ಮಂಡ್ಯ: ದೇಶದ ಪ್ರತಿಯೊಂದು ವರ್ಗದ ಜನಪರ ಬಜೆಟ್ ನಿರೀಕ್ಷಿಸಿದ್ದ ಜನರ ನಂಬಿಕೆ ಹುಸಿಯಾಗಿದ್ದು, ಕೇವಲ ಬಂಡವಾಳ ಶಾಹಿಗಳ ಪರ ಬಜೆಟ್ ಮಾಡಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಪಿಎಲ್‌ಡಿ ಬ್ಯಾಂಕ್‌ನ ನೂತನ ಕಟ್ಟಡಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸೋಮವಾರ ಮಂಡಿಸಿರುವ 2021-22ನೇ ಸಾಲಿನ ಆಯವ್ಯಯವು ಸಂಪೂರ್ಣವಾಗಿ ರಾಷ್ಟ್ರದ ಎಲ್ಲ ವರ್ಗದ ವಿರೋಧಿ ಬಜೆಟ್ ಆಗಿದೆ ಎಂದು ಆರೋಪಿಸಿದರು.
ಪ್ರತಿಯೊಬ್ಬರ ಮೇಲೆ ಹೊರೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈತರು, ಕಾರ್ಮಿಕರು, ಯುವಜನತೆ ಹಾಗೂ ಮಹಿಳೆಯರಿಗೆ ಆದ್ಯತೆ ನೀಡಿಲ್ಲ. ಕೊರೊನಾದಿಂದ ನಲುಗಿರುವ ಬಡ ಮತ್ತು ಮಧ್ಯಮ ವರ್ಗದ ಜನತೆಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಕೊರೊನಾದಿಂದ ಒಂದು ವರ್ಷದಿಂದ ಉದ್ಯೋಗ ಕಳೆದುಕೊಂಡಿರುವವರು, ರೈತರು ಹಾಗೂ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಏನಾದರೂ ಒಂದು ಒಳ್ಳೆಯ ಯೋಜನೆಯನ್ನು ರೂಪಿಸುತ್ತಾರೆ ಎಂದು ಬಹಳ ಆಸೆ ಇಟ್ಟುಕೊಳ್ಳಲಾಗಿತ್ತು. ಆದರೆ, ಪ್ರತಿಯೊಬ್ಬರ ಮೇಲೆ ಮತ್ತಷ್ಟು ಹೊರೆ ಹಾಕುವ ಮೂಲಕ ತಾನು ಬಂಡವಾಳ ಶಾಹಿಗಳ ಪರ ಎನ್ನುವುದನ್ನು ಪ್ರಧಾನಿ ನಿರೂಪಿಸಿದ್ದಾರೆ ಎಂದರು.
ಅಗತ್ಯ ವಸ್ತುಗಳು ದುಬಾರಿ: ರೈತರ ಸಾಲಮನ್ನಾ ಮಾಡುವ ಮೂಲಕ ಅವರ ಬಾಳಿಗೆ ಬೆಳಕಾಗಬಹುದಾಗಿತ್ತು. ಆದರೆ, ಅದಾವುದನ್ನೂ ಮಾಡದೆ ರಾಸಾಯನಿಕ ಗೊಬ್ಬರ, ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಳ ಮಾಡುವ ಮೂಲಕ ರೈತರು ಕೃಷಿಯಿಂದ ಹಿಮುಖರಾಗುವಂತೆ ಮಾಡಿದೆ. ಇಂಧನ ಹೆಚ್ಚಳದಿಂದಾಗಿ ಪ್ರತಿಯೊಂದು ಪದಾರ್ಥಗಳ ಬೆಲೆ ಹೆಚ್ಚಳವಾಗಲಿದೆ ಎಂಬ ಕನಿಷ್ಠ ಜ್ಞಾನವೂ ಪ್ರಧಾನಿ ಹಾಗೂ ವಿತ್ತ ಸಚಿವರಿಗೆ ಇದ್ದಂತಿಲ್ಲ ಎಂದು ಟೀಕಿಸಿದರು.
2 ಲಕ್ಷ ರೂ. ಆರ್ಥಿಕ ಹೊರೆ: ಪ್ರಸ್ತುತ ಬಜೆಟ್‌ನಿಂದ ಒಂದು ವರ್ಷಕ್ಕೆ ಕುಟುಂಬದ ಒಬ್ಬನಿಗೆ 2 ಲಕ್ಷ ರೂ. ಆರ್ಥಿಕವಾಗಿ ಹೊರೆ ಆಗಲಿದೆ. ಪ್ರಧಾನಿ ಅವರು ಬಹಳ ಬುದ್ಧಿವಂತಿಕೆ ಹಾಗೂ ನೈಪುಣ್ಯತೆಯಿಂದ ಜನ ಸಾಮಾನ್ಯರನ್ನು ಸಾಲದ ಕೂಪಕ್ಕೆ ತಳ್ಳುತ್ತಿದ್ದಾರೆ.
ಇದನ್ನೂ ಓದಿ :4 ವಾರಗಳು ಮಾತ್ರ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ: ಸುಧಾಕರ್
ಕೊರೊನಾ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ, ಅವರ ಪರ ನಿಂತಿಲ್ಲ. ವಿದ್ಯುತ್ ಹಾಗೂ ನೀರಾವರಿಗೆ ಆದ್ಯತೆ ನೀಡಿಲ್ಲ. ತಮಿಳುನಾಡು ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಆ ರಾಜ್ಯಗಳ ಪರ ಬಜೆಟ್ ಮಂಡಿಸಲಾಗಿದೆ ಎಂದು ಛೇಡಿಸಿದರು. ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ: ಕೇಂದ್ರದ ಜನ ವಿರೋಧಿ ಬಜೆಟ್ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದು, ಈ ಸಂಬಂಧವಾಗಿ ರಾಷ್ಟ್ರವ್ಯಾಪಿ ಕೇಂದ್ರದ ವಿರುದ್ಧ ರೈತರ ಜತೆಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಲೂಕು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಅಶೋಕ್ ಹಾಜರಿದ್ದರು.