ಕಲಬುರಗಿ: ನಾವು ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಮನೆ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಕಲಿಸುವಲ್ಲಿ ಹಿಂದೆ ಬಿದ್ದಿದ್ದೇವೆ ಎನ್ನುವುದು ವ್ಯಾಪಕವಾಗಿ ಕಂಡುಬರುತ್ತಿದೆ. ಆದ್ದರಿಂದ ಗುಣ (ವ್ಯಕ್ತಿತ್ವ) ಹೇಗೆ ಹೆಚ್ಚಿಸಬೇಕೆಂಬ ದೊಡ್ಡ ಜವಾಬ್ದಾರಿ ಎದುರಾಗಿರುವುದನ್ನು ನಿಭಾಯಿಸುವ ಕಾರ್ಯ ಸಾಹಿತ್ಯದಿಂದ ಪ್ರಮುಖವಾಗಿ ಆಗಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮಾಜಿ ಗೌರವ ಕಾರ್ಯದರ್ಶಿ ಜರಗನಹಳ್ಳಿ ಶಿವಶಂಕರ ಹೇಳಿದರು.
ಎರಡು ದಿನಗಳ ಕಾಲ ಇಲ್ಲಿನ ಕನ್ನಡ ಭವನದಲ್ಲಿ ನಡೆದ ಜಿಲ್ಲಾ 17ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ಬದುಕಿನಲ್ಲಿ ಎಲ್ಲವನ್ನು ಪಡೆದಿದ್ದರೂ ನಾವು ಏನೇನೋ ಕಳೆದುಕೊಂಡಂತೆ ಇದ್ದೇವೆ. ಆದ್ದರಿಂದ ಏನೇನೂ ಬರೆಯುವುದಕ್ಕಿಂತ ಸಮಾಜದ ಸ್ವಾಸ್ಥ್ಯಾ ಹೆಚ್ಚಿಸುವ ಸಾಹಿತ್ಯ ಹೊರ ಬರುವುದು ಹೆಚ್ಚು ಸಮಂಜಸ ಎನಿಸುತ್ತಿದೆ ಎಂದರು.
ಸಾಹಿತಿಗಳು ನಾಡಿಗೆ ನೀಡಿದ ಸಾಹಿತ್ಯ ಆತ್ಮಾವಲೋಕನ ಮಾಡಿಕೊಳ್ಳುವುದರ ಜತೆಗೆ ಇಂದಿನ ವರ್ತಮಾನಕ್ಕೆ ಹೇಗೆ ಬಳಕೆ ಮಾಡಬೇಕು ಎನ್ನುವ ಕಾರ್ಯವಾಗಬೇಕು ಎಂದರು.
ನಮ್ಮ ಮಹತ್ವ ನಾವು ಅರಿಯಬೇಕು. ನಡೆ-ನುಡಿಯಲ್ಲಿ ಒಂದಾಗಬೇಕು. ಹೇಗೆ ಹೂವು-ಹಣ್ಣು ತುಂಬಿದ ಮರ ಬಾಗುತ್ತದೆಯೋ ಅದೇ ರೀತಿ ನಾವು ಜ್ಞಾನ, ಹೃದಯ ಶ್ರೀಮಂತಿಕೆಯಿದ್ದರೆ ತಲೆ ಬಾಗಿ ಮುನ್ನಡೆಯುತ್ತೇವೆ. ಒಂದು ವೇಳೆ ಜಂಬ ಹೊಂದಿದ್ದರೆ ಒಣ ಮರದಂತೆ ಸೆಟೆದು ನಿಲ್ಲಬೇಕಾಗುತ್ತದೆ. ಪ್ರಮುಖವಾಗಿ ರಾಜಕಾರಣಿಗಳಿಂದು ಮಹಾತ್ಮಾಗಾಂಧೀಜಿ ಅವರ ಸತ್ಯಾನ್ವೇಷಣೆ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಈ ಭಾಗ ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದರು. ಸಮ್ಮೇಳನಾಧ್ಯಕ್ಷೆ ಡಾ| ನಾಗಾಬಾಯಿ ಬುಳ್ಳಾ ಸಮಾರೋಪ ಭಾಷಣ ಮಾಡಿ, ಕಲಬುರಗಿಯಲ್ಲಿ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಬೇಕಾಗಿದೆ ಎಂದು ಒತ್ತಾಯಿಸಿದರಲ್ಲದೇ ಸಾಹಿತ್ಯ ಸಂಶೋಧನೆಗೆ ಕೀಳರಿಮೆ ಬೇಡ. ಈ ಭಾಗದ ಸಾಹಿತ್ಯ,ಯುವ ಪ್ರತಿಭೆ ಗುರುತಿಸುವ ಹಾಗೂ ಪ್ರೋತ್ಸಾಹಿಸುವ ಕಾರ್ಯ ಸರ್ಕಾರದಿಂದ ಆಗಬೇಕಿದೆ ಎಂದರು.
ಕಸಾಪ ಕೇಂದ್ರ ಸಮಿತಿ ಗೌರವ ಕಾರ್ಯದರ್ಶಿ ಮ.ಚ ಚೆನ್ನಗೌಡ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಗೌರವ ಕೋಶಾಧ್ಯಕ್ಷ ದೌಲತ್‌ರಾಯ ಮಾಲಿಪಾಟೀಲ ಹಾಗೂ ಮುಂತಾದವರಿದ್ದರು.
ಟ್ರಾಫಿಕ್ ಜಾಮ್ ಬೆಂಗಳೂರಿನಲ್ಲಿ ರಸ್ತೆ ಮೇಲೆ ಟ್ರಾಫಿಕ್ ಜಾಮ್ ನೋಡಿದ್ದೇವೆ ಹಾಗೂ ನೋಡುತ್ತಾ ಇರುತ್ತೇವೆ. ಆದರೆ ಇಲ್ಲಿನ ಸಾಹಿತ್ಯ ಸಮ್ಮೇಳನ ಬಹಿರಂಗ ಅಧಿವೇಶನ ಹಾಗೂ ಸಮಾರೋಪದ ವೇದಿಕೆ ಮೇಲೆ ಟ್ರಾಫಿಕ್ (ಜನಜಂಗುಳಿ) ಜಾಮ್ ನೋಡಿದೆ.
ಜರಗನಹಳ್ಳಿ ಶಿವಶಂಕರ, ಹಿರಿಯ ಸಾಹಿತಿ