ಮಂಗಳೂರು: ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ, ಶಿರಾಡಿ ಹಾಗೂ ಸಂಪಾಜೆ ಘಾಟಿಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಡಲೇ ಭೇಟಿ ಸ್ಥಿತಿಗತಿ ಪರಿಶೀಲಿಸಬೇಕು, ಅಗತ್ಯವಿದ್ದಲ್ಲಿ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವರು ಹಾಗೂ ಹಾಸನ ಜಿಲ್ಲಾ ಕಾರಿಯವರೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ನಗರದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಮುಂಗಾರು ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮ ಹಾಗೂ ಜೂನ್ 1ರಂದು ಜಿಲ್ಲೆಗೆ ಮುಖ್ಯಮಂತ್ರಿಯವರ ಭೇಟಿ ಕುರಿತಂತೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಅವಘಡ ತಪ್ಪಿಸಲು ಎಲ್ಲ ತಾಲೂಕುಗಳಲ್ಲಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ದಿನದ 24 ತಾಸು ಕಾರ್ಯನಿರ್ವಹಿಸುವ ವಾರ್ ರೂಂಗಳನ್ನು ಜಿಲ್ಲೆಯ ಇಬ್ಬರು ಸಹಾಯಕ ಆಯುಕ್ತರು ತತ್‌ಕ್ಷಣ ಆರಂಭಿಸಬೇಕು, ಅಲ್ಲಿ ದೂರವಾಣಿ ಸಂಖ್ಯೆ, ಅಧಿಕಾರಿಗಳ ನಿಯೋಜನೆ ಹಾಗೂ ಪರಿಹಾರ ನೀಡುವ ಕೆಲಸಗಳನ್ನು ಮಾಡಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕಾಮಗಾರಿ ಕೈಗೊಂಡಿರುವ ಸ್ಥಳಗಳಲ್ಲಿ ಸೂಚನ ಫಲಕ ಅಳವಡಿಸಬೇಕು, ರಸ್ತೆಯಲ್ಲಿ ನಿಂತ ನೀರು ಹೋಗಲು ಅಗತ್ಯ ಕ್ರಮ ಕೈಗೊಳ್ಳಬೇಕು, ಸೂಚನಾ ಫಲಕ ಬಿದ್ದು ಹೋದಲ್ಲಿ ಪುನಃ ಅಳವಡಿಸಬೇಕು ಎಂದರು.
ಲೋಕೋಪಯೋಗಿ ಇಲಾಖೆಯವರು ಶಾಸಕರೊಂದಿಗೆ ಸಮಾ ಲೋಚಿಸಿ ರಸ್ತೆಹೊಂಡ ಮುಚ್ಚುವ ಕೆಲಸ ಮಾಡಬೇಕು, ಅನುದಾನ ಅಗತ್ಯವಿದ್ದರೆ ಒದಗಿಸಿಕೊಡಲಾಗುವುದು. ಗಾಳಿ ಮಳೆಗೆ ಬೀಳುವ ಕಂಬಗಳನ್ನು ಕೂಡಲೇ ಅಳವಡಿಸಬೇಕು, ಗ್ಯಾಂಗ್‌ಮನ್‌ಗಳನ್ನು ಸಕ್ರಿಯ ಗೊಳಿಸಿ, ವಿದ್ಯುತ್ ಪರಿವರ್ತಕ ಕೆಟ್ಟುಹೋದಲ್ಲಿ ಕೂಡಲೇ ಅವುಗಳನ್ನು ಬದಲಾಯಿಸಿಕೊಡಬೇಕು ಎಂದರು.
ಜೂ. 1: ಸಿಎಂ ಭೇಟಿ
ಜೂನ್ 1ರಂದು ಮುಖ್ಯಮಂತ್ರಿ ಗಳು ಜಿಲ್ಲೆಗೆ ಬರಲಿದ್ದು, ಮುಂಗಾರು ಬಗ್ಗೆ ವಿಸ್ತೃತ ಚರ್ಚೆ ಮಾಡಲಾಗುವುದು, ಅನುದಾನ ಅಗತ್ಯವಿದ್ದಲ್ಲಿ ಆ ಬಗ್ಗೆ ಕೋರಿಕೆ ಇರಿಸಲಾಗುವುದು ಎಂದು ಸಚಿವ ಸುನಿಲ್ ತಿಳಿಸಿದರು.
ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿ.ಪಂ. ಸಿಇಒ ಡಾ| ಕುಮಾರ್ ಮಾತನಾಡಿದರು. ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಎಸ್ಪಿ ಹೃಷಿಕೇಶ್ ಭಗವಾನ್ ಸೋನಾವಣೆ, ಡಿಸಿಪಿ ಹರಿರಾಂ ಶಂಕರ್, ಎಡಿಸಿ ಡಾ| ಕೃಷ್ಣಮೂರ್ತಿ ಹಾಜರಿದ್ದರು.