ಚಾರ್ಕೋಪ್, ಅ. 11: ಶರನ್ನವರಾತ್ರಿಯ ಅಂಗವಾಗಿ ಚಾರ್ಕೋಪ್ ಕನ್ನಡಿಗರ ಬಳಗದ 22ನೇ ವಾರ್ಷಿಕ ಶಾರದಾ ಮಹಾಪೂಜೆ ಅ. 11ರಂದು ಚಾರ್ಕೋಪ್ ಕನ್ನಡಿಗರ ಬಳಗದ ಕನ್ನಡ ಭವನ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳೊಂದಿಗೆ ಜರಗಿತು.
ನಾಗೇಶ್ ಭಟ್ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನ ಕಾರ್ಯಕ್ರಮಗಳು ಜರಗಿದ ಬಳಿಕ ಬಳಗದ ಅಧಿದೇವತೆ ಶ್ರೀ ಶಾರದಾಂಬೆಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮಹೇಂದ್ರ ಕಾಂಚನ್ ಮತ್ತು ಸುಮಿತ್ರಾ ಕಾಂಚನ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ಬಳಗದ ಸದಸ್ಯರೊಂದಿಗೆ ಮಹಾಮಂಗಳಾರತಿ ಜರಗಿತು. ಧಾರ್ಮಿಕ ಕಾರ್ಯಕ್ರಮದ ಬಳಿಕ ತೀರ್ಥ ಪ್ರಸಾದ
ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಂ. ಕೃಷ್ಣ ಎನ್. ಶೆಟ್ಟಿ ಮಾತನಾಡಿ, ಕೊರೊನಾ ವಾತಾವರಣದ ನಡುವೆಯೂ ಕಾರ್ಯಕ್ರಮಗಳನ್ನು ನಡೆಸಿದ ಹೆಗ್ಗಳಿಕೆ ನಮ್ಮ ಬಳಗದ್ದಾಗಿದೆ. ಇದಕ್ಕೆಲ್ಲ ಬಳಗವು ಹಿಂದಿನಿಂದಲೂ ನಂಬಿಕೊಂಡು ಬಂದಿದ್ದ ಶ್ರೀ ಶಾರದಾ ಮಾತೆಯ ಅನುಗ್ರಹ ಕಾರಣ ಎಂದೇ ಹೇಳಬಹುದು. ಮುಂದೆ ಬಳಗವು ಕೆಲವೊಂದು ಕಾರ್ಯಕ್ರಮವನ್ನು ಆಯೋಜಿಸಲು ಯೋಜನೆ ಹಮ್ಮಿಕೊಂಡಿದ್ದು, ಬಳಗದ ಸದಸ್ಯರಾದ ತಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಬೇಕಾಗಿ ವಿನಂತಿಸಿದರು.
ಬಳಗದ ಗೌರವ ಪ್ರಧಾನ ಕಾರ್ಯ ದರ್ಶಿ ರಘುನಾಥ ಎನ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾನಗರದಲ್ಲಿ ಸಾಂಕ್ರಾಮಿಕ ರೋಗದ ಹಾವಳಿ ಕಡಿಮೆಯಾಗಿ ಜನರು ನೆಮ್ಮದಿಯತ್ತ ಸಾಗುತ್ತಿದ್ದಾರೆ. ಬಳಗವು ಕಳೆದ ಒಂದೂವರೆ ವರ್ಷಗಿಂತಲೂ ಹೆಚ್ಚು ಕಾಲದ ಕೋವಿಡ್ ಸಂಕಷ್ಟದ ಸಮಯದಲ್ಲೂ ವಾರ್ಷಿಕ ಪೂಜೆ, ಸಮಾಜಪರ ಕಾರ್ಯಕ್ರಮಗ ಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದೆ.
ಮುಂಬರುವ ದಿನಗಳಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಕೆಲವೊಂದು ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನು ಬಳಗವು ಹೊಂದಿದ್ದು, ಸದಸ್ಯರೆಲ್ಲರೂ ಸಂಪೂರ್ಣವಾಗಿ ಸಹಕಾರ ನೀಡಬೇಕು ಎಂದರು. ಬಳಗದ ಸಮಗ್ರ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಬಳಗದ ಹಿರಿಯ ವಿಶ್ವಸ್ತ ಎಂ. ಎಸ್. ರಾವ್ ಅವರು ಪ್ರಸಕ್ತ ಅನಾರೋಗ್ಯದ ಲ್ಲಿದ್ದು, ಶ್ರೀ ಶಾರದಾಂಬೆಯ ಅನುಗ್ರಹ ದಿಂದ ಶೀಘ್ರವಾಗಿ ಗುಣಮುಖರಾಗಿ ಮತ್ತೆ ಬಳಗದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಶಕ್ತಿ, ಸಾಮರ್ಥ್ಯ, ಆರೋಗ್ಯ ಭಾಗ್ಯ ದೊರಕಲೆಂದು ನಮ್ಮೆಲ್ಲರ ಹಾರೈಕೆ ಎಂದು ಹೇಳಿ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಸ್ತ ಸದಸ್ಯರಿಗೆ ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್. ಶೆಟ್ಟಿ ವಂದಿಸಿದರು.
ಬೆಳಗ್ಗೆ 8ರಿಂದ 11ರ ವರೆಗೆ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಗದ ಸದಸ್ಯರಿಂದ ಭಜನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಬಳಗದ ಗೌರವ ಕೋಶಾಧಿಕಾರಿ ಗೌರಿ ಡಿ. ಪಣಿಯಾಡಿ, ಉಪಾಧ್ಯಕ್ಷರಾದ ಕೃಷ್ಣ ಟಿ. ಅಮೀನ್, ಚಂದ್ರಶೇಖರ ಎಸ್. ಶೆಟ್ಟಿ, ಜತೆ ಕಾರ್ಯದರ್ಶಿ ವಿಜಯ ಡಿ. ಪೂಜಾರಿ, ಜತೆ ಕೋಶಾಧಿಕಾರಿ ರಮೇಶ್ ಸಿ. ಕೋಟ್ಯಾನ್, ವಾರ್ಷಿಕೋತ್ಸವ ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಚೇವಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿ, ವಿಶ್ವಸ್ತರಾದ ಜಯ ಸಿ. ಶೆಟ್ಟಿ, ರಶ್ಮಿ ಆಚಾರ್ಯ, ಯಮುನಾ ಸಾಲ್ಯಾನ್, ರಜನಿ ಆರ್. ಶೆಟ್ಟಿ, ಶುಭಾ ಸುವರ್ಣ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಶಾರದಾ ಪೂಜೆಯಲ್ಲಿ ಪಾಲ್ಗೊಂಡು ಸಹಕರಿಸಿದರು.
ಚಿತ್ರ-ವರದಿ: ರಮೇಶ್ ಉದ್ಯಾವರ