ಮುಂಬಯಿ: ಭಗವಂತನನ್ನು ಸಾಕ್ಷಾತ್ಕರಿಸಬೇಕಾದರೆ ದೇಗುಲಗಳ ಅಗತ್ಯವಿದೆ. ಬಿಎಸ್‌ಕೆಬಿ ಅಸೋಸಿಯೇಶನ್ ಭವ್ಯ ಗೋಕುಲವನ್ನು ನಿರ್ಮಿಸುವುದರೊಂದಿಗೆ ಎಂಟು ಕೋ. ರೂ. ಗಳ ವೆಚ್ಚದಲ್ಲಿ ಶ್ರೀ ಕೃಷ್ಣನ ದೇಗುಲ ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ಕೆ ತುಲಾಭಾರ ಸೇವೆಯಾಗಿದೆ. ಈ ತುಲಾಭಾರ ಸೇವೆಯ ಕಾಣಿಕೆ ಶ್ರೀ ಕೃಷ್ಣನಿಗೆ ಅರ್ಪಣೆಯಾಗಿದೆ. ಸಮಾಜದಲ್ಲಿ ಒಗ್ಗಟ್ಟು, ಧರ್ಮಜಾಗೃತಿ ಆಗಬೇಕಾದರೆ ದೇವಸ್ಥಾನಗಳು ಅಗತ್ಯವಾಗಿದೆ. ಮುಂಬಯಿ ನಗರದಲ್ಲಿ ಮಹಾಲಕ್ಷ್ಮೀ ನೆಲೆ ನಿಂತಿದ್ದಾಳೆ. ಗೋಕುಲದಲ್ಲಿ ಶ್ರೀಮನ್ನಾರಾಯಣ ನೆಲೆ ನಿಲ್ಲಲಿದ್ದಾರೆ. ಎಲ್ಲಿ ಲಕ್ಷ್ಮೀ ಇದ್ದಾಳ್ಳೋ ಅಲ್ಲಿ ನಾರಾಯಣ ಅವತರಿಸುತ್ತಾನೆ. ಮುಂದೆ ಗೋಕುಲದ ಕೃಷ್ಣ ಮಂದಿರ ಜಗತ್ಪÅಸಿದ್ಧವಾಗಲಿದೆ ಎಂದು ಉಡುಪಿ ಅಷ್ಠ ಮಠಗಳಲ್ಲಿ ಒಂದಾಗಿರುವ ಪೇಜಾವರ ಮಠದ ಹಿರಿಯ ಯತಿ, ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ನುಡಿದರು.
ಜೂ. 27 ರಂದು ಸಂಜೆ ಚೆಂಬೂರು ಛೆಡ್ಡಾನದಲ್ಲಿರುವ ಶ್ರೀ ಸುಬ್ರಹ್ಮಣ್ಯ ಮಠದ ಸಭಾಗೃಹದಲ್ಲಿ ನಡೆದ ರಜತ ತುಲಾಭಾರ ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು, ನಮ್ಮ ಕಷ್ಟದಲ್ಲೂ, ಸುಖದಲ್ಲೂ ಭಗವಂತನನ್ನು ಸ್ಮರಿಸಿದರೆ ನಮ್ಮನ್ನು ಉದ್ಧಾರಕ್ಕಾಗಿ ಯಾವುದೇ ರೂಪ ತಾಳುತ್ತಾನೆ. ಕರ್ತವ್ಯವನ್ನು ಮಾಡುವುದರೊಂದಿಗೆ ದೇವರನ್ನು ಮರೆಯಬಾರದು. ಧರ್ಮ ಜಾಗೃತಿಯಲ್ಲಿ ಮುನ್ನಡೆಯಲು ಹಾದಿಯಾಗುತ್ತದೆ ಎಂದು ನುಡಿದರು.
ಪ್ರಾರಂಭದಲ್ಲಿ ಗೋಕುಲದ ಮಹಿಳಾ ವಿಭಾಗದಿಂದ ಭಜನೆ ನಡೆಯಿತು. ಸ್ವಾಮೀಜಿ ಅವರನ್ನು ಸುಬ್ರಹ್ಮಣ್ಯ ಮಠದ ಪ್ರಬಂಧಕ ವಿಷ್ಣು ಕಾರಂತ ಮತ್ತು ಅರ್ಚನಾ ಕಾರಂತ ದಂಪತಿ ಶ್ರೀಗಳಿಗೆ ತುಳಸಿ ಹಾರ ಸಮರ್ಪಿಸಿ ಮಠಕ್ಕೆ ಸ್ವಾಗತಿಸಿದರು. ತುಲಾಭಾರ ಸೇವೆಯನ್ನು ಆಯೋಜಿಸಿದ ವಾಮನ್ ಹೊಳ್ಳ ಅವರು ಶ್ರೀ ಕೃಷ್ಣ ಮಂದಿರದ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಸ್ವಾಮೀಜಿ ಅವರನ್ನು ಬೆಳ್ಳಿಯಿಂದ ತುಲಾಭಾರ ಸೇವೆ ನಡೆಸಲಾಯಿತು. ವಾಮನ್ ಹೊಳ್ಳ ಮತ್ತು ವಿಜಯಲಕ್ಷ್ಮೀ ಹೊಳ್ಳ ಅವರು ಶ್ರೀಗಳಿಗೆ ಆರತಿ ನೆರವೇರಿಸಿದರು. ಬಿಎಸ್‌ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ರಾವ್ ಅವರು ಸ್ವಾಮೀಜಿಯವರ ತುಲಾಭಾರ ಸೇವೆಯ ಬಗ್ಗೆ ಹಾಗೂ ಗೋಕುಲದ ಯೋಜನೆನೆಯ ಬಗ್ಗೆ ಮತ್ತು ಗೋಕುಲದ ಯೋಜನೆಯ ಬಗಕೆY ಹಾಗೂ ಜೂ. 30 ರಂದು ಗೋಕುಲದಲ್ಲಿ ಶ್ರೀ ಕೃಷ್ಣ ಮಂದಿರದ ಶಿಲಾನ್ಯಾಸದ ಬಗ್ಗೆ ಮಾಹಿತಿ ನೀಡಿದರು.
ತುಲಾಭಾರ ಸೇವೆಯಲ್ಲಿ ವಾಮನ್ ಹೊಳ್ಳ, ಸುಬ್ರಹ್ಮಣ್ಯ ಭಟ್, ಎನ್. ಕೆ. ಭಟ್, ಶ್ರೀಕರ್ ಭಟ್, ಗುರುರಾಜ ಭಟ್ ಅವರ ಆಯೋಜನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬಿ. ಎಸ್. ಕೆ. ಬಿ. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಎ. ಪಿ. ಕೆ. ಪೋತಿ, ಕೋಶಾಧಿಕಾರಿ ಕೆ. ಎಸ್. ರಾವ್, ಪೇಜಾವರ ಮಠದ ಪ್ರಬಂಧಕರಾದ ಡಾ| ರಾಮದಾಸ್ ಉಪಾಧ್ಯಾಯ, ಪ್ರಕಾಶ್ ಆಚಾರ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರೇಮಾ ರಾವ್, ಭಜನಾ ಸಮಿತಿಯ ಕಾರ್ಯಾಧ್ಯಕ್ಷೆ ಸಹನಾ ಪೋತಿ, ಇನ್ನಿತರ ಪದಾಧಿಕಾರಿಗಳು, ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.