Advertisement

ರಾತ್ರಿ ಕರ್ಫ್ಯೂ ಪರಿಶೀಲಿಸಿ; ರಾಜ್ಯಗಳಿಗೆ ಸೂಚನೆ ; ಲಸಿಕೆಗೆ ಆದ್ಯತೆ ನೀಡಲೂ ಕೇಂದ್ರ ಆದೇಶ

01:57 AM Dec 24, 2021 | Team Udayavani |

ಹೊಸದಿಲ್ಲಿ: “ಅಗತ್ಯ ಬಿದ್ದರೆ ರಾತ್ರಿ ಕರ್ಫ್ಯೂ ಜಾರಿ ಮಾಡಿ. ಸ್ಥಳೀಯ ಮಟ್ಟದಲ್ಲಿ ಸೋಂಕು ಸಂಖ್ಯೆಗಳು ಹೆಚ್ಚಾಗುತ್ತಿದ್ದರೆ ಸ್ಥಳೀಯವಾಗಿ ಪ್ರತಿಬಂಧಕ ಕ್ರಮ ಗಳನ್ನು ಜಾರಿಗೊಳಿಸಿ. ವಿಧಾನಸಭೆ ಚುನಾವಣೆ ನಡೆಯಲಿ­ರುವ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಿ’
– ಇದು ಕೇಂದ್ರ ಸರಕಾರ ಗುರುವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ ಪ್ರಮುಖ ಸೂಚನೆ.

Advertisement

ದೇಶದಲ್ಲಿ ಒಮಿಕ್ರಾನ್‌ ಕೇಸ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಭಾವನೆ ಬೇಡ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಜಿಲ್ಲೆ, ತಾಲೂಕು ಮಟ್ಟದಲ್ಲಿ ಕೂಡ ಕೊರೊನಾ ಸಂಖ್ಯೆ ಹೆಚ್ಚುತ್ತಿದೆ ಎಂದಾದರೆ ಅವುಗಳ ಬಗ್ಗೆ ಗಮನ ಹರಿಸಬೇಕು. ದಿನವಹಿ ಸೋಂಕುಗಳ ಪಾಸಿಟಿವಿಟಿ ಪ್ರಮಾಣದ ಬಗ್ಗೆ ಗಮನಹರಿಸಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ.

ಹೆಚ್ಚು ಜನರು ಸೇರುವುದರ ಮೇಲೆ ತಡೆ, ಸ್ಥಳೀಯವಾಗಿ ಪ್ರತಿಬಂಧಕ ಕ್ರಮಗಳು, ಅಗತ್ಯ ಬಿದ್ದರೆ ರಾತ್ರಿ ಕರ್ಫ್ಯೂ ವಿಧಿಸುವ ಬಗ್ಗೆಯೂ ರಾಜ್ಯ ಸರಕಾರ ಗಳು ಯೋಚಿಸಬಹುದಾಗಿದೆ ಎಂದು ಸರಕಾರ ಹೇಳಿದೆ. ನಿಯಂತ್ರಣ (ಕಂಟೈನ್‌ಮೆಂಟ್‌), ಪರೀಕ್ಷೆ ಮತ್ತು ನಿಗಾ (ಟೆಸ್ಟಿಂಗ್‌ ಆ್ಯಂಡ್‌ ಸರ್ವಿಲೆನ್ಸ್‌), ಚಿಕಿತ್ಸಾ ನಿರ್ವಹಣೆ (ಕ್ಲಿನಿಕಲ್‌ ಮ್ಯಾನೇಜ್‌ಮೆಂಟ್‌), ಸೋಂಕು ನಿಯಂತ್ರಣ ಕ್ರಮಗಳು (ಕೋವಿಡ್‌ ಸೇಫ್ ಬಿಹೇವಿಯರ್‌), ಲಸಿಕೆ ಹಾಕಿಸಿ ಕೊಳ್ಳುವುದು (ವ್ಯಾಕ್ಸಿ ನೇಶನ್‌) ಎಂಬ ಐದು ಅಂಶಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿಂದು 299 ಕೋವಿಡ್‌ ಪಾಸಿಟಿವ್‌ ಪತ್ತೆ: 2 ಸಾವು

ಲಸಿಕೆ ಹಾಕಿಸಿ: ಮುಂದಿನ ವರ್ಷ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿರುವ ಸರಕಾರ 18 ವರ್ಷಗಳಿಂದ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದಿದೆ. ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ಆಗದೇ ಇರುವ ಸ್ಥಳಗಳನ್ನು ಗುರುತಿಸಿ, ಅಲ್ಲಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸರಕಾರ ಸ್ಪಷ್ಟಪಡಿಸಿದೆ.

Advertisement

ಸಿದ್ಧರಾಗಿದ್ದೇವೆ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪರಿಸ್ಥಿತಿ ಕೈಮೀರಿ ಹೋದರೆ ಎಲ್ಲ ರೀತಿಯ ಸಿದ್ಧತೆ ಗಳನ್ನೂ ನಡೆಸಲಾಗಿದೆ. ಪ್ರತೀ ದಿನ 1 ಲಕ್ಷ ಕೇಸ್‌ಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಅಭಿ ವೃದ್ಧಿಪಡಿಸ ಲಾಗಿದೆ ಎಂದು ದಿಲ್ಲಿ ಮುಖ್ಯ ಮಂತ್ರಿ ಅವರಿಂದ ಕೇಜ್ರಿವಾಲ್‌ ಹೇಳಿದ್ದಾರೆ. ಒಮಿಕ್ರಾನ್‌ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಅವರು ಪರಿಶೀಲನ ಸಭೆಯನ್ನೂ ನಡೆಸಿದ್ದಾರೆ.

