Advertisement

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

01:45 AM Sep 20, 2024 | Team Udayavani |

ಯಕ್ಷಗಾನದಲ್ಲಿ ಪುರುಷ ವೇಷಗಳು, ಆ ವೇಷಗಳಿಗನುಸಾರ ಆಯುಧ ಧರಿಸಿ ಕಾಣಿಸಿಕೊಳ್ಳುವುದು ರೂಢಿ. ಉದಾ: ಈಶ್ವರನ ವೇಷ. ಸದಾ ತ್ರಿಶೂಲಧಾರಿಯಾಗಿರುತ್ತಾನೆ. ತ್ರಿಶೂಲ ಇಲ್ಲವಾದರೆ ಅದು ಈಶ್ವರನ ವೇಷ ಎಂದು ಅನ್ನಿಸುವುದೇ ಇಲ್ಲ. ಹಾಗೆ ಕಿರೀಟ, ಮುಂಡಾಸಿನ, ಕೇದಿಗೆ ಮುಂದಲೆ ವೇಷಗಳು ಹಾಗೂ ಕಸೆ ಸ್ತ್ರೀ ವೇಷಗಳು ಬಿಲ್ಲು ಬಾಣ, ಖಡ್ಗ ಇತ್ಯಾದಿ ಆಯುಧಗಳನ್ನು ಹಿಡಿದು ನಿರ್ವಹಣೆ ನೀಡುವುದು ಲಾಗಾಯ್ತಿ ನಿಂದ ಬಂದ ಕ್ರಮ.

Advertisement

ಆಯುಧ ಆ ವೇಷದ ಲಕ್ಷಣವನ್ನು ಸಾಂಕೇತಿ ಸುತ್ತದೆ. ಅದು ವೇಷ ಕ್ರಮ. ಸದಾ ಇರತಕ್ಕದ್ದು. ಇತ್ತೀಚೆಗೆ ಕೆಲವು ವೇಷ ಧಾರಿಗಳು ಕೆಲವು ಸಂದರ್ಭಗಳಲ್ಲಿ ಆಯುಧಗಳನ್ನು ಬದಿಗಿರಿಸಿ ಕುಣಿದು ಅಭಿನಯಿಸುವುದನ್ನು ಕಾಣುತ್ತಿದ್ದೇವೆ. ಇದರ ಯುಕ್ತಾ ಯುಕ್ತತೆಯ ಪರಾಮರ್ಶೆ ಇಂದಿನ ಅಗತ್ಯ.

ಆಯುಧ ಅಭಿನಯಕ್ಕೆ ತೊಡಕಾ ಗುತ್ತದೆ ಎಂಬ ಅಭಿಪ್ರಾಯ ಈಗಿನ ಕೆಲವು ಕಲಾವಿದರಿಗೆ ಇರಬಹುದು. ವಸ್ತುವಿನ ಸ್ಥಾಯೀಭಾವವನ್ನು ಮನೋಜ್ಞವಾಗುವಂತೆ ಪ್ರಕಟಿಸಿ, ಪ್ರೇಕ್ಷಕರಲ್ಲಿ ಸದಭಿರುಚಿಯನ್ನು ಪ್ರೇರೇಪಿ ಸುವುದು ದೃಶ್ಯ ಮಾಧ್ಯ ಮದ ಉದ್ದೇಶ. ಈ ಬಗ್ಗೆ ಆಂಗಿಕ ಚಲನೆ, ಸಂಜ್ಞೆ, ಸಂಕೇತ ಹಾಗೂ ಸ್ವರಗಳು ಸಹಕಾರಿ. ಸರಳವಾಗಿ ಹೇಳುವುದಾದರೆ ಅದುವೇ ಅಭಿ ನಯ ಹಾಗೂ ಉದ್ದೇಶ. ಗೀತ, ವಾದನ, ನರ್ತನ, ಆಹಾರ್ಯ ಹಾಗೂ ವಾಚಿಕ ಎಂಬ ಐದು ಪರಿಕರ ಗಳಿವೆ. ಇವುಗಳೆಲ್ಲವೂ ಏಕಕಾಲದಲ್ಲಿ ಸ್ಥಾಯೀಭಾವದ ಅಭಿವ್ಯಕ್ತಿಗೆ ಪೂರಕವಾಗಿ ಕಾರ್ಯನಿರ್ವ ಹಿಸುತ್ತವೆ. ಈ ಐದರ ನಡುವೆ ಇರುವ ನರ್ತನ, ಯಕ್ಷಗಾನದ ವಾಡಿಕೆಯ ಭಾಷೆಯಲ್ಲಿ ಕುಣಿತವು, ತಾಳ ಪ್ರಧಾನವಾದ, ಲಯ ವಿನ್ಯಾ ಸದ, ವಿವಿಧ ನಡೆ ಮತ್ತು ಗತಿ ಭೇದಗಳಿಂದ ಕೂಡಿದ, ಮುಖ, ದೃಷ್ಟಿ ಹಾಗೂ ಹಸ್ತಯುಕ್ತವಾದುದು.

