Advertisement
‘ನಾವು ರಾತ್ರಿ 8ಕ್ಕೆ ಬೆಂಗಳೂರಿನಿಂದ ಹೊರಟೆವು. ಮಳೆ ಸುರಿಯುತ್ತಿದ್ದ ಸಮಾಚಾರ ಕೇಳಿ ಚಾರ್ಮಾಡಿ ಬ್ಲಾಕ್ ಆಗಬಹುದೇ ಎಂಬ ಆತಂಕ ಕಾಡತೊಡಗಿತು. ವಿಚಾರಿಸಿದಾಗ ಯಾವುದೇ ಅಡೆತಡೆ ಇಲ್ಲ ಎಂಬ ಮಾಹಿತಿ ಸಿಕ್ಕಿತು. ಹಾಸನದಲ್ಲಿ ಕೇಳಿದಾಗ ಸ್ವಲ್ಪ ಬ್ಲಾಕ್ ಇದೆ. ನಾವು ಬಂದೆವು. ನೀವೂ ಹೋಗಬಹುದು ಎಂದು ಎದುರಿನ ಬಸ್ ಚಾಲಕ ತಿಳಿಸಿದರು. ಸಮಾಧಾನವಾಯಿತು. ಅಣ್ಣಪ್ಪ ಗುಡಿಯಿಂದ ಮುಂದೆ ಬರುತ್ತಿದ್ದಂತೆ ಕೆಲವು ವಾಹನಗಳು ನಿಧಾನವಾಗಿ ಸಂಚರಿಸುವುದು ಕಂಡಿತು. ಇನ್ನೇನು ಕೊನೆಯ ತಿರುವಿಗೆ ಸ್ವಲ್ಪ ದೂರ ಇದೆ ಎನ್ನುವಾಗ ಸಂಚಾರವೇ ಸ್ಥಗಿತಗೊಂಡಿತ್ತು. ನಮ್ಮದೇ ಡಿಪೋದಿಂದ 10 ನಿಮಿಷ ಮೊದಲು ಹೊರಟಿದ್ದ ಬಸ್ ಮಣ್ಣು ಕುಸಿತ ಸ್ಥಳದಿಂದ ಮುಂದಕ್ಕೆ ದಾಟಿತ್ತು. ಕೆಲವೇ ಹೊತ್ತಿನಲ್ಲಿ ನಮ್ಮ ಹಿಂದೆ ನೂರಾರು ವಾಹನಗಳ ಸಾಲಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ವಿನಾಯಕ್.
ಹತ್ತು ತಾಸು ವಿಳಂಬ
ಚಾರ್ಮಾಡಿಯಲ್ಲಿ ರಸ್ತೆ ತಡೆಯುಂಟಾದ ಹಿನ್ನೆಲೆಯಲ್ಲಿ ಉಡುಪಿ ಮತ್ತು ಕುಂದಾಪುರಕ್ಕೆ ಜೂ. 12ರ ಬೆಳಗ್ಗೆ ಬರಬೇಕಾಗಿದ್ದ ಬಸ್ ಗಳು ಸುಮಾರು 10 ತಾಸು ವಿಳಂಬವಾಗಿ ಉಡುಪಿ ತಲುಪಿದವು. ‘ಕೊಟ್ಟಿಗೆಹಾರ ತಲುಪುವಾಗಲೇ ಚಾರ್ಮಾಡಿಯಲ್ಲಿ ಮಣ್ಣು ಕುಸಿತ, ರಸ್ತೆ ಬ್ಲಾಕ್ ಆಗಿರುವ ಮಾಹಿತಿ ಕೆಲವು ಚಾಲಕರಿಗೆ ಸಿಕ್ಕಿತ್ತು. ಹಾಗಾಗಿ ಅವರು ಕೊಟ್ಟಿಗೆಹಾರ- ಕಳಸ- ಬಜಗೋಳಿ ಮಾರ್ಗವಾಗಿ ಉಡುಪಿಗೆ ಆಗಮಿಸಿದರು. ನಿನ್ನೆ ಸಂಜೆ 8 ಗಂಟೆಗೆ ಉಡುಪಿಯಿಂದ ಬೆಂಗಳೂರಿಗೆ ಹೊರಟಿದ್ದ ಒಂದು ಬಸ್‌ನ ಪ್ರಯಾಣವನ್ನು ರದ್ದುಗೊಳಿಸಿದೆವು. ಚಿಕ್ಕಮಗಳೂರು ಕಡೆಗೆ ತೆರಳುವವರಿಗೆ ಅನುಕೂಲವಾಗಲು ಮತ್ತು 1.30 ತಾಸಿನ ಪ್ರಯಾಣ ಕಡಿಮೆ ಮಾಡುವುದಕ್ಕಾಗಿ ಮಡಿಕೇರಿಯ ಬದಲು ಚಾರ್ಮಾಡಿಯನ್ನು ಬಳಸುತ್ತೇವೆ. ಶಿರಾಡಿ ರಸ್ತೆ ತೆರವಾದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ’ ಎಂದು ಉಡುಪಿ ಖಾಸಗ್ ಬಸ್ ಗಳ ಏಜೆಂಟರೊಬ್ಬರು ತಿಳಿಸಿದರು. ಜೂ. 12ರಂದು ಧರ್ಮಸ್ಥಳ- ಚಾರ್ಮಾಡಿ ಮಾರ್ಗವಾಗಿ ಬೆಂಗಳೂರಿಗೆ ಹೋಗಬೇಕಾಗಿದ್ದ ಒಂದು KSRTC ಗ್ರಾಮಾಂತರ ಸಾರಿಗೆ ಹಾಗೂ ಒಂದು ರಾಜಹಂಸ ಬಸ್ ನ ಪ್ರಯಾಣವನ್ನು ರದ್ದುಪಡಿಸಲಾಯಿತು. ಉಳಿದ ಬಸ್ ಗಳು ಮಡಿಕೇರಿ ಮೂಲಕ ಬೆಂಗಳೂರಿಗೆ ಸಂಚರಿಸಿವೆ.
