Advertisement

ಚಾರ್ವಾಕ: ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕಿತು ಮನ್ನಣೆ

08:30 AM Sep 05, 2017 | Team Udayavani |

ಚಾರ್ವಾಕ: ತಮಗಿರುವ ಹಕ್ಕು ಮತ್ತು ಅವಕಾಶವನ್ನು ಬಳಸಿಕೊಂಡು ಅವ್ಯವಸ್ಥೆಯನ್ನು ಸರಿಪಡಿಸಿ ಕೊಳ್ಳುವುದು ಹೇಗೆ ಎಂಬುದಕ್ಕೆ ಈ ಗ್ರಾಮಸ್ಥರೇ ಸಾಕ್ಷಿ.

Advertisement

ಹದಿನೈದು ವರ್ಷಗಳ ಹಿಂದೆ ಡಾಮರೀಕರಣಗೊಂಡ ಚಾರ್ವಾಕ-ಎಡಮಂಗಲ 12 ಕಿ.ಮೀ ಜಿ.ಪಂ. ರಸ್ತೆ ತೀರಾ ಹದಗೆಟ್ಟಿತ್ತು. ಎಷ್ಟೇ ಮನವಿ ಮಾಡಿದರೂ ಜನ ಪ್ರತಿನಿಧಿಗಳು ಸ್ಪಂದಿಸಿರಲಿಲ್ಲ.

ಸ್ಥಳೀಯರು ಶ್ರಮದಾನದ ಮೂಲಕ ರಸ್ತೆ ಹೊಂಡ ಮುಚ್ಚಿದಾಗ ಸ್ವಲ್ಪ ಪರಿಸ್ಥಿತಿ ಸುಧಾರಿಸುತ್ತಿತ್ತು. ಬಳಿಕ ಮತ್ತೆ ಸಮಸ್ಯೆ ಇದ್ದದ್ದೇ. ಶಾಸಕರಿಗೆ ಮತ್ತು ಸಂಸದರಿಗೆ ಅವರ ವ್ಯಾಪ್ತಿಯಲ್ಲಿ ಇಂತಹ ಹಲವು ರಸ್ತೆಗಳಿದ್ದರಿಂದ ಕೊಟ್ಟ ಗಮನ ಅಷ್ಟಕ್ಕಷ್ಟೇ. ಸ್ಥಳೀಯ ನಾಯಕರು ಒತ್ತಡ ಹೇರುತ್ತಿದ್ದ ಪರಿಣಾಮವಾಗಿ ಹೊಂಡಗಳಿಗೆ ತೇಪೆ ಹಾಕ ಲಾಗುತ್ತಿತ್ತು. ಆದರೆ ಗ್ರಾಮ ಸ್ಥರಿಗೆ ಅತೀ ಅಗತ್ಯದ ರಸ್ತೆ ಇದಾಗಿತ್ತು. ಈ ಹಿನ್ನೆಲೆಯಲ್ಲಿ  ಮರು ಡಾಮರೀಕರಣಕ್ಕೆ ಗ್ರಾಮಸ್ಥರು ದೃಢ‌ ನಿಶ್ಚಯ ಮಾಡಿದರು.

ಸೆಳೆದ ನೋಟಾ
ಜಿಲ್ಲಾ ಪಂಚಾಯತ್‌  ಚುನಾವಣೆ ಯಲ್ಲಿ ನೋಟಾ ಮತದಾನ ಅಭಿಯಾನ ಜರಗಿತು. ಗ್ರಾಮಸ್ಥರೆಲ್ಲಾ ದೇಶದಲ್ಲೇ ಒಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗೆ ಹಾಕುವಷ್ಟು ಮತವನ್ನು ನೋಟಾಕ್ಕೆ ಹಾಕಿದರು. ಇದು ರಾಜ್ಯವ್ಯಾಪಿ ಸುದ್ದಿ ಯಾಯಿತು. ಇದಾದ ಬಳಿಕ ಜನರು ಸುಮ್ಮನಾಗಲಿಲ್ಲ. 

ನೋಟಾ ಕುರಿತ ವಿದ್ಯ ಮಾನಗಳನ್ನು ಗ್ರಾಮಸ್ಥರು ಟ್ವಿಟ್ಟರ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ನಿತಿನ್‌ ಗಡ್ಕರಿ ಅವರಿಗೆ ತಲುಪಿಸಿದರು. ಗ್ರಾಮದ ಯುವಪಡೆ ಪ್ರಧಾನಿ ಕಾರ್ಯಾಲಯ, ಸಾರಿಗೆ ಸಚಿವಾಲಯಕ್ಕೂ ಪತ್ರ ಬರೆಯಿತು. 

