ಬೆಂಗಳೂರು: ಪೌರ ಕಾರ್ಮಿಕರ ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಿ ಅವರ ಖಾತೆಗೆ ನೇರವಾಗಿ ವೇತನ ಪಾವತಿಯಾ ಗುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ ಎಂದು ಮೇಯರ್ ಆರ್. ಸಂಪತ್‌ರಾಜ್ ತಿಳಿಸಿದರು.
ಬಿಬಿಎಂಪಿ ಪೂರ್ವ ವಲಯ ಕಚೇರಿಗೆ ಗುರುವಾರ ಭೇಟಿ ನೀಡಿ ವೇತನ ವಿಳಂಬ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ
ಮಾತನಾಡಿದ ಅವರು, ಪೌರ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬಳಿಕವೂ ಕೆಲವು ಅಧಿಕಾರಿಗಳು ಪೌರಕಾರ್ಮಿಕರ ವಿಚಾರವಾಗಿ ನಿರ್ಲಕ್ಷ್ಯ ವಹಿಸುತ್ತಿರುವುದು ತಿಳಿದು ಬಂದಿದೆ. ಈ ಕುರಿತು ದೂರು ಬಂದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪೂರ್ವ ವಲಯ ವ್ಯಾಪ್ತಿಯ 44 ವಾರ್ಡ್‌ಗಳ ಮಾಹಿತಿ ಪಡೆದ ಮೇಯರ್,
ಹೆಚ್ಚುವರಿಯಾಗಿ ಪೌರಕಾರ್ಮಿಕರ ನೇಮಕ ಮಾಡಿಕೊಂಡಿರುವ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೇಮಕ ಮಾಡಿಕೊಂಡಿರುವ ಯಾರನ್ನೂ ಸೇವೆಯಿಂದ ತೆಗೆಯಬಾರದು. ಎಲ್ಲಿ ಹೆಚ್ಚಿದ್ದಾರೆ, ಎಲ್ಲಿ ಕಡಿಮೆಯಿದ್ದಾರೆ ಎಂಬ ಮಾಹಿತಿ ಪಡೆದು ಅಗತ್ಯ ಇರುವ ಕಡೆ ನಿಯೋಜಿಸಬೇಕು ಎಂದು ಸೂಚಿಸಿದರು.
ಇತ್ತೀಚೆಗೆ ವಾರ್ಡ್‌ಗಳಲ್ಲಿ ಬೇನಾಮಿ ಪೌರಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಈ ಕುರಿತು ದೂರುಗಳು ಬರುತ್ತಿವೆ. ಅನೇಕರು
ಕೇವಲ ಬಯೋಮೆಟ್ರಿಕ್ ಪಂಚ್ ಮಾಡಿ ವೇತನ ಪಡೆಯುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿಯನ್ನು ನನಗೆ ನೀಡಬೇಕು ಎಂದು ತಿಳಿಸಿದರು. ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಉಪಮೇಯರ್ ಪದ್ಮಾವತಿ ನರಸಿಂಹ ಮೂರ್ತಿ ಇದ್ದರು.
ಚಾಯ್ ಪೇ ಚರ್ಚಾ: ಅಧಿಕಾರಿಗಳು ಪ್ರತಿ ಶುಕ್ರವಾರ ವಲಯದ ಎಲ್ಲಾ ತ್ಯಾಜ್ಯ ವಿಲೇವಾರಿ ಕೇಂದ್ರ ಹಾಗೂ ಸ್ಥಳಗಳಿಗೆ ಭೇಟಿ ನೀಡಬೇಕು. ಪೌರಕಾರ್ಮಿಕರಿಗೆ ಕಾಫಿ-ಟೀ ನೀಡಿ ಅವರ ಕುಂದು ಕೊರತೆಗಳನ್ನು ಆಲಿಸಬೇಕು. ಆರೋಗ್ಯ ಸಮಸ್ಯೆಯಿದ್ದಲ್ಲಿ ಬಿಬಿಎಂಪಿಯಿಂದ ಚಿಕಿತ್ಸೆ ಕೊಡಿಸಬೇಕು. ವಾರಕ್ಕೊಮ್ಮೆ ಈ ರೀತಿಯ ಭೇಟಿ ಕಡ್ಡಾಯ ಎಂದು ಸೂಚಿಸಿದರು.