Related Articles
ಮಳೆ ಒಂದು ನಿಮಿಷವೂ ಬಿಡುವು ನೀಡಿರಲಿಲ್ಲ. 2.30ಕ್ಕೆ ನಾವು ಚಾರ್ಮಾಡಿಯ ಅಣ್ಣಪ್ಪ ಗುಡಿಗಿಂತ ಮುಂದೆ ಬಂದಿದ್ದೆವು. ಅಲ್ಲಿನ ಸ್ಥಿತಿ ಎನಿಸುವಾಗ ಈಗಲೂ ಆತಂಕವಾಗುತ್ತದೆ. ನಾನು ಬಸ್ ನಿಲ್ಲಿಸಿ ಚಕ್ರಗಳ ಗಾಳಿ ಚೆಕ್ ಮಾಡಲು ಕೆಳಗಿಳಿದೆ. ಅಷ್ಟರಲ್ಲೇ ನಮ್ಮ ಹಿಂದಿದ್ದ ಓಮ್ನಿ ಕಾರು ಮೇಲೆ ಮರವೊಂದು ಉರುಳಿಬಿತ್ತು. ಆತಂಕದಿಂದ ಬಸ್ ನೊಳಗೆ ಓಡಿ ಬಂದೆ ಎಂದರು ವಿನಾಯಕ್.
Advertisement
ಬಸ್ಸಿನೊಳಗಿದ್ದ ಯಾರೂ ನಿದ್ರಿಸಲಿಲ್ಲನಮ್ಮ ಬಸ್ ನಲ್ಲಿ 19 ಮಂದಿ ಇದ್ದರು. ಒಬ್ಬಳೇ ಮಹಿಳೆ. ಅವರೂ ಗಾಬರಿಗೊಂಡಿದ್ದರು. ನಾನು, ಕಂಡಕ್ಟರ್ ದಯಾನಂದ್ ಸೇರಿದಂತೆ ಎಲ್ಲರೂ ಕಣ್ರೆಪ್ಪೆ ಮುಚ್ಚದೆ ಬೆಳಕು ಹರಿಯುವುದನ್ನೇ ಕಾಯುತ್ತಿದ್ದೆವು. ಬೆಳಗ್ಗೆ 10ರ ಸುಮಾರಿಗೆ ಅಲ್ಲಿಯೇ ಸಿಕ್ಕ ಮಾವಿನ ಹಣ್ಣುಗಳನ್ನು ತಿಂದೆವು. ಇತರ ವಾಹನಗಳಲ್ಲಿದ್ದ ಮಹಿಳೆ, ಮಕ್ಕಳಿಗೆ ಬಿಸ್ಕತ್ ನೀಡಲಾಯಿತು. ಮಧ್ಯಾಹ್ನ ಊಟ ಕೊಟ್ಟರು. ಕೊನೆಗೂ ಸಮಸ್ಯೆ ಕಳೆದು ವಾಹನ ಸಂಚಾರ ಆರಂಭವಾದಾಗ ಸುಮಾರು 2.45. ಅಲ್ಲಿಂದ ಹೊರಟು ಉಡುಪಿಗೆ ಬಂದೆವು. ಮರಗಳು ಬೀಳುವುದು, ಮಣ್ಣಿನೊಳಗಿಂದ ನೀರು ಒಸರುತ್ತಿದ್ದುದು ಎಲ್ಲವೂ ಆ ಕತ್ತಲೆಯಲ್ಲಷ್ಟೇ ಅಲ್ಲ, ಈಗ ನೆನಪಿಸಿಕೊಂಡರೂ ಭಯವಾಗುತ್ತದೆ. ಸುರಕ್ಷಿತವಾಗಿ ಉಡುಪಿಗೆ ತಲುಪಿದಾಗ ಆದ ಖುಷಿ ಅಷ್ಟಿಷ್ಟಲ್ಲ ಎನ್ನಲು ಮರೆಯಲಿಲ್ಲ ವಿನಾಯಕ್.