Advertisement

ಕೇಂದ್ರ ಸರಕಾರಕ್ಕೆ ಬರೆದ ಪತ್ರಕ್ಕೆ ಉತ್ತರವೂ ಬಂತು. ಜಿಲ್ಲಾ ಪಂಚಾಯತ್‌ ಸಿಇಓ ಮತ್ತಿತರು  ಅಧಿಕಾರಿಗಳು ಬಂದು ಯುವಪಡೆಯ ದೂರು ಪರಿಶೀಲಿಸಿ, ರಸ್ತೆಯ ದು:ಸ್ಥಿತಿಯ ಬಗ್ಗೆ ವರದಿ ಯನ್ನೂ ಸಲ್ಲಿಸಿತು. ಜತೆಗೆ ಪುತ್ತೂರು ಎಸಿಯಾಗಿದ್ದ ಡಾ.ರಾಜೇಂದ್ರರೂ ರಸ್ತೆ ದು:ಸ್ಥಿತಿ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಕೇಂದ್ರಕ್ಕೆ ಮನವಿ ರವಾನಿ ಸಿದ್ದರು. ಇವೆಲ್ಲವನ್ನೂ ಯುವಪಡೆ ಬೆನ್ನುಬಿಡದೇ ಹಿಂಬಾಲಿಸುತ್ತಿತ್ತು.

ಉದಯವಾಣಿ ವರದಿ
ಈ ರಸ್ತೆಯ ಅವ್ಯವಸ್ಥೆ ಕುರಿತು ಉದಯವಾಣಿ ನಿರಂತರವಾಗಿ ವರದಿ ಮಾಡಿ ಸಂಬಂಧಪಟ್ಟವರ ಗಮನ ಸೆಳೆದಿದ್ದನ್ನು ಸ್ಮರಿಸಬಹುದು.

ಇಂದು ಶಿಲಾನ್ಯಾಸ
ಚಾರ್ವಾಕ -ಎಡಮಂಗಲ ರಸ್ತೆಯ ಅಭಿವೃದ್ಧಿಗೆ ಸೆ.5ರಂದು ಚಾಲನೆ ದೊರೆ ಯಲಿದೆ. ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ಎಸ್‌.ಅಂಗಾರ ವಿವಿಧ ಜನಪ್ರತಿನಿಧಿಗಳು ಪಾಲ್ಗೊಳ್ಳುವರು.

ಸಂಸದ ,ಶಾಸಕರಿಗೂ ಒತ್ತಡ
ಇದರೊಂದಿಗೇ ಶಾಸಕರನ್ನು ಮತ್ತು ಸಂಸದರಲ್ಲಿ ಸ್ಥಳೀಯ ನಾಯಕರು ರಸ್ತೆ ಸ್ಥಿತಿಯನ್ನು ವಿವರಿಸಿದರು. ಕೊನೆಗೂ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು, ಸಂಸದರು ಸ್ಥಳೀಯರ ಒತ್ತಡಕ್ಕೆ ಮಣಿ ದರು. ಅಂತಿಮವಾಗಿ ಸುಳ್ಯ ಶಾಸಕರು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಮೂಲಕ ಗ್ರಾಮದ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ರೂ. ಬಿಡುಗಡೆ ಮಾಡಿದರು. ಇದರೊಂದಿಗೆ ಸ್ಥಳೀಯ ಮುಂದಾಳುಗಳ ಒತ್ತಡ, ಪ್ರಧಾನಿ ಕಾರ್ಯಾಲಯದ ಪತ್ರ ಎಲ್ಲದರ ಪರಿಣಾಮವಾಗಿ ಸಂಸದರ ಮೂಲಕ ಕೇಂದ್ರದ ಸಿಆರ್‌ಎಫ್‌ ನಿಧಿಯಿಂದ 5 ಕೋಟಿ ರೂ. ಬಿಡುಗಡೆಗೊಂಡಿತು. ಈಗ ಚಾರ್ವಾಕ ಗ್ರಾಮ ರಸ್ತೆಯೊಂದಿಗೆ ಹೊಸ ಅಭಿ ವೃದ್ಧಿಗೆ ಸಜ್ಜಾಗಿದೆ. ಅದಕ್ಕೆ ಕಾರಣ ಸ್ಥಳೀಯರ ಒಗ್ಗಟ್ಟು ಮತ್ತು ಪರಿಶ್ರಮ ಎಂಬುದು ಸಾಬೀತಾಗಿದೆ. 

-  ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next