ಚನ್ನಗಿರಿ: ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ ಮುರಾರ್ಜಿ ವಸತಿ ಶಾಲೆ ಮತ್ತು ವಿದ್ಯಾರ್ಥಿಗಳ ವಸತಿ ಗೃಹಕ್ಕೆ ಚನ್ನಗಿರಿ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಬಸವರಾಜು ವಿ ಶಿವಗಂಗಾ ರವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕರು ಕಾಲಿಡುತ್ತಿದ್ದಂತೆ ದೂರುಗಳ ಸುರಿಮಳೆ ಕೇಳಿ ಬಂದವು. ಶಾಲಾ ದಾಖಲಾತಿಯಲ್ಲಿ ಚನ್ನಗಿರಿ ತಾಲ್ಲೂಕಿನ ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ ಬೇರೆ ಜಿಲ್ಲೆ ಮತ್ತು ತಾಲ್ಲೂಕುಗಳ ವಿದ್ಯಾರ್ಥಿಗಳನ್ನು ದಾಖಲಿಸಲಾಗಿದೆ.ಶಾಲೆಯ ಅವ್ಯವಸ್ಥೆ ಮತ್ತು ದುರಾಡಳಿ ಕಂಡು ಕೆಂಡಾ ಮಂಡಲರಾದ ಶಾಸಕರು ಮುರಾರ್ಜಿ ಶಾಲೆಯ ಪ್ರಾಂಶುಪಾಲರಿಗೆ ವಸತಿ ನಿಲಯದ ವಾರ್ಡನ್ ರವರಿಗೆ ತೀವ್ರ ತರಾಟೆ ತೆಗೆದುಕೊಂಡರು.
ಕಬೋರ್ಡ್ ಗಳ ರಿಪೇರಿಗೆ 5 ಲಕ್ಷ ಅನುದಾನ ಬಳಕೆಯಾಗಿದೆ. ಶಿಕ್ಷಕರಿಗೆ ಹಾಗೂ ಅತಿಥಿ ಶಿಕ್ಷಕರಿಗೆ ಸರಿಯಾಗಿ ಯಾವುದೇ ವಿಚಾರಗಳಿಗೆ ಸ್ಪಂದಿಸುವುದಿಲ್ಲ. ಅತಿಥಿ ಶಿಕ್ಷಕರ ಸಂಬಳ ಮೂರು ನಾಲ್ಕು ತಿಂಗಳಗಳಾದರೂ ಸಹ ಆಗಿರುವುದಿಲ್ಲ. 30 ರಿಂದ 40 ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಶಾಸಕರ ಹಾಗೂ ಮೇಲಾಧಿಕಾರಿಗಳ ಹೆಸರುಗಳನ್ನು ಬಳಸಿ ವಿದ್ಯಾರ್ಥಿಯಿಂದ 30 ರಿಂದ 40,000 ರೂ ವಸೂಲಿ ಮಾಡಲಾಗಿದೆ. ಸೀಟುಗಳನ್ನು ಮಾರಾಟ ಮಾಡಿರುವುದರ ಬಗ್ಗೆ ಆರೋಪಿಗಳು ಕೇಳಿ ಬಂದವು.
