Advertisement
ಪಾಂಬೂರು ಪರಿಸರದಲ್ಲಿ ಚಿರತೆ ಅಡ್ಡಾಡುವ ದೂರು ಬಂದ ಹಿನ್ನೆಲೆಯಲ್ಲಿ ಪಡುಬೆಳ್ಳೆ ಪಾಂಬೂರು ಹಿ.ಪ್ರಾ. ಶಾಲೆಯ ಬಳಿಯ ಮೊನಿಕಾ ಮತಾಯಸ್ ಅವರ ಮನೆಯ ಸಮೀಪ ಅರಣ್ಯ ಇಲಾಖೆ ಸಿಬಂದಿ ಬುಧವಾರ ರಾತ್ರಿ ಬೋನು ಇರಿಸಿದ್ದರು. ಗುರುವಾರ ಮಧ್ಯರಾತ್ರಿ 2 ಗಂಟೆಯ ವೇಳೆಗೆ ಸುಮಾರು 4 ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ.ಕಳೆದ ಕೆಲವು ಸಮಯದಿಂದ ಪಾಂಬೂರು ಪರಿಸರದಲ್ಲಿ ನಾಟಿಕೋಳಿ, ಸಾಕು ನಾಯಿಗಳು ಕೊಂದು ತಿನ್ನುತ್ತಿರುವ ಚಿರತೆ ಕಾಟದಿಂದ ಜನತೆ ಭಯಭೀತರಾಗಿದ್ದರು.ಒಂದು ಚಿರತೆ ಸೆರೆ ಹಿಡಿದರೂ ಮತ್ತೂಂದು ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿಯಾಗಿ ತಿಂಗಳ ಅಂತರದಲ್ಲಿ 2 ಚಿರತೆಗಳು ಬೋನಿಗೆ ಬಿದ್ದರೂ ಇನ್ನು ಕೂಡಾ ಚಿರತೆ ಮರಿಗಳು ಪರಿಸರದಲ್ಲೇ ಓಡಾಡಿಕೊಂಡಿವೆ ಎಂದು ಸ್ಥಳೀಯ ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪಾಂಬೂರು ಪರಿಸರದಲ್ಲಿ ಆ. 7 ರಂದು ದೊಡ್ಡ ಗಾತ್ರದ ಚಿರತೆ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಬಿದ್ದಿದ್ದರೂ ಮರುದಿನ ಆದೇ ಪರಿಸರದಲ್ಲಿ ಇನ್ನೊಂದು ಚಿರತೆ ಸಂಚರಿಸಿರುವುದು ಕಂಡು ಬಂದಿತ್ತು. ಗಂಡು ಚಿರತೆ ಬಿದ್ದರೂ ಹೆಣ್ಣು ಚಿರತೆ ಮತ್ತು ಮರಿಗಳು ಇಲ್ಲೇ ಇವೆ ಎಂದು ಬೆಳ್ಳೆ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಶೆಟ್ಟಿ ಪತ್ರಿಕೆಗೆ ಮಾಹಿತಿ ನೀಡಿದ್ದರು. ಚಿರತೆ ಹಾವಳಿಯಿಂದ ಸ್ಥಳೀಯ ಜನರು ಭಯಭೀತರಾಗಿರುವ ಬಗ್ಗೆ ಆ.9 ರಂದು ಉದಯವಾಣಿ ವರದಿ ಪ್ರಕಟಿಸಿತ್ತು. ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ, ಉಪ ವಲಯ ಅರಣ್ಯಾಧಿಕಾರಿ ದಯಾನಂದ ಕೆ. ಅವರ ಮಾರ್ಗದರ್ಶನದಂತೆ ಬೆಳ್ಳೆ ಗಸ್ತಿನ ಅರಣ್ಯ ರಕ್ಷಕ ಗಣಪತಿ ನಾಯಕ್‌ಮತ್ತು ಶಿರ್ವ ಗಸ್ತಿನ ಅರಣ್ಯ ರಕ್ಷಕ ಜಯರಾಮ ಶೆಟ್ಟಿ, ಅರಣ್ಯ ವೀಕ್ಷಕ ಅಶ್ವಿನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಎಸ್‌ಕೆ ಬೋರ್ಡರ್‌ನ ವನ್ಯಜೀವಿ ವಿಭಾಗದ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.