ಮಧ್ಯರಾತ್ರಿ ವೇಳೆಯಲ್ಲಿ ಜೋರಾಗಿ ಸುರಿಯುತ್ತಿರುವ ಮಳೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಭೀಕರ ಅಪಘಾತವೊಂದು ನಡೆಯುತ್ತದೆ. ನಂತರ ನೋಡಿದರೆ, ಅಪಘಾತಕ್ಕೆ ಒಳಗಾದ ವ್ಯಕ್ತಿಯೇ ನಾಪತ್ತೆ! ಘಟನೆಯ ಸ್ಥಳದಲ್ಲಿದ್ದ ಕೆಲವೇ ಕೆಲವರಿಗೆ ಕೂಡ ಈ ಅಪಘಾತ ಘಟನೆ ಅಸ್ಪಷ್ಟ ಚಿತ್ರಣ. ಹಾಗಾದರೆ, ನಿಜಕ್ಕೂ ಆ ರಾತ್ರಿ ನಡೆದಿದ್ದೇನು? ಅಪಘಾತ ಮಾಡಿದರು ಯಾರು? ಅಪಘಾತಕ್ಕೆ ಒಳಗಾದವರು ಏನಾದರು? ಇದರ ತನಿಖೆಯ ಹಿಂದೆ ಬೀಳುವ ಸಿಸಿಬಿ ಇನ್ಸ್‌ಪೆಕ್ಟರ್ ಅವಿನಾಶ್‌ಗೆ ಈ ಘಟನೆಯ ಹಿಂದಿನ ಒಂದೊಂದೆ ಎಳೆ ತೆರೆದುಕೊಳ್ಳುತ್ತದೆ. ಅಂತಿಮವಾಗಿ ಈ ಅಪಘಾತದ ಹಿಂದಿನ ಕಾರಣ ಯಾವುದು ಅನ್ನೋದು ಕ್ಲೈಮ್ಯಾಕ್ಸ್ ವೇಳೆಗೆ ರಿವೀಲ್ ಆಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಚೇಸ್’ ಸಿನಿಮಾದ ಕಥಾಹಂದರ.
ಸಿನಿಮಾದ ಟೈಟಲ್ಲೇ ಹೇಳುವಂತೆ, ನಡೆಯುವ ಅಪರಾಧ ಘಟನೆಯೊಂದನ್ನು ತನಿಖೆಯ ಮೂಲಕ ಹೇಗೆಲ್ಲ “ಚೇಸ್’ ಮಾಡುತ್ತ ಕಥೆ ಸಾಗುತ್ತದೆ ಅನ್ನೋದೇ “ಚೇಸ್’ ಸಿನಿಮಾ.
ಒಂದು ಅಪಘಾತ, ಮೆಡಿಕಲ್ ಮಾಫಿಯಾ, ವೈಟ್ ಕಾಲರ್ ಕ್ರೈಂ, ಪೊಲೀಸ್ ತನಿಖೆ, ವ್ಯವಸ್ಥೆಯ ಲೋಪ ಎಲ್ಲವನ್ನೂ ಜೋಡಿಸಿ ಒಂದು ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಸಿನಿಮಾವನ್ನು ಕುತೂಹಲಭರಿತವಾಗಿ ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಲೋಕ್ ಶೆಟ್ಟಿ. ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಸಿನಿಮಾಗಳಲ್ಲಿ ಕಥೆಯನ್ನು ಹೇಳುವ ರೀತಿ ಮತ್ತು ವೇಗ ಎರಡೂ ಕೂಡ ತುಂಬ ಮುಖ್ಯವಾಗಿರುತ್ತದೆ. ಅದನ್ನು ಅಚ್ಚುಕಟ್ಟಾಗಿ ಹೇಳುವಲ್ಲಿ “ಚೇಸ್’ ಯಶಸ್ವಿಯಾಗಿದೆ. ಸಿನಿಮಾದ ನಿರೂಪಣೆ ಗಂಭೀರವಾಗಿ ಸಾಗುವುದರಿಂದ ಬಹುತೇಕ ಪಾತ್ರಗಳು ಗಂಭೀರವಾಗಿಯೇ ಪ್ರೇಕ್ಷಕರ ಮುಂದೆ ಬರುತ್ತವೆ.
ಅವಿನಾಶ್ ನರಸಿಂಹರಾಜು, ರಾಧಿಕಾ ನಾರಾಯಣ್, ಶೀತಲ್ ಶೆಟ್ಟಿ, ಅರ್ಜುನ್ ಯೋಗೇಶ್, ಅರವಿಂದ್ ರಾವ್, ರಾಜೇಶ್ ನಟರಂಗ ತಮ್ಮ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಸಿನಿಮಾದಲ್ಲಿ ಕಾಮಿಡಿಗಾಗಿಯೇ ಅರವಿಂದ್ ಬೋಳಾರ್ ಪಾತ್ರವನ್ನು ಸೃಷ್ಟಿಸಿ, ತೆರೆಮೇಲೆ ತಂದಂತಿದೆ.
ಉಳಿದಂತೆ ಛಾಯಾಗ್ರಹಣ, ಸಂಕಲನ ಮತ್ತು ಹಿನ್ನೆಲೆ ಸಂಗೀತ, ತಾಂತ್ರಿಕ ಕಾರ್ಯಗಳು ತೆರೆಮೇಲೆ “ಚೇಸ್’ ಸಿನಿಮಾವನ್ನು ಗುಣಮಟ್ಟದಲ್ಲಿ ಕಾಣುವಂತೆ ಮಾಡಿದೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವ ಸಿನಿಪ್ರಿಯರಿಗೆ “ಚೇಸ್’ ನಿಂದ ಖಂಡಿತವಾಗಿಯೂ ಒಂದಷ್ಟು ಮನರಂಜನೆ ಸಿಗಬಹುದು
ಜಿ.ಎಸ್.ಕಾರ್ತಿಕ ಸುಧನ್