Advertisement

ಭಕ್ತಿ ಅಭಿಷೇಕಕ್ಕೆ ಸಿದ್ಧತೆ, ಮಹಾಮಸ್ತಕಾಭಿಷೇಕ ಕ್ಷಣಗಣನೆ

06:05 AM Feb 07, 2018 | Team Udayavani |

ಹಾಸನ: ತ್ಯಾಗಮೂರ್ತಿ ಶ್ರವಣಬೆಳಗೊಳದ ಶ್ರೀ ಬಾಹುಬಲಿ ಮೂರ್ತಿ ಮಹಾಮಜ್ಜನಕ್ಕೆ ಕ್ಷಣಗಣನೆ ಶುರುವಾಗಿದ್ದು, ಜೈನಕಾಶಿಯಲ್ಲಿ ಈಗ ಸಂಭ್ರಮದ ವಾತಾವರಣ.  ಈ ಮಹಾ ಮಹೋತ್ಸವದ ಯಶಸ್ಸಿಗೆ ಶ್ರವಣಬೆಳಗೊಳದ ಜೈನಮಠ ಹಾಗೂ ರಾಜ್ಯ ಸರ್ಕಾರ ಸರ್ವ ಪ್ರಯತ್ನ ಮಾಡಿವೆ. 1981 ರಿಂದ ಈ ವರೆಗೆ ಮೂರು ಮಹಾಮಸ್ತಕಾಭಿಷೇಕಗಳನ್ನು ಯಶಸ್ವಿಯಾಗಿ ಪೂರೈಸಿರುವ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ನಾಲ್ಕನೇ ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಹಗಲಿರಳು ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸ್ವಾಮೀಜಿಯವರು ಮಹಾಮಸ್ತಕಾಭಿಷೇಕದ ಸಿದ್ಧತೆ, ಈ ಸಂದರ್ಭದಲ್ಲಿನ ಜನ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ” ಉದಯವಾಣಿ ‘ ಮಾತನಾಡಿದ್ದಾರೆ.

Advertisement

ಮಹಾಮಸ್ತಕಾಭಿಷೇಕದ ಸಿದ್ಧತೆ ತೃಪ್ತಿ ತಂದಿದೆಯೇ  ?
ಇದುವರೆಗಿನ ಸಿದ್ಧತೆಯ ಬಗ್ಗೆ ತೃಪ್ತಿಯಿದೆ. ಈಗಾಗಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ.  ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ, ಜಿಲ್ಲಾಡಳಿತ, ರಾಷ್ಟ್ರಮಟ್ಟದ ಸಮಿತಿ ಸದಸ್ಯರು ಒಗ್ಗಟ್ಟಿನಿಂದ ಹಗಲು-ರಾತ್ರಿ ದುಡಿಯುತ್ತಿದ್ದಾರೆ. 16 ಆಚಾರ್ಯರು, 75 ಮುನಿಗಳು, ಮಾತಾಜಿ ಸೇರಿ 175 ಜನ ಕ್ಷೇತ್ರಕ್ಕೆ ಆಗಮಿಸಿದ್ದು, ಇನ್ನೂ ಬರುವವರಿದ್ದಾರೆ.  ಹಿಂದಿನ ಮಸ್ತಕಾಭಿಷೇಕಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಮುನಿಗಳು ಪಾಲ್ಗೊಳ್ಳುತ್ತಿರುವುದು ವಿಶೇಷ.

1981 ರ ಮಹಾಮಸ್ತಕಾಭಿಷೇಕಕ್ಕೆ ಹೋಲಿಸಿದರೆ ಈ ಬಾರಿಯ ಅನುಭವ ಹೇಗಿದೆ ?
ಅಂದಿಗೂ ಇಂದಿಗೂ ಭಾರೀ ಬದಲಾವಣೆ ಆಗಿದೆ. ಜಗತ್ತಿನಲ್ಲೇ ಬದಲಾವಣೆ ಮಹತ್ವದ ಬದಲಾವಣೆಗಳಾಗಿವೆ. ಜನರ ನಿರೀಕ್ಷೆಗಳೂ ಹೆಚ್ಚಿವೆ. ಜನರು ಒಳ್ಳೆಯ ಸೌಲಭ್ಯಗಳನ್ನು ನಿರೀಕ್ಷಿಸುತ್ತಾರೆ. ಆದರೆ ಮಹಾಮಸ್ತಕಾಭಿಷೇಕ ಧಾರ್ಮಿಕ ಕಾರ್ಯಕ್ರಮ ಭಕ್ತರು, ಯಾತ್ರಾರ್ಥಿಗಳು ಆಪೇಕ್ಷಿಸುವ ಸೌಲಭ್ಯಗಳನ್ನು ಒದಗಿಸಲಾಗದಿದ್ದರೂ ಮೂಲ ಸೌಕರ್ಯಗಳಿಗೆ ಕೊರತೆಯಾಗದಂತೆ ಸೌಕರ್ಯಗಳನ್ನು ಒದಗಿಸಲಾಗಿದೆ.

