ತಿ.ನರಸೀಪುರ: ತಾಲೂಕಿನ ಸೋಮನಾಥ ಪುರ ಗ್ರಾಮದಲ್ಲಿ ಶಿಥಿಲಗೊಂಡು ಕುಸಿದು ಬೀಳುವ ಹಂತದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಜಿಪಂ ಸದಸ್ಯ ಎಂ. ಅಶ್ವಿನ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜು ಪರಿಶೀಲಿಸಿದರು.
ಐತಿಹಾಸಿಕ ಹಿನ್ನೆಲೆ ಪ್ರಮುಖ ಪ್ರವಾಸಿ ಕೇಂದ್ರವಾದ ತಾಲೂಕಿನ ಸೋಮನಾಥಪುರ ಗ್ರಾಮದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿಯೇ ನಿರ್ಮಾಣಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಈಗಾಗಲೇ ಶಿಥಿಲಾವಸ್ಥೆ ತಲುಪಿದೆ. ಕಳೆದ 3-4 ತಿಂಗಳಿನಿಂದ ಸತತ ಮಳೆ ಸುರಿಯುತ್ತಿರುವುದರಿಂದ ಕಟ್ಟಡ ಕುಸಿದು ಬೀಳುವ ಅಪಾಯದಂಚಿನಲ್ಲಿ ಇದೆ.
ಹೀಗಾಗಿ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಅವರನ್ನೇ ಖುದ್ದಾಗಿ ಆಹ್ವಾನಿಸಿದ ಜಿಪಂ ಸದಸ್ಯ ಎಂ.ಅಶ್ವಿನ್ ಕುಮಾರ್ ಕಟ್ಟಡದ ಶೋಚನೀಯ ಸ್ಥಿತಿ ವಿವರಿಸಿದರು. ಶಿಥಿಲಗೊಂಡಿರುವ ಪ್ರಾಥಮಿಕ ಆರೋಗ್ಯದ ಕಟ್ಟಡ ಕಟ್ಟಡ ಭಾರೀ ಮಳೆಯಿಂದಾಗಿ ಅಪಾಯದ ಸ್ಥಿತಿ ತಲುಪಿದೆ.
ಕಟ್ಟಡದ ಸುತ್ತಲೂ ನೀರು ಶೇಖರಣೆಗೊಳ್ಳುತ್ತಿದೆ. ಗೋಡೆಗಳು ತೇವಾಂಶದಿಂದ ಬಿರುಕು ಬಿಟ್ಟಿದ್ದು, ಕಟ್ಟಡದ ಚಾವಣಿಯಲ್ಲೂ ಶೀತದಿಂದ ನೀರು ಸೋರಿಕೆಯಾಗುತ್ತಿದೆ ಎಂದು ಹೇಳಿದರು. ಅಲ್ಲದೆ ಅಸ್ಪತ್ರೆ ಕಟ್ಟಡ ಇರುವ ಸ್ಥಳ ಯಾವ ಇಲಾಖೆಗೆ ಸೇರಿದೆ ಎಂಬುವುದಕ್ಕೆ ದಾಖಲೆ ಇಲ್ಲ. ಗ್ರಾಪಂನಲ್ಲೂ ಸ್ಥಳದ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜು, ಶಿಥಿಲಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಸ್ಥಳೀಯ ಜಿಪಂ ಸದಸ್ಯರ ಜೊತೆ ಪರಿಶೀಲಿಸಿದ್ದೇನೆ. ಈ ಕಟ್ಟಡ ಪುರಾತತ್ವ ಇಲಾಖೆಗೆ ಒಳಪಟ್ಟಿರುವ ಶ್ರೀ ಚನ್ನಕೇಶವ ದೇವಾಲಯದ ಪಕ್ಕದಲ್ಲಿದ್ದು, ಮಾಹಿತಿ ಕಲೆ ಹಾಕಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ದುರಸ್ತಿ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಎಲ್. ಶ್ರೀನಿವಾಸ್, ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ವೈದ್ಯಾಧಿಕಾರಿ ಡಾ.ದಿಕ್ಷಾ ಪೈ, ಸಿಬ್ಬಂದಿಗಳಾದ ನೇತ್ರಾವತಿ, ಕಿ.ಮಾ.ಆಶಾ, ಸೌಮ್ಯಾರಾಣಿ, ಹರೀಶ್, ಮುಖಂಡರಾದ ಎಸ್.ಸಿ.ಗಣೇಶ್, ಜೈರಾಮ್, ಅಬ್ದುಲ್ ಅತ್ತಿಕ್ ಮತ್ತಿತರರಿದ್ದರು.