ಮುದ್ರೆಗಳ ಬಳಕೆ ಯಕ್ಷಗಾನದಲ್ಲಿ ಇಲ್ಲ. ಸಾಮಾನ್ಯವಾಗಿ ಅಗೋಚರ ವಸ್ತುವಿನ ವರ್ಣನೆಗೆ ಮುದ್ರೆ ಬಳಕೆ ಹೊರತು ಎದುರಿಗಿರುವ ಕಮಲ ಮುಖೀಯ ವರ್ಣನೆಗೆ ಅಲ್ಲ ಎಂಬುದು ವಿದ್ವಾಂಸರ ಅಭಿಮತ. ಯಕ್ಷಗಾನದಲ್ಲಿ ಅದರ ಬಳಕೆ ಹೇಗೆ ಹಾಗೂ ಯಾವ ಪ್ರಮಾಣದಲ್ಲಿ ಸೂಕ್ತ ಎಂಬ ಬಗ್ಗೆ ಚಿಂತನ-ಮಥನಕ್ಕೆ ಅವಕಾಶವಿದೆ. ಆದರೆ ಕೈಯಲ್ಲಿ ಆಯುಧ ಸಹಿತವಾಗಿಯೂ ಅಚ್ಚು ಕಟ್ಟಾಗಿ ಪಾತ್ರ ನಿರ್ವಹಿಸಲು ಸಾಧ್ಯ ಎಂಬುದನ್ನು ಹಿಂದಿನ ಕಲಾವಿದರು ತೋರಿಸಿದ್ದಾರೆ.

“ಮಾನಿನಿ ಮಣಿಯೇ ಬಾರೇ…’ ಎಂಬ ಪದಕ್ಕೆ ವೀರಭದ್ರ ನಾಯ್ಕರು ಆಯುಧ ಸಹಿತ ಕುಣಿದು ನಿರ್ವಹಿಸಿದ ರೀತಿಯನ್ನು ಕಂಡ ನೆನಪು ಸದಾ ಹಸುರು. ಉತ್ತಮ ನಿದರ್ಶನ. ಮಾದರಿ ಅಭಿನಯವೇ ಸರ್ವಸ್ವವಲ್ಲ. ಪಾತ್ರ ಪೋಷಣೆಗೆ ಇತರ ಅಂಗಗಳು ಇವೆ. ಅವುಗಳನ್ನು ಸಮರ್ಥವಾಗಿ ಬಳಸುವುದನ್ನು ಬಿಟ್ಟು ಕಲಾವಿದರು ಎದ್ದು, ಬಿದ್ದು ರಂಗಸ್ಥಳದಲ್ಲಿ ಹೊರಳಾಡಿ ಅಭಿನಯಿಸುವ ಔಚಿತ್ಯವೇನು? ಅಭಿನಯಕ್ಕೆ ಹೆಚ್ಚು ಒತ್ತು ನೀಡಿದ ಹಾಗೆ ಹೆಜ್ಜೆಗಳು ಲುಪ್ತವಾಗುವ ಸಾಧ್ಯತೆಯನ್ನು ಲಕ್ಷ್ಯದಲ್ಲಿ ಇರಿಸಿಕೊಳ್ಳಬೇಕಾಗಿದೆ. ಹಾರಾಡಿ ಕುಷ್ಟ ಗಾಣಿಗರಂಥವರ ಕುಣಿತ ಕಣ್ಮರೆಯಾಗಿದೆ. ಯಾರೂ ಕಲಿತು ಮುಂದುವರಿಸಲಿಲ್ಲ. ಒಂದು ಬಂದು ಇನ್ನೊಂದು ಹೋದರೆ ಸುಧಾರಣೆ ಎಂದಾದೀತೇ!

Advertisement

ಅಭಿನಯದ ನೆಪದಲ್ಲಿ ಈಗ ಕಿರೀಟ, ಮುಂಡಾಸಿನ ವೇಷಗಳು ಅತಿಯಾದ ಬಾಗು ಬಳಕುವಿಕೆ ಪ್ರದರ್ಶಿಸುತ್ತಿವೆ. ಇದು ಕಲಿಕೆಯ ದೋಷವೂ ಇರಬಹುದು. ಹಿಂದೆ ಯಕ್ಷಗಾನದ ಕುಣಿತ ಅಭ್ಯಾಸ ಮಾಡುವಾಗ ಎರಡು ಸೇರು ಅಕ್ಕಿ (2ಕೆ.ಜಿ.) ಮೂಟೆ ತಲೆ ಮೇಲಿಟ್ಟು ಕೊಂಡು ಅಭ್ಯಾಸ ಮಾಡಬೇಕಿತ್ತಂತೆ. ಆಗ ಅವಯವಗಳು, ನಡು, ಗ್ರೀವ ಚಲನೆಗಳು ನಿಯಂತ್ರಣದಲ್ಲಿ ಇರುತ್ತವೆ. ನಾವು ಯಕ್ಷಗಾನದಲ್ಲಿ ರಾಜ ಮಹಾರಾಜರನ್ನು ತೋರಿಸು ತ್ತೇವೆ. ಅವರು ಪ್ರಭುಗಳು, ಪ್ರಜೆಗಳಿಗೆ ಸಿಂಹಪ್ರಾಯರು, ಪ್ರಜಾ ರಕ್ಷಣೆಯಲ್ಲಿ ಯೋಧರು. ಅವರ ನಡೆ, ನುಡಿ, ಆಂಗಿಕ ಚಲನೆ ಮತ್ತು ಸುಖ-ದುಃಖ, ಮೋಹ ಇತ್ಯಾದಿ ಭಾವಗಳಲ್ಲಿಯೂ ಗಾಂಭೀರ್ಯ ತುಂಬಿಕೊಂಡಿರುತ್ತದೆ ಎಂಬ ಗ್ರಹಿಕೆ ಕಲಾವಿದರಲ್ಲಿ ಇರಬೇಕಾದುದು ವಿಹಿತ.

-ಬೇಳೂರು ರಾಘವ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next