Advertisement

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಚರಂತಿಮಠ ವಿರೋಧ

11:18 AM May 19, 2020 | Suhan S |

ಬಾಗಲಕೋಟೆ: ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷರೂ ಆಗಿರುವ ಬಾಗಲಕೋಟೆ ಶಾಸಕ ಡಾ| ವೀರಣ್ಣ ಚರಂತಿಮಠ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಸರ್ಕಾರಕ್ಕೆ ನಷ್ಟವಾಗಲಿದೆ. ಈಗಾಗಲೇ ಇರುವ ಎಪಿಎಂಸಿ ವ್ಯವಸ್ಥೆಯಿಂದ ರೈತರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೂ ಇದರ ತಿದ್ದುಪಡಿ ಅಗತ್ಯದಬಗ್ಗೆ ತಿಳಿದಿಲ್ಲ ಎಂದರು. ರೈತರ ಉತ್ಪನ್ನಗಳನ್ನು ಎಪಿಎಂಸಿ ಮೂಲಕ ಮಾರಿದರೆ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತದೆ. ಎಪಿಎಂಸಿಗೂ ಶೇ. ಒಂದೂವರೆಯಷ್ಟು ಸೆಸ್‌ ಬರುತ್ತದೆ. ಸರ್ಕಾರಕ್ಕೂ ಜಿಎಸ್‌ಟಿ ಮೂಲಕತೆರಿಗೆ ಬರುತ್ತದೆ. ರೈತರು ಎಲ್ಲೆಂದರಲ್ಲಿ ತಮ್ಮ ಬೆಳೆ ಮಾರಾಟ ಮಾಡಿದರೆ, ಖರೀದಿ ಮಾಡಿದವರು ಹಣ ಕೊಡದೆ ಮೋಸ ಮಾಡುವ ಸಾಧ್ಯತೆ ಹೆಚ್ಚು. ಇಂತಹ ಪ್ರಕರಣಗಳು ಸಾಕಷ್ಟು ನಡೆದಿವೆ. ಎಪಿಎಂಸಿ ಮೂಲಕ ಮಾರಿದರೆ ರೈತರಿಗೆ ಮೋಸವಾಗಲ್ಲ ಎಂದರು.

ಮಹಾರಾಷ್ಟ್ರದಲ್ಲಿ ದೇವೇಂದ್ರ ಫ‌ಡ್ನವೀಸ್‌ ಸಿಎಂ ಆಗಿದ್ದಾಗ ವಿಧಾನಸಭೆಯಲ್ಲಿ ಈ ಕಾನೂನು ತಿದ್ದುಪಡಿ ಮಾಡಲಾಗಿತ್ತು. ಆದರೆ ವಿಧಾನ ಪರಿಷತ್‌ ನಲ್ಲಿ ಅದನ್ನು ಹಿಂಪಡೆಯಲಾಯಿತು. ಹೀಗಾಗಿ ಮಹಾರಾಷ್ಟ್ರದಲ್ಲಿ ಈ ತಿದ್ದುಪಡಿ ಜಾರಿಯಾಗಿಲ್ಲ. ಆದ್ದರಿಂದ ರಾಜ್ಯದಲ್ಲೂ ಈ ಹಿಂದಿನ ಎಪಿಎಂಸಿ ಪದ್ಧತಿಯನ್ನೇ ಮುಂದುವರಿಸಲು ಸಿಎಂಗೆ ಮನವಿ ಮಾಡುತ್ತೇನೆ ಎಂದರು.

ವಿಧಾನಸಭೆಯಲ್ಲಿ ಚರ್ಚೆ: ಎಪಿಎಂಸಿ ಕಾಯ್ದೆ ತಿದ್ದುಪಡಿ ಕಾನೂನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದೆ. ಇದಕ್ಕೆ ಕರಡು ಸಿದ್ಧಗೊಳ್ಳಬೇಕು. ಆಗ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತದೆ. ನನ್ನ ಅಭಿಪ್ರಾಯ ಕುರಿತೂ ಚರ್ಚಿಸುತ್ತೇವೆ. ಆದರೆ, ತಿದ್ದುಪಡಿ ಕಾನೂನು ಪರವಾಗಿ ಮತ ಹಾಕಲೇಬೇಕಾದ ಅನಿವಾರ್ಯತೆ ಬಂದರೆ ನಾವೂ ಪರವಾಗಿ ಮತ ಹಾಕುತ್ತೇವೆ. ಆದರೆ, ನಮ್ಮ ಅಭಿಪ್ರಾಯ ಹೇಳಿಕೊಳ್ಳಲು ಅವಕಾಶವಿದೆ. ಅದನ್ನು ಹೇಳುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next