Advertisement

ಜಲಮಂಡಳಿಗೆ ಚೆಕ್‌ ಬೌನ್ಸ್‌ ಕಾಟ

12:02 PM Jul 11, 2018 | Team Udayavani |

ಬೆಂಗಳೂರು: ನೀರಿನ ಬಿಲ್‌ಗೆ ಪ್ರತಿಯಾಗಿ ಬಳಕೆದಾರರು ನೀಡಿದ ಚೆಕ್‌ಗಳು ಬೌನ್ಸ್‌ ಆಗುತ್ತಿರುವುದು ಜಲಮಂಡಳಿಗೆ ದೊಡ್ಡ ತಲೆನೋವಾಗಿದ್ದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಂಡಳಿ ಪರದಾಡುತ್ತಿದೆ. ಬಿಲ್‌ ಪಾವತಿ ಮಾಡದಿದ್ದರೆ ಜಲಮಂಡಳಿ ವಿಧಿಸುವ “ನೀರಿನ ಸಂಪರ್ಕ ಕಡಿತ’ ಶಿಕ್ಷೆಯಿಂದ ತಕ್ಷಣಕ್ಕೆ ಪಾರಾಗಲು ಬಳಕೆದಾರರು ಅನುಸರಿಸುತ್ತಿರುವ ಐಡಿಯಾ ಇದು!

Advertisement

ಸಾಮಾನ್ಯವಾಗಿ ತಿಂಗಳ ನೀರಿನ ಬಿಲ್‌ ಪಾವತಿಸಲು ಬಳಕೆದಾರರಿಗೆ ಬಿಲ್ಲಿನ ದಿನಾಂಕದಿಂದ 15 ದಿನ ಕಾಲಾವಕಾಶ ಇರುತ್ತದೆ. ಗಡುವು ಮೀರಿದರೆ, ಜಲಮಂಡಳಿ ಅಂತಹ ನೀರಿನ ಸಂಪರ್ಕಗಳನ್ನು ಕಡಿತಗೊಳಿಸುತ್ತದೆ. ಹೀಗೆ ಕಡಿತಗೊಳಿಸಲು ಬಂದಾಗ, ಖಾತೆಗಳಲ್ಲಿ ಹಣ ಇಲ್ಲದ ಚೆಕ್‌ಗಳನ್ನು ಕೊಟ್ಟು ಕಳುಹಿಸುವ ಅಥವಾ ನೇರವಾಗಿ ಕಿಯೋಸ್ಕ್ಗಳಲ್ಲಿಯೇ ಇಂತಹ ಚೆಕ್‌ಗಳನ್ನು ಹಾಕುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ಕನಿಷ್ಠ ಒಂದು ತಿಂಗಳು “ರಿಲೀಫ್’ ಸಿಗುತ್ತದೆ ಎಂಬುದು ಬಳಕೆದಾರರ ಲೆಕ್ಕಾಚಾರ.

ದಶಕದಷ್ಟು ಹಳೇ ಪ್ರಕರಣ ಪತ್ತೆ!: ಈ ರೀತಿಯ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ಸ್ವತಃ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ (ಸಿಎಜಿ) ವರದಿಯಲ್ಲಿ ಉಲ್ಲೇಖೀಸಲಾಗಿದೆ. “ನೀರಿನ ಬಿಲ್‌ ಪಾವತಿಗೆ ಬಳಕೆದಾರರು ನೀಡಿದ ಅನೇಕ ಚೆಕ್‌ಗಳು ಅಮಾನ್ಯಗೊಂಡು ವಾಪಸಾಗಿರುವುದು ವಿಶ್ಲೇಷಣೆ ವೇಳೆ ಕಂಡುಬಂದಿದೆ. ಇದೇ ಮಾದರಿಯ ದಶಕದಷ್ಟು ಹಳೆಯದಾದ ಪ್ರಕರಣಗಳೂ ಇದ್ದವು.

ಆದರೆ, ಇಂತಹ ಚೆಕ್‌ಗಳು ನಗದೀಕರಣಗೊಂಡ ಬಗ್ಗೆ ದೃಢೀಕರಿಸುವ ಸಮರ್ಪಕ ವ್ಯವಸ್ಥೆ ಜಲಮಂಡಳಿ ಬಳಿ ಇಲ್ಲ’ ಎಂದೂ ವರದಿ ಹೇಳಿದೆ. ವಸತಿ, ವಾಣಿಜ್ಯ, ಕೈಗಾರಿಕೆ ಸೇರಿದಂತೆ ಪ್ರತಿ ತಿಂಗಳು ಒಂದು ಉಪ ವಿಭಾಗದಲ್ಲಿ ಕನಿಷ್ಠ 20ರಿಂದ 25 ಚೆಕ್‌ಬೌನ್ಸ್‌ ಪ್ರಕರಣ ವರದಿಯಾಗುತ್ತಿವೆ. ಒಟ್ಟಾರೆ 31 ಉಪ ವಿಭಾಗಗಳಿಂದ ಈ ರೀತಿಯ 600ರಿಂದ 650 ಪ್ರಕರಣಗಳು ದಾಖಲಾಗುತ್ತಿವೆ.

