Advertisement

Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ

12:37 PM Oct 30, 2024 | Team Udayavani |

ರಾಮನಗರ: ಬೊಂಬೆಗಳ ತಯಾರಿಕೆ ಮೂಲಕ ವಿಶ್ವವಿಖ್ಯಾತಿ ಪಡೆದಿರುವ ಚನ್ನಪಟ್ಟಣದ ಉಪಚು­ನಾವಣಾ ಅಖಾಡ ದಿನೇ ದಿನೆ ರಂಗೇರುತ್ತಿದೆ. ಕೇಂದ್ರ ಸಚಿವ ಎಚ್‌.ಡಿ.­­ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ನಡುವಿನ ರಾಜಕೀಯ ಚದುರಂಗದಾಟಕ್ಕೆ ಇದೀಗ ಭೂಮಿಕೆ ಸಿದ್ಧವಾಗಿದೆ.

Advertisement

ರಾಜಕೀಯ ಮೇಲಾಟಗಳಿಗೆ ಮೊದಲಿನಿಂ­ದಲೂ ಖ್ಯಾತಿಪಡೆದಿರುವ ಚನ್ನಪಟ್ಟಣ, ಇದೀಗ 3ನೇ ಉಪಚುನಾವಣೆಗೆ ಸಜ್ಜಾಗಿದೆ. 2008ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾ ಸಿದ್ದ ಯೋಗೇಶ್ವರ್‌ ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ 2009 ಉಪಚುನಾವಣೆ ಎದುರಾಗಿತ್ತು. ಈ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಎಂ.ಸಿ.ಅಶ್ವತ್ಥ್ ಗೆಲುವು ಸಾಧಿಸಿದ್ದರು.

ಬಳಿಕ 2010ರಲ್ಲಿ ತಮ್ಮ ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಎಂ.ಸಿ.ಅಶ್ವತ್ಥ್ ಪಕ್ಷಾಂತರಗೊಂಡ ಹಿನ್ನೆಲೆಯಲ್ಲಿ ಮತ್ತೂಮ್ಮೆ ಉಪಚುನಾವಣೆ ಎದುರಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿಯಿಂದಸ್ಪರ್ಧೆಮಾಡಿದ್ದ ಯೋಗೇಶ್ವರ್‌ ಗೆಲುವು ಸಾ ಸಿದರು. ಕ್ಷೇತ್ರದ ಶಾಸಕರಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಇದೀಗ 3ನೇ ಬಾರಿಗೆ ಉಪಚುನಾವಣೆ ಎದುರಾಗಿದೆ.

ಕ್ಷೇತ್ರದ ಇತಿಹಾಸ: ಗಂಗರ ಉಪರಾಜಧಾನಿಯಾಗಿದ್ದ ಚನ್ನಪಟ್ಟಣ ತನ್ನದೇ ಆದ ಐತಿಹಾಸಿಕ ಪರಂಪರೆ ಹೊಂದಿದೆ. ವಿಜಯನಗರ ಕಾಲದಲ್ಲಿ ಪ್ರಭಾವಿ ಪಾಳೇಗಾರನಾಗಿ ಸೇಲಂ ವರೆಗೆ ತನ್ನ ಪಾಳೆಪಟ್ಟು ವಿಸ್ತರಿಸಿದ್ದ ಜಗದೇವರಾಯ ಆಳಿದ ಚನ್ನಪಟ್ಟಣ ಇತಿಹಾಸಕಾಲದಿಂದಲೂ ರಾಜಕೀಯವಾಗಿ ಮಹತ್ವ ಪಡೆದ ಸ್ಥಳ. ಗಂಗರ ಜೊತೆಗೆ ಚೋಳರು ಇಲ್ಲಿ ಕೆಲಕಾಲ ಆಡಳಿತ ನಡೆಸಿದ್ದು, ಹೊಯ್ಸಳರು, ಮೈಸೂರು ಅರಸರು, ಟಿಪ್ಪು ಸುಲ್ತಾನ್‌ ಆಳ್ವಿಕೆಯ ಕುರುಹುಗಳು ಇಲ್ಲಿವೆ.