ಕೊಂಚ ಏರಿಕೆ: ಮುಂಬಯಿ­ಯಲ್ಲಿ ಗುರುವಾರ 602 ಕೇಸ್‌ಗಳು ದೃಢಪಟ್ಟಿವೆ. 77 ದಿನಗಳಿಗೆ ಹೋಲಿಕೆ ಮಾಡಿದರೆ ಈ ಸಂಖ್ಯೆ ಕೊಂಚ ಹೆಚ್ಚಾಗಿದೆ.

ಹೆಚ್ಚುವರಿ ಮಾಹಿತಿಗೆ ಸೂಚನೆ: ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಶೋಧಿಸಿ, ಸಿದ್ಧ ಪಡಿಸುತ್ತಿರುವ ಕೊವೊವ್ಯಾಕ್ಸ್‌ ಬಗ್ಗೆ ಭಾರತದ ಪ್ರಧಾನ ಔಷಧ ಗುಣಮಟ್ಟ ನಿಯಂತ್ರಕರು (ಡಿಸಿಜಿಐ) ಹೆಚ್ಚಿನ ಮಾಹಿತಿ ಕೋರಿದ್ದಾರೆ. ಸೀರಂ ಇನ್‌ಸ್ಟಿಟ್ಯೂಟ್‌ ಅದರ ತುರ್ತು ಬಳಕೆಗೆ ಅನುಮತಿ ಕೋರಿದೆ.

334 ದಾಟಿದ ಪ್ರಕರಣ
ಬುಧವಾರದಿಂದ ಗುರುವಾರದ ಅವಧಿಯಲ್ಲಿ ಕೇಂದ್ರ ಸರಕಾರದ ಅಧಿಕೃತ ಮಾಹಿತಿಯಂತೆ 236 ಒಮಿಕ್ರಾನ್‌ ಕೇಸ್‌ಗಳು ದೃಢಪಟ್ಟಿವೆ. ಈ ಪೈಕಿ 104 ಮಂದಿ ಡಿಸಾcರ್ಜ್‌ ಆಗಿದ್ದಾರೆ. ಆದರೆ ಗುರುವಾರ ಸಂಜೆಯ ವೇಳೆಗೆ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರಿಂದ ದೇಶದಲ್ಲಿ ಒಮಿಕ್ರಾನ್‌ ಸಂಖ್ಯೆ 334 ದಾಟಿದೆ. ಬುಧವಾರದಿಂದ ಗುರುವಾರದ ಅವಧಿಯಲ್ಲಿ ದಿನವಹಿಯಾಗಿ 7,495 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದರೆ, 434 ಮಂದಿ ಸಾವಿಗೀಡಾಗಿ­ದ್ದಾರೆ. ತಮಿಳುನಾಡಿನಲ್ಲಿ ಮೂವರು ಡಿಸಾcರ್ಜ್‌ ಆಗಿದ್ದಾರೆ.

ಅಮೆರಿಕದಲ್ಲಿ ಫೈಜರ್‌ ಮಾತ್ರೆಗೆ ಒಪ್ಪಿಗೆ
ಅಮೆರಿಕದಲ್ಲಿ ಫೈಜರ್‌ ಕಂಪೆನಿ ಸಿದ್ಧಪಡಿಸಿರುವ ಕೊರೊನಾ ನಿರೋಧಕ ಮಾತ್ರೆ “ಪ್ಯಾಕ್ಸ್ಲೋವಿಡ್’ (Paxlovid)ಗೆ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಅನುಮೋದನೆ ನೀಡಿದೆ. ಕಂಪೆನಿ ನಡೆಸಿರುವ ಪ್ರಯೋಗದ ವರದಿಯ ಪ್ರಕಾರ “ಪ್ಯಾಕ್ಸ್ಲೋವಿಡ್ ಸೇವಿಸಿದರೆ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ಸಾವಿಗೀಡಾಗುವ ಅಂಶವನ್ನು ಶೇ.88ರಷ್ಟು ತಪ್ಪಿಸಬಹುದಾಗಿದೆ. ಎರಡು ರೀತಿಯ ಮಾತ್ರೆಗಳು ಇವೆ ಎಂದು ಕಂಪೆನಿ ಹೇಳಿಕೊಂಡಿದೆ.

ಶೇ.60 ಮಂದಿಗೆ ಲಸಿಕೆ
ದೇಶದಲ್ಲಿ 18 ವರ್ಷದಿಂದ ಮೇಲ್ಪಟ್ಟ ಶೇ.60 ಮಂದಿಗೆ ಎರಡೂ ಡೋಸ್‌ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್‌ಸುಖ್‌ ಮಾಂಡವಿಯಾ ಟ್ವೀಟ್‌ ಮಾಡಿದ್ದಾರೆ. 18 ವರ್ಷ ಮೇಲ್ಪಟ್ಟವರ ಪೈಕಿ ಶೇ.89 ಮಂದಿಗೆ ಮೊದಲ ಡೋಸ್‌ ನೀಡಲಾಗಿದೆ. ಬುಧವಾರದಿಂದ ಗುರುವಾರದ ಅವಧಿಯಲ್ಲಿ 70,17,671 ಡೋಸ್‌ ಲಸಿಕೆ ನೀಡಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next