಿ ಚಿರ್ಕನ್ ಅವರ ಕುಟುಂಬಕ್ಕೆ ಆಹ್ವಾನ ಕೊಟ್ಟು ಬಂದರು. ಈ ಸಂದರ್ಭದಲ್ಲಿ ಕುಟುಂಬದ ಇನಾಯತುಲ್ಲಾ ಶಾಬಂದ್ರಿ, ಜೇಲಾನಿ ಶಾಬಂದ್ರಿ ಮುಂತಾದವರು ಉಪಸ್ಥಿತರಿದ್ದರು. ಅದೇ ರೀತಿಯಾಗಿ ಜೈನ ಕುಟುಂಬ ಮತ್ತು ಪ್ರಭು ಕುಟುಂಬಕ್ಕೂ ಕೂಡಾ ವರ್ಷಂಪ್ರತಿಯಂತೆ ಆಹ್ವಾನ ನೀಡಲಾಯಿತು.