ಇಲ್ಲಿ ನಡೆದ ಕೋಮುಗಲಭೆ ಸಿಎಂ ವೀರೇಂದ್ರಪಾಟೀಲ್‌ ಕುರ್ಚಿ ಅಲುಗಾಡಿಸಿದ ಇತಿಹಾಸವಿದೆ. ದೇವೇಗೌಡರಿಗೆ ರಾಜಕೀಯ ಮರುಜನ್ಮ ನೀಡಿದ ನೀರಾ ಹೋರಾಟ ಹೀಗೆ ಮೊದಲಿನಿಂದಲೂ ಚನ್ನಪಟ್ಟಣ ರಾಜಕೀಯ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ. ರಾಜ್ಯದ ಮೊದಲ ವಿದ್ಯಾಮಂತ್ರಿ ಯಾಗಿದ್ದ ವಿ.ವೆಂಕಟಪ್ಪ, ವಿರೋಧಪಕ್ಷದ ನಾಯಕರಾಗಿದ್ದ ಬಿ.ಕೆ.ಪುಟ್ಟರಾಮಯ್ಯ, ಮಾಜಿ ಮಂತ್ರಿ ಎಂ.ವರದೇಗೌಡ, ದೇವೇಗೌಡರ ಸಮಕಾಲೀನರಾಗಿದ್ದು ಸಂಸ್ಥಾಕಾಂಗ್ರೆಸ್‌ನಲ್ಲಿ ಪ್ರಮುಖ ನಾಯಕರಾಗಿದ್ದ ಬಿ.ಜೆ.ಲಿಂಗೇಗೌಡ ಹೀಗೆ ಹಲವಾರು ಪ್ರಮುಖ ರಾಜಕಾರಣಿಗಳನ್ನು ನಾಡಿಗೆ ನೀಡಿರುವ ಹಿರಿಮೆ ಚನ್ನಪಟ್ಟಣ ಕ್ಷೇತ್ರದ್ದಾಗಿದೆ.

Advertisement

ಕಾಂಗ್ರೆಸ್‌- ಜನತಾಪರಿವಾರದ ಅಖಾಡ:
ಚನ್ನಪಟ್ಟಣ ಕ್ಷೇತ್ರದಲ್ಲಿ ಹಿಂದಿನಿಂದಲೂ ಕಾಂಗ್ರೆಸ್‌ ಮತ್ತು ಜನತಾಪರಿವಾರದ ನಡುವಿನ ರಾಜಕೀಯ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಲೇ ಬಂದಿದೆ. 1952 ರಿಂದ ಇದುವರೆಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ 16 ಸಾರ್ವತ್ರಿಕ ಚುನಾವಣೆ 2 ಉಪಚುನಾವಣೆಯನ್ನು ಎದುರಿಸಿ ಇದೀಗ 19ನೇ ಚುನಾವಣೆಗೆ ಸಜ್ಜಾಗಿದೆ. ಇದುವರೆಗೆ ನಡೆದಿರುವ ಚುನಾವಣೆಗಳಲ್ಲಿ 7 ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವುಸಾಧಿಸಿದ್ದರೆ, 6 ಬಾರಿ ಜನತಾಪರಿವಾರ ಗೆಲುವು ಸಾಧಿಸಿದೆ.