ಹೀಗೆ ಚೆಕ್‌ಬೌನ್ಸ್‌ ಆದಾಗ, ಮರು ತಿಂಗಳ ಬಿಲ್‌ನಲ್ಲಿ ಬಡ್ಡಿ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಜಲಮಂಡಳಿ ಇಂಜಿನಿಯರ್‌ ಒಬ್ಬರು ಮಾಹಿತಿ ನೀಡಿದರು. ಮಧ್ಯ ಮವರ್ಗದ ಬಳಕೆದಾರರ ವಲಯದಲ್ಲೇ ಚೆಕ್‌ಬೌನ್ಸ್‌ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ನೀರಿನ ಸಂಪರ್ಕ ಕಡಿತಗೊಳಿಸಲು ಹೋದಾಗ ತಪ್ಪಿಸಿಕೊಳ್ಳಲು ಬೇಕಂತಲೇ ಹಣ ಇಲ್ಲದ ಖಾತೆಯ ಚೆಕ್‌ ಕೊಡಬಹುದು

Advertisement

ಅಥವಾ ಖಾತೆಯಲ್ಲಿ ಹಣ ಇಲ್ಲದಿರುವ ಬಗ್ಗೆ ಅರಿವಿಲ್ಲದೆ ಚೆಕ್‌ ಕೊಟ್ಟಾಗ, ಸಹಿ ಹೊಂದಿಕೆ ಆಗದಿದ್ದರೂ ಚೆಕ್‌ಬೌನ್ಸ್‌ ಆಗುತ್ತದೆ. ಇದರಿಂದ ಜಲಮಂಡಳಿಗೆ ಸಣ್ಣ ಕಿರಿಕಿರಿ ಆಗಬಹುದು. ಆದರೆ, ದಂಡ/ಬಡ್ಡಿ ವಿಧಿಸುವುದರಿಂದ ಬಳಕೆದಾರರಿಗೂ ಹೊರೆ ಆಗುತ್ತದೆ. ಜಲಮಂಡಳಿ ವ್ಯಾಪ್ತಿಯಲ್ಲಿ 9.80 ಲಕ್ಷ ಸಂಪರ್ಕಗಳಿದ್ದು, ಆ ಪೈಕಿ ತಿಂಗಳಿಗೆ 600-700 ಚೆಕ್‌ಬೌನ್ಸ್‌ ಆಗುವುದು ಗಂಭೀರ ಸಮಸ್ಯೆಯೇನಲ್ಲ ಎಂದೂ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

ಈ ನಡುವೆ “ಸುಜಲ’ ಯೋಜನೆ ಅಸಮರ್ಪಕ ಅನುಷ್ಠಾನದಿಂದ ಜಲಮಂಡಳಿ ಮೇಲೆ 3.94 ಕೋಟಿ ರೂ. ಹೊರೆ ಬಿದ್ದಿದೆ. ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳದ ಕಟ್ಟಡ ಮಾಲೀಕರಿಗೆ ದಂಡ ವಿಧಿಸದಿರು ಕಾರಣ 3.08 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಲ್ಲಿ ಹೇಳಿದೆ.

ಮೀಟರ್‌ ಓಡಿದೆ; ಬಿಲ್‌ ಮಾತ್ರ ಶೂನ್ಯ!: 2016ರ ಮಾರ್ಚ್‌ನಿಂದ 2017ರ ಮಾರ್ಚ್‌ ನಡುವೆ 2,922 ಸಂಪರ್ಕಗಳಲ್ಲಿ ನೀರು ಬಳಕೆಯಾಗಿದೆ. ಆದರೆ, ಬಿಲ್‌ ಮಾತ್ರ ಶೂನ್ಯವಾಗಿದೆ! 2,922ರ ಪೈಕಿ 291 ಬಳಕೆದಾರರಿಗೆ ಸಂಬಂಧಿಸಿದ 1,468 ಬಿಲ್‌ಗ‌ಳಲ್ಲಿನ ನೀರಿನ ಬಳಕೆ 1 ಕಿ.ಲೀ.ನಿಂದ 29,920 ಕಿ.ಲೀ ಇತ್ತು. ಆ ಬಳಕೆದಾರರ ಮುಂಗಡ ಹಣವೂ ಶೂನ್ಯವಾಗಿತ್ತು. ಹಾಗಾಗಿ, ಬಿಲ್‌ ಮೊತ್ತ ಶೂನ್ಯವಾಗಿರುವುದಕ್ಕೆ ಸಿಬ್ಬಂದಿ ನೀಡುತ್ತಿರುವ ಸಮರ್ಥನೆ ಒಪ್ಪಿತವಲ್ಲ ಎಂದೂ ಸಿಎಜಿ ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next