ಬೆಳ್ತಂಗಡಿ: ಚಾರ್ಮಾಡಿ ಘಾಟಿ ರಸ್ತೆಗೆ ಕೊನೆಗೂ ಕಾಯಕಲ್ಪ ಸಿಗುವ ನಿರೀಕ್ಷೆಯಿದ್ದು 490 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸಮ್ಮತಿಸಿದೆ.
ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಮಂಗಳೂರು-ತುಮಕೂರು ವಿಭಾಗದಲ್ಲಿ ಬರುವ ಚಾರ್ಮಾಡಿ ಘಾಟಿ ದ.ಕ. ಹಾಗೂ ಚಿಕ್ಕಮಗಳೂರು ವಿಭಾಗಕ್ಕೆ ಹೊಂದಿಕೊಂಡಂತೆ 25 ಕಿ.ಮೀ. ಹಾಗೂ ದ.ಕ. ವಿಭಾಗಕ್ಕೆ ಹೊಂದಿಕೊಂಡು 11.20 ಕಿ.ಮೀ. ರಸ್ತೆಯ ಅಭಿವೃದ್ಧಿ ಆಗಬೇಕಿದೆ. ಇದಕ್ಕಾಗಿ ಚಾರ್ಮಾಡಿ ಹಳ್ಳದಿಂದ ಘಾಟಿಯ 11ನೇ ತಿರುವಿನ ತನಕದ 11.2 ಕಿ.ಮೀ. ವ್ಯಾಪ್ತಿಯ ರಸ್ತೆಗೆ ಡಿಪಿಆರ್ (Detail Project Report) ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.
2019ರ ಮಹಾಪ್ರವಾಹದ ವೇಳೆಯಲ್ಲಿ ಜರ್ಜರಿತವಾಗಿದ್ದ ಘಾಟಿಯಲ್ಲಿ ಹಲವು ತಿಂಗಳ ಕಾಲ ವಾಹನ ಸಂಚಾರಕ್ಕೆ ನಿರ್ಬಂಧ ಇತ್ತು. ಬಳಿಕ ಅನೇಕ ಹಂತದಲ್ಲಿ ಅಭಿವೃದ್ಧಿ ಕಾರ್ಯ ನಡೆಸಿದರೂ ಘನವಾಹನ ಸಂಚಾರಕ್ಕೆ ಈಗಲೂ ಯೋಗ್ಯವಾಗಿಲ್ಲ. 4 ಕಡೆಗಳಲ್ಲಿ ಏಕಮುಖವಾಗಿ ವಾಹನಗಳು ಸಂಚರಿಸುತ್ತಿವೆ. ಘಾಟಿಯ 11 ಕಡಿದಾದ ತಿರುವುಗಳಲ್ಲಿ ವಿಸ್ತರಣೆ ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ದ.ಕ. ಹಾಗೂ ಚಿಕ್ಕಮಗಳೂರು ವಿಭಾಗದ ಸಂಸದರ ಮೇಲೆ ಜನಸಾಮಾನ್ಯರ ಒತ್ತಡವೂ ನಿರಂತರವಾಗಿತ್ತು.
3ನೇ ಹಂತದ ಕಾಮಗಾರಿ: ಈಗಾಗಲೇ ಪ್ರಾಥಮಿಕ ಹಂತದ ಸಮೀಕ್ಷೆ ನಡೆದಿದ್ದು ರಸ್ತೆಯು 10 ಮೀ. ವಿಸ್ತರಣೆ ಹೊಂದಿ ದ್ವಿಪಥವಾಗಲಿದೆ. ಪ್ರಥಮ ಹಂತದಲ್ಲಿ ಬಿ.ಸಿ.ರೋಡ್-ಪುಂಜಾಲಕಟ್ಟೆ ವರೆಗೆ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ 33 ಕಿ.ಮೀ. ವ್ಯಾಪ್ತಿ 720 ಕೋ.ರೂ. ವೆಚ್ಚದಲ್ಲಿ ದ್ವಿಪಥ ಕಾಮಗಾರಿ ಪ್ರಗತಿಯಲ್ಲಿದೆ. ಮೂರನೇ ಹಂತವಾಗಿ ಚಾರ್ಮಾಡಿ ಘಾಟಿ ಅಭಿವೃದ್ಧಿಗೆ ವಾರ್ಷಿಕ ಯೋಜನೆಯಡಿ ಅನುಮೋದನೆ ದೊರೆತಿದೆ. ಈ ಮೂಲಕ ಮಂಗಳೂರಿನಿಂದ ಚಾರ್ಮಾಡಿ ಘಾಟಿ ವರೆಗೆ ಸುಮಾರು 90 ಕಿ.ಮೀ. ರಸ್ತೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುವ ನಿರೀಕ್ಷೆಯಿದೆ.
ಪ್ರಮುಖ ಪ್ರಯೋಜನಗಳು
-ಸಮಯ, ಇಂಧನ ಉಳಿತಾಯ
– ಶಿರಾಡಿಗೆ ಘಾಟಿಗೆ ಪರ್ಯಾಯ ರಸ್ತೆ
– ಚಿಕ್ಕಮಗಳೂರು ಮಂದಿಗೆ ವೈದ್ಯಕೀಯ ಸೇವೆ ಸುಲಭ
– ವಾಣಿಜ್ಯೋದ್ಯಮ, ವ್ಯಾಪಾರ, ವಹಿವಾಟು, ಸರಕು ಸಾಗಣೆ ಸುಲಲಿತ
ಪ್ರಸ್ತುತ ದೇಶದ 21 ರಾ.ಹೆ. ಅಭಿವೃದ್ಧಿ ಯೋಜನೆಗಳಲ್ಲಿ 588 ಕಿ.ಮೀ. ರಸ್ತೆ 7,745 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಇದರಲ್ಲಿ ಚಾರ್ಮಾಡಿ ಘಾಟಿಯೂ ಸೇರಿದೆ. ಈ ಬಗ್ಗೆ ಅ. 25ರೊಳಗೆ ಡಿಪಿಆರ್ ಪೂರ್ಣಗೊಳಿಸಿ ವರದಿ ಸಲ್ಲಿಸಲು ರಾಷ್ಟ್ರೀಯ ಹೆದ್ದಾರಿ ವಲಯಗಳಿಗೆ ಸೂಚಿಸಲಾಗಿದೆ.
– ಮೌಲಿಕ್ ಎ., ಕಾರ್ಯನಿರ್ವಾಹಕ ಎಂಜಿನಿಯರ್, ಯೋಜನಾ ವಿಭಾಗ,
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