ವಾಡಿ: ಧನ ಸಂಪಾದನೆಗಿಂತ ಅಕ್ಷರ ವಿದ್ಯೆ ಸಂಪಾದನೆಯೇ ವಿದ್ಯಾರ್ಥಿಗಳ ಬದುಕಿನ ಬಹುದೊಡ್ಡ ಆಸ್ತಿ ಎಂದು ಕಲಬುರಗಿ ಸರಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ| ಕಲ್ಯಾಣರಾವ ಪಾಟೀಲ ಹೇಳಿದರು.
ಮಾಕಲ್ ನಾಗಮ್ಮ ಶಂಕ್ರಪ್ಪ ಪ್ರತಿಷ್ಠಾನದ ಮೂರನೇ ವಾರ್ಷಿಕೋತ್ಸವ ನಿಮಿತ್ತ ನಾಲವಾರ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದು ಉತ್ತೀರ್ಣರಾದ ವಿವಿಧ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಹಾಗೂ ಬಹುಮಾನ ವಿತರಣೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಓದುವ ಹವ್ಯಾಸ ಹೊಂದಿದ ವಿದ್ಯಾರ್ಥಿ ಸಾಧನೆ ಮಾಡುತ್ತಾನೆ. ಬದುಕಿನಲ್ಲಿ ಯಶಸ್ಸು ಕಾಣಲು ಕೌಶಲ್ಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ ಬಿ, ರಾಜ್ಯದಲ್ಲಿ ಅನಕ್ಷರತೆ ಪ್ರಮಾಣ ತಗ್ಗಿಸಲು ಸಾಕ್ಷರ ಕ್ರಾಂತಿಗೆ ಮುಂದಾಗಿರುವ ಸರಕಾರ, ಕೋಟ್ಯಂತರ ರೂ. ಅನುದಾನ ಖರ್ಚು ಮಾಡಿ ಹಲವು ಕಾರ್ಯಕ್ರಮಗಳ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಪರಿಣಾಮ ಸರಕಾರಿ ಶಾಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಸಾಕಷ್ಟು ಸುಧಾರಣೆ ಕಂಡಿದೆ. ಸರಕಾರದ ಆಶಯಕ್ಕೆ ಸ್ಪಂದಿಸಿ ಮಾಕಲ್ ಪ್ರತಿಷ್ಠಾನದಂತಹ ಸಾಮಾಜಿಕ ಸಂಸ್ಥೆಗಳು ಮಕ್ಕಳ ಪ್ರತಿಭೆ ಗುರುತಿಸುತ್ತಿರುವುದು ಶ್ಲಾಘನೀಯ ಎಂದು ಸ್ಮರಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಡಾ| ಬಿ.ಎಸ್. ಮಾಕಲ್ ಮಾತನಾಡಿ, ಕನ್ನಡ ಶಾಲೆ ಮಕ್ಕಳು ಬಡವರಾಗಿದ್ದು, ಪ್ರತಿಭೆಯುಳ್ಳವರಾಗಿರುತ್ತಾರೆ. ಸಾಕಷ್ಟು ಶ್ರಮವಹಿಸಿ ಕಠಿಣ ಅಭ್ಯಾಸ ಮಾಡುವ ಮಕ್ಕಳಿಗೆ ಪ್ರೋತ್ಸಾಹದಾಯಕವಾಗಿ ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದು ಉತ್ತೀರ್ಣರಾದ ಮಕ್ಕಳನ್ನು ಸನ್ಮಾನಿಸಿ ಬಹುಮಾನ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳ ಶೆ„ಕ್ಷಣಿಕ ಸ್ಥಿತಿಗತಿ
ಸುಧಾರಣೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ರಾಯಚೂರು ಕೃಷಿ ವಿವಿ ನಿರ್ದೇಶಕ ವೀರಣ್ಣಗೌಡ ಪರಸರೆಡ್ಡಿ, ಪ್ರತಿಷ್ಠಾನದ ಕಾರ್ಯದರ್ಶಿ ಡಾ| ಈಶ್ವರಯ್ಯ ಮಠ, ಲಿಂಗಾರೆಡ್ಡಿಗೌಡ ಬಾಸರೆಡ್ಡಿ ಮಾತನಾಡಿದರು. ಶಂಕ್ರಪ್ಪ ಮಾಕಲ್ ಅಧ್ಯಕ್ಷತೆ ವಹಿಸಿದ್ದರು. ಡಾ| ವೀರೇಶ ಎಣ್ಣಿ, ಶಿಕ್ಷಕರಾದ ವೆಂಕಟೇಶ ಮಲ್ಹಾರ, ಬುದ್ಧಿವಂತ ಬೋಸರೆ, ತಸ್ಲಿàಮಾಬೇಗಂ, ವಿಎಸ್‌ಎಸ್‌ಎನ್ ಅಧ್ಯಕ್ಷ ಭೀಮಾಶಂಕರ ನಿಂಗಣಗೌಡ, ಮುಖಂಡರಾದ ವೀರೇಶ ಯಾಗಾಪುರ, ಮೈಲಾರಿ ಮಳಬಾ, ಶಂಕರ ಟೇಲರ್ ಹಾಗೂ ಪೋಷಕರು ಪಾಲ್ಗೊಂಡಿದ್ದರು. ವಿವಿಧ ಶಾಲೆ ಪ್ರತಿಭಾವಂತ ವಿದ್ಯಾರ್ಥಿಗಳಾದ ಅಂಬಿಕಾ ಮಾಣಿಕರಾವ, ಪಲ್ಲವಿ ಜುಮ್ಮಣ್ಣ, ಅರಬಾಝಖಾನ್, ಚೇತನ ರೊಟ್ಟಿ, ಶೇರಿನ್ ಬೇಗಂ, ಹಬೀಬ್ ಉನೀಸ್ ಅವರನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು. ಈಶ್ವರ ಮಠ ನಿರೂಪಿಸಿ, ವಂದಿಸಿದರು.