ಪ್ರತಿದಿನ ಬದನೆಕಾಯಿ, ಸೋರೆಕಾಯಿ, ಹೆಸರುಕಾಳಿನದ್ದೇ ಸಾಂಬರು, ರುಚಿಯೂ ಇಲ್ಲ, ತೆಂಗಿನ ಕಾಯಿಯೂ ಹಾಕಲ್ಲ, ಮಜ್ಜಿಗೆ, ಮುದ್ದೆ, ಚಪಾತಿ, ದೋಸೆ ನೀಡುತ್ತಿಲ್ಲ, ಬರೀ ಚಿತ್ರನ್ನ, ವಾಂಗಿಬಾತ್, ಉಪ್ಪಿಟ್ ಕೊಡ್ತಾರೆ, ಸ್ನಾನಕ್ಕೆ ಬಿಸಿನೀರಿಲ್ಲ ಗುಣಮಟ್ಟದ ಆಹಾರ ಕೊಡುತ್ತಿಲ್ಲ. ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ವಿಶೇಷ ಆಹಾರ ನೀಡಲಾಗುತ್ತಿದೆ. ಚಾರ್ಟ್ ಪ್ರಕಾರ ಆಹಾರ ಪೂರೈಕೆ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು. ಬೆಡ್ ಶೀಟ್ ಹಾಗೂ ತಲೆದಿಂಬು ಗುಣಮಟ್ಟದಿಂದ ಕೂಡಿಲ್ಲ ಈ ಬಗ್ಗೆ ಯಾರೂ ಕೂಡಾ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಶಾಸಕರ ಸಮ್ಮುಖದಲ್ಲಿ ಆರೋಪ ಮಾಡಿದರು. ವಿದ್ಯಾರ್ಥಿನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ, ಊಟ, ಉಪಚಾರದ ಅವ್ಯವಸ್ಥೆ ಸರಿಪಡಿಸುವಂತೆ ವಿದ್ಯಾರ್ಥಿಗಳು ಶಾಸಕರನ್ನು ಕೋರಿದರು.
ಪ್ರಾಂಶುಪಾಲರು ಸಹ ಸರಿಯಾದ ಸಮಯಕ್ಕೆ ಶಾಲೆಗೆ ಬರುವುದಿಲ್ಲ ಯಾವುದೇ ಪೋಷಕರು ಬಂದರು ಸಹ ಸರಿಯಾಗಿ ಸ್ಪಂದಿಸುವುದಿಲ್ಲ.
ಇಲ್ಲಿ ನಡೆಯುವ ಅವ್ಯವಸ್ಥೆ ಬಗ್ಗೆ ವಾರ್ಡನ್‌ಗೆ ಯಾರೇ ಪ್ರಶ್ನಿಸಿದ್ರೆ ಪೋಷಕರಿಗೆ ಫೋನ್ ಮಾಡಿ ನಮ್ಮ ವಿರುದ್ಧ ಇಲ್ಲಸಲ್ಲದ ವಿಷಯ ಹೇಳಿ ಅವರಿಂದ ಬೈಯಿಸ್ತಾರೆ. ಅಲ್ಲದೇ ಹಾಸ್ಟೆಲ್ನಿಂದ ಹೊರಗಾಕ್ತೀವಿ ಅಂತ ಬೆದರಿಸ್ತಾರೆ. ಯಾವುದೇ ಅಧಿಕಾರಿಗಳು ಬಂದರೂ ನಮ್ಮ ಸಮಸ್ಯೆ ಕೇಳಲ್ಲ. ನಮ್ಗೆ ಗುಣಮಟ್ಟದ ಊಟ-ತಿಂಡಿ, ಬಿಸಿನೀರು ಬರುವಂತೆ ಮಾಡಬೇಕು. ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ನಿಲಯದ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಂಡರು.
ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳಿಗೆ ಶಾಸಕರು ಮುರಾರ್ಜಿ ಶಾಲೆ ಮತ್ತು ವಸತಿ ನಿಲಯದ ಅವ್ಯವಸ್ಥೆಯನ್ನು ಮನವರಿಕೆ ಮಾಡಿಕೊಟ್ಟು ಕ್ರಮ ವಹಿಸಲು ಒತ್ತಾಯ ಪಡಿಸಿದರು.
ಇದನ್ನೂ ಓದಿ: BJP ಅಭ್ಯರ್ಥಿಗಳ ಪಟ್ಟಿ ಬಿಡುಗಡೆ;ರಾಜಸ್ಥಾನದಲ್ಲಿ ರಾಜ್ಯವರ್ಧನ್ ಸೇರಿ 7 ಸಂಸದರು ಕಣಕ್ಕೆ