Advertisement

Dengue Fever; ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಡೆಂಗ್ಯೂ

01:36 AM May 05, 2024 | Team Udayavani |

ಪುಂಜಾಲಕಟ್ಟೆ: ಮಳೆಗಾಲ ಆರಂಭಕ್ಕೂ ಮುನ್ನವೇ ಡೆಂಗ್ಯೂ ಜ್ವರದ ಹಾವಳಿ ಆರಂಭವಾಗಿದ್ದು, ಬಂಟ್ವಾಳ ತಾಲೂಕಿನ ಹಲವೆಡೆ ಪತ್ತೆಯಾಗಿದೆ.

Advertisement

ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೊಡಂಬೆಟ್ಟು ಗ್ರಾಮದ ಬಾಂಬಿಲ ಸಮೀಪದ ಗಟ್ಲೆಕೋಡಿ, ಮುಂಡಬೈಲು ಎಂಬಲ್ಲಿ ಗ್ರಾಮಸ್ಥರಿಗೆ ಜ್ವರ ಬಾಧಿಸಿದ್ದು, ಪುಂಜಾಲಕಟ್ಟೆ ಪ್ರಾ.ಆ. ಕೇಂದ್ರದಲ್ಲಿ ಪರೀಕ್ಷಿಸಿದ ಒಬ್ಬರಲ್ಲಿ ಶಂಕಿತ ಡೆಂಗ್ಯೂ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿಯೂ ಮೂವರಿಗೆ ಡೆಂಗ್ಯೂ ದೃಢಪಟ್ಟಿದೆ. ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಔಷಧ ಪಡೆದು ಗುಣಮುಖರಾಗಿರುವುದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಡೆಂಗ್ಯೂ ಜ್ವರ ದಾಖಲಾದ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.

ಇತ್ತೀಚೆಗೆ ಹಲವೆಡೆ ಮಳೆ ಬಂದಿದ್ದು, ತೆಂಗಿನಚಿಪ್ಪು ಮುಂತಾದ ವಸ್ತುಗಳಲ್ಲಿ ನೀರು ನಿಂತಿರುವುದು ಸೊಳ್ಳೆ ಉತ್ಪಾದನೆಗೆ ಕಾರಣವಾಗಿದೆ. ಗಟ್ಲಕೋಡಿ, ಮುಂಡಬೈಲಿನ ಮನೆಯೊಂದರ ಅಂಗಳದಲ್ಲಿ ಉಪಯೋಗಿಸಿದ ಸೀಯಾಳದ ಚಿಪ್ಪುಗಳನ್ನು ರಾಶಿ ಹಾಕಲಾಗಿದ್ದು, ಇದರಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿ ಡೆಂಗ್ಯೂ ಸಹಿತ ಸಾಂಕ್ರಾಮಿಕ ರೋಗ ಹರಡಿರುವ ಭೀತಿ ಗ್ರಾಮಸ್ಥರಲ್ಲಿ ಕಾಡಿದೆ. ಈ ತ್ಯಾಜ್ಯ ರಾಶಿ ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಸ್ಥಳೀಯರು ಚೆನ್ನೈತ್ತೋಡಿ ಗ್ರಾ.ಪಂ.ಗೆದೂರು ನೀಡಿದ್ದು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜೋಯಲ್‌ ಪ್ರಶಾಂತ್‌ ಅವರು ಸ್ಥಳ ಪರಿಶೀಲಿಸಿ ವಾಮದಪದವು ಸಮುದಾಯ ಆಸ್ಪತ್ರೆಗೆ ತಿಳಿಸಿದ್ದಾರೆ. ಅಲ್ಲಿನ ವೈದ್ಯಾಧಿಕಾರಿ ಡಾ| ಉಮೇಶ್‌ ಅಡ್ಯಂತಾಯಆವರು ಆಶಾ ಕಾರ್ಯಕರ್ತೆಯರೊ ಡನೆ ಭೇಟಿ ನೀಡಿ ಇಂತಹ ಸ್ಥಳದಲ್ಲಿ ಲಾರ್ವಾ ಉತ್ಪತ್ತಿಯಾಗುವ ಸಾಧ್ಯತೆ ಇರುವುದರಿಂದ ಕೂಡಲೇ ಅಲ್ಲಿಂದ ತೆರವು ಮಾಡುವಂತೆ ತಿಳಿಸಿದ್ದಾರೆ.

ಗ್ರಾಮೀಣ ರಸ್ತೆಗಳು, ಜಿಲ್ಲಾ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಸಹಿತ ಬಹುತೇಕ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲೇ ಕಸಕಡ್ಡಿ, ತ್ಯಾಜ್ಯಗಳು ತಂದು ರಾಶಿ ಹಾಕುತ್ತಿದ್ದು, ಕೀಟಜನ್ಯ ಸಾಂಕ್ರಾಮಿಕ ರೋಗಗಳ ಉಗಮಕ್ಕೆ ಕಾರಣವಾಗುತ್ತದೆ. ಡೆಂಗ್ಯೂ ನಿರ್ಮೂಲನಕ್ಕೆ ಫಾಗಿಂಗ್‌ ನಡೆಸು ವುದು ತಾತ್ಕಾಲಿಕ ಪರಿಹಾರವಾದರೂ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ನೀರು ನಿಲ್ಲದಂತೆ ಜಾಗ್ರತೆ ವಹಿಸ ಬೇಕಾಗಿದೆ. ತೋಟಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕಾಗಿದೆ.

ಡೆಂಗ್ಯೂ ಮೊದಲಾದ ಕೀಟಜನ್ಯ ಸಾಂಕ್ರಾಮಿಕ ರೋಗಗಳ ಬಗ್ಗೆ ಕರಪತ್ರಗಳ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಲಾಗಿದೆ. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖಾ ಸಿಬಂದಿ ಮನೆಗಳಿಗೆ ತೆರಳಿ ಡೆಂಗ್ಯೂ ತಡೆಗೆ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮಾಹಿತಿ ನೀಡುತ್ತಿದ್ದಾರೆ. ಪತ್ತೆಯಾದ ಮೂರೂ ಪ್ರಕರಣಗಳಲ್ಲಿಯೂ ರೋಗಿಗಳು ಚೇತರಿಸಿಕೊಂಡಿದ್ದಾರೆ.
– ಡಾ| ಉಮೇಶ್‌ ಅಡ್ಯಂತಾಯ, ವೈದ್ಯಾಧಿಕಾರಿ,
ಪ್ರಾ.ಆ. ಕೇಂದ್ರ ವಾಮದಪದವು

Advertisement
Advertisement

Udayavani is now on Telegram. Click here to join our channel and stay updated with the latest news.

Next