ಶ್ರವಣಬೆಳಗೊಳಕ್ಕೆ ಜನರನ್ನು ಸದಾ ಆಕರ್ಷಿಸಲು ಯೋಜನೆಗಳಿವೆಯೇ ?
ಶ್ರವಣಬೆಳಗೊಳ ಧಾರ್ಮಿಕ ಕ್ಷೇತ್ರ. ಪ್ರವಾಸಿ ತಾಣದಂತೆ ಜನರನ್ನು ಆಕರ್ಷಿಸಲಾಗದು. ಭಕ್ತಿ ಇದ್ದವರು ಸದಾ ಬರುತ್ತಿರುತ್ತಾರೆ. ಪ್ರವಾಸಿಗಳು ನದಿ, ಕಡಲ ತೀರ, ಜಂಗಲ್‌ ರೆಸಾರ್ಟ್‌ ನಂತಹ ತಾಣಗಳನ್ನು ಅಪೇಕ್ಷಿಸುತ್ತಾರೆ. ಆದರೆ ಶ್ರವಣಬೆಳಗೊಳದ ಅಂತಹ ಪ್ರವಾಸಿ ತಾಣವಲ್ಲ. ಇಲ್ಲಿಗೆ ಬರುವವರಿಗೆ ಧಾರ್ಮಿಕ ಭಾವನೆಗಳಿರಬೇಕು.

ಈ ಬಾರಿಯ ಮಹಾಮಸ್ತಕಾಭಿಷೇಕಕ್ಕೆ ಕೊಡುಗೆ ಏನಾದರೂ ಇದೆಯೇ ?
ಮಹಾಮಸ್ತಕಾಭಿಷೇಕದ ಧಾರ್ಮಿಕ ಆಚರಣೆಗಳ ಜೊತೆಜೊತೆಗೇ ಶ್ರವಣಬೆಳಗೊಳ ಮಠ ಜನ ಕಲ್ಯಾಣ ಕಾರ್ಯಕ್ರಮಗಳಿಗೂ ಒತ್ತು ನೀಡುತ್ತಾ ಬಂದಿದೆ. 2006 ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಪ್ರಾಕೃತ ಸಂಶೋಧನಾ ಕೇಂದ್ರವನ್ನು ಪುನರುಜ್ಜೀವನಗೊಳಿಸಿ ಧವಲ ಗ್ರಂಥಗಳ ಕನ್ನಡಾನುವಾದ ಸಂಪುಟಗಳನ್ನು ಪ್ರಕಟಿಸಲಾಗಿತ್ತು. ಈ ಬಾರಿಯ ಮಹಾ ಮಸಕ್ತಕಾಭಿಷೇಕದಲ್ಲಿ  ಪ್ರಾಕೃತ ವಿಶ್ವ ವಿದ್ಯಾನಿಲಯ ತೆರೆಯುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಮತ್ತಿತರ ಮೂಲ ಸೌಕರ್ಯಗಳ ಕಾಮಗಾರಿಗೆ ಚಾಲನೆ  ನೀಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಪೂರಕವಾಗಿ ಹಿಂದಿನ ಬಾರಿ ಜೈನ ಮಠದಿಂದ 100 ಹಾಸಿಗೆಗಳ ಮಕ್ಕಳ ಆಸ್ಪ$ತ್ರೆ ತೆರೆಯಲಾಗಿತ್ತು. ಈ ಬಾರಿ ಜನರಲ್‌ ಆಸ್ಪತ್ರೆ ತೆರೆಯಲಾಗಿದೆ. ಕ್ಷೇತ್ರದ ಅಭಿವೃದ್ದಿ , ಶೈಕ್ಷಣಿಕ ಸಂಸ್ಥೆಗಳ ಪ್ರಗತಿಗೆ ಒತ್ತು ನೀಡಲಾಗಿದೆ. ಮಹಾಮಸ್ತಕಾಭಿಷೇಕದಲ್ಲಿ  ತಾತ್ಕಾಲಿಕ ಹಾಗೂ ಶಾಶ್ವತ ಕಾರ್ಯಕ್ರಮಗಳಾಗಿರುತ್ತವೆ. ತ್ಯಾಗಿಗಳಿಗೆ, ಯಾತ್ರಾರ್ಥಿಗಳಿಗೆ ಸೌಲಭ್ಯಗಳು ತಾತ್ಕಾಲಿಕ, ಅಭಿವೃದ್ದಿ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದ ಕಾರ್ಯಕ್ರಗಳು ಶಾಶ್ವತ. ಅವರು ಈಗ ಆರಂಭವಾಗಿ ಮುಂದುವರಿಯುತ್ತವೆ.

