Advertisement

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

01:19 AM Sep 20, 2024 | Team Udayavani |

ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಪಾರಮ್ಯ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಹಲವಾರು ಕ್ರಾಂತಿಕಾರಿ ಯೋಜನೆಗಳಿಗೆ ಒಪ್ಪಿಗೆ ನೀಡಿದೆ. ಈ ಮೂಲಕ ಬಾಹ್ಯಾಕಾಶ ರಂಗದಲ್ಲಿನ ಸಂಶೋಧನೆ ಮತ್ತು ತಮ್ಮ ವಿಕ್ರಮವನ್ನು ಮುಂದುವರಿಸಲು ಪಣತೊಟ್ಟಿರುವ ದೇಶದ ಬಾಹ್ಯಾಕಾಶ ವಿಜ್ಞಾನಿಗಳ ದೂರದೃಷ್ಟಿಯಿಂದ ಕೂಡಿದ ಹಲವಾರು ಯೋಜನೆಗಳಿಗೆ ಕೇಂದ್ರ ಸರಕಾರ ಹಸುರು ನಿಶಾನೆ ತೋರಿದಂತಾಗಿದೆ.

Advertisement

ವರ್ಷದ ಹಿಂದೆಯಷ್ಟೇ ಚಂದ್ರನ ಮೇಲೆ ಲ್ಯಾಂಡರ್‌ ಇಳಿಸುವ ಮೂಲಕ ಬಾಹ್ಯಾಕಾಶ ರಂಗದಲ್ಲಿನ ತನ್ನ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದ ಇಸ್ರೋ ವಿಜ್ಞಾನಿಗಳು ಮುಂದಿನ ವರ್ಷಗಳಲ್ಲಿ ಕೈಗೆತ್ತಿಕೊಳ್ಳಲುದ್ದೇಶಿಸಿರುವ ಅತ್ಯಂತ ಮಹತ್ವದ ಚಂದ್ರಯಾನ-4, ಶುಕ್ರಯಾನ, ಮಾನವ ಸಹಿತ ಚಂದ್ರಯಾನ, ಗಗನಯಾನಕ್ಕಾಗಿ ಭಾಗಶಃ ಮರುಬಳಕೆ ರಾಕೆಟ್‌ ಉತ್ಪಾದನೆ ಸಹಿತ ಒಟ್ಟು 31,773 ಕೋ ರೂ.ಗಳ ವಿವಿಧ ಬಾಹ್ಯಾಕಾಶ ಸಂಬಂಧಿ ಯೋಜನೆಗಳಿಗೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಇಸ್ರೋ ಮುಂದಿರುವ ಈ ಎಲ್ಲ ಯೋಜನೆಗಳಿಗೆ ಬೆನ್ನೆಲುಬಾಗಿ ನಿಂತಿರುವ ಕೇಂದ್ರ ಸರಕಾರ, ದೇಶದ ಬಾಹ