ಉಳಿದಂತೆ 2 ಬಾರಿ ಪಕ್ಷೇತರ ಅಭ್ಯರ್ಥಿಗಳು, ಬಿಜೆಪಿ, ಎಸ್ಪಿ ಅಭ್ಯರ್ಥಿಗಳು ತಲಾ ಒಂದುಬಾರಿ ಗೆಲುವು ಸಾಧಿಸಿದ್ದಾರೆ. ಪಕ್ಷೇತರಾಗಿ 1967ರಲ್ಲಿ ಗೆದ್ದಿದ್ದ ಟಿ.ವಿ. ಕೃಷ್ಣಪ್ಪ ಮತ್ತೆ ಕಾಂಗ್ರೆಸ್‌ ಸೇರಿದರೆ, 1999ರಲ್ಲಿ ಪಕ್ಷೇತರವಾಗಿ, 2013ರಲ್ಲಿ ಸಮಾಜವಾದಿ ಪಕ್ಷದಿಂದ ಗೆಲುವು ಸಾಧಿಸಿದ ಯೋಗೇಶ್ವರ್‌ ಬಳಿಕ ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡರು.

ಒಕ್ಕಲಿಗರ ಭದ್ರಕೋಟೆಯಲ್ಲಿ ಅಹಿಂದ ಮತಗಳೇ ನಿರ್ಣಾಯಕ
ಚನ್ನಪಟ್ಟಣ ಕ್ಷೇತ್ರ ಒಕ್ಕಲಿಗರ ಶಕ್ತಿಕೇಂದ್ರ ಎನಿಸಿದೆಯಾದರೂ ಇಲ್ಲಿ ಅಹಿಂದ ಮತಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಈ ಮತಗಳು ಯಾರತ್ತ ವಾಲುತ್ತವೆ ಎಂಬುದರ ಮೇಲೆ ಫಲಿತಾಂಶ ನಿರ್ಣಯ­ವಾಗಲಿದೆ. ಚನ್ನಪಟ್ಟಣದಲ್ಲಿ 5 ಬಾರಿ ಗೆಲುವು ಸಾಧಿಸಿದ್ದ ಯೋಗೇಶ್ವರ್‌ ಬಿಜೆಪಿಯಲ್ಲಿ ಸೋಲಲು ಪ್ರಮುಖ ಕಾರಣ ಅಹಿಂದ ಮತಗಳು ಅವರಿಂದ ದೂರವಾಗಿದ್ದು.

2.32 ಲಕ್ಷ ಮತದಾರರಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ 1.10 ಲಕ್ಷ ದಷ್ಟು ಒಕ್ಕಲಿಗ ಮತದಾರರು ಇದ್ದರೆ, 1 ಲಕ್ಷಕ್ಕೂ ಅಧಿಕ ಅಹಿಂದ ಮತಗಳಿವೆ. 30 ಸಾವಿರದಷ್ಟಿರುವ ಮುಸ್ಲಿಮರು, 45 ಸಾವಿರದಷ್ಟಿರುವ ದಲಿತ ಮತಗಳನ್ನು ಕಾಂಗ್ರೆಸ್‌ ಬುಟ್ಟಿಯಿಂದ ಕಸಿಯಲು ಎನ್‌ಡಿಎ ಕಸರತ್ತು ನಡೆಸುತ್ತಿದ್ದರೆ, ತಮ್ಮ ಮತಬ್ಯಾಂಕ್‌ ಚದುರದಂತೆ ಕಾಂಗ್ರೆಸ್‌ ಕಣ್ಗಾವಲಿರಿಸಿದೆ.

ಎಚ್‌ಡಿಕೆ ಕುಟುಂಬ- ಸಿಪಿವೈ ನಡುವೆ ಹಣಾಹಣಿ
ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಕುಟುಂಬದ ನಡುವೆ ಇದೀಗ 5ನೇ ಬಾರಿಗೆ ನೇರ ಹಣಾಹಣಿ ಎದುರಾಗಿದೆ. ಇಬ್ಬರು ಎರಡು ಬಾರಿ ಪರಾಜಿತರಾಗಿದ್ದು, 3ನೇ ಬಾರಿಗೆ ಅದೃಷ್ಟಪರೀಕ್ಷೆಗಿಳಿದಿದ್ದಾರೆ.

– ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next