Advertisement

ರಾಜ್ಯದಲ್ಲಿರುವ  ಜೈನ ಬಸದಿಗಳು, ಜಿನಾಲಗಳ ಪುನರುಜ್ಜೀವನದ ಉದ್ದೇಶವಿದೆಯೇ ?
ರಾಜ್ಯದಲ್ಲಿ ಬಹಳಷ್ಟು  ಜೈನ ಬಸದಿಗಳಿವೆ. ಅವುಗಳ ಪುನರುಜ್ಜೀವನಕ್ಕೆ  ರಾಜ್ಯ ಸರ್ಕಾರ ಹಾಗೂ ಕೇಂದ್ರ ಪುರಾತತ್ವ ಇಲಾಖೆ ನಿರ್ವಹಿಸುತ್ತವೆ. ಅದಕ್ಕಾಗಿ ಪ್ರತ್ಯೇಕವಾದ ತೀರ್ಥಕ್ಷೇತ್ರ ಸಮಿತಿ ಇದೆ. ಗ್ರಾಮಾಂತರ ಪ್ರದೇಶದಲ್ಲಿರುವ ಐತಿಹಾಸಿಕ ಶಿಥಿಲವಾಗಿರುವ ಸ್ಮಾರಕಗಳ ಜೀರ್ಣೋದ್ಧಾರಕ್ಕೆ  ಅನುದಾನ ನೀಡಲಿದೆ. ಇದು ರಾಷ್ಟ ಮಟ್ಟದಲ್ಲೂ ಇದೆ. ಈ ಸಮಿತಿಯೊಂದಿಗೆ ಶ್ರವಣಬೆಳಗೊಳ ಜೈನ ಮಠ ಸಹಕಾರ ನೀಡುತ್ತದೆ.

ವಿಂಧ್ಯಗಿರಿಗೆ ಎಸ್ಕಲೇಟರ್‌ ಅಥವಾ ರೋಪ್‌ವೇ ಬೇಕೆಂಬ ಬೇಡಿಕೆ ಬಹಳ ದಿನಗಳದ್ದು, ತಮ್ಮ ಅಭಿಪ್ರಾಯವೇನು?
ವಿಂಧ್ಯಗಿರಿ ಮತ್ತು ಬಾಹುಬಲಿ ಮೂರ್ತಿ ಖಂಡಶಿಲೆ. ಅದಕ್ಕೆ ಧಕ್ಕೆ ಆಗಬಾರದು. ಹಾಗಾಗಿ ಎಸ್ಕಲೇಟರ್‌ ಅಥವಾ ರೋಪ್‌ವೇ ಬಗ್ಗೆ  ಪುರಾತತ್ವ ಇಲಾಖೆಯ ಆಕ್ಷೇಪವಿದೆ. ಈಗ ಡೋಲಿ ಸೌಲಭ್ಯವಿದೆ. ಆದರೆ ವಿಂಧ್ಯಗಿರಿ ಮತ್ತು ಬಾಹುಬಲಿ ಮೂರ್ತಿಗೆ ಧಕ್ಕೆಯಾಗದಂತೆ ಯಾತ್ರಾರ್ಥಿಗಳಿಗೆ ಆಧುನಿಕ ತಂತ್ರಜ್ಞಾlನ ಅಳವಡಿಸಿಕೊಂಡು ಯಾವ ರೀತಿ ಸೌಕರ್ಯ ಕಲ್ಪಿಸಬೇಕೆಂಬ ಚಿಂತನೆ ಸಾಗಿದೆ. ಈ ಬಗ್ಗೆ ಪುರಾತತ್ವ ಇಲಾಖೆಯೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಜೈನ ಮಠ ಸಲಹೆ ಕೊಡಲಾಗದು.

ಈ ಬಾರಿಯ ಮಹಾಮಸ್ತಕಾಭಿಷೇಕದ ಸಂದೇಶವೇನು ?
ಬಾಹುಬಲಿ ಸಂದೇಶವೇ ನಿರಂತರ. ಇಂದಿನ ವಿಶ್ವಕ್ಕೆ ಬೇಕಾಗಿರುವುದು ಅಹಿಂಸೆ ಮತ್ತು ಶಾಂತಿ.  ಹಾಗಾಗಿ ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ಧಿ. ಇದು ಜಗತ್ತಿಗೆ ಸದಾಕಾಲ ಬೇಕಾಗಿದೆ.

ಇಂದು ರಾಷ್ಟ್ರಪತಿ ಚಾಲನೆ
ಶ್ರವಣಬೆಳಗೊಳದಲ್ಲಿನ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಸರ್ವಸಿದ್ಧತೆಗಳೂ ಭರದಿಂದ ಸಾಗಿದ್ದು, ಬುಧವಾರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ತ್ಯಾಗಿ ನಗರದಲ್ಲಿ  ನಿರ್ಮಿಸಿರುವ ಭವ್ಯ ಸಭಾಂಗಣ ಚಾವುಂಡರಾಯ ಮಂಟಪದಲ್ಲಿ ಬೆಳಿಗ್ಗೆ 10.45 ಗಂಟೆಗೆ ಆಚಾರ್ಯ ಶ್ರೀ 108 ವರ್ಧಮಾನ ಸಾಗರ ಮಹಾರಾಜರು ಹಾಗೂ ಶ್ರವಣಬೆಳಗೊಳ ಜೈನ ಮಠಾಧ್ಯಕ್ಷ  ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿಯವರು ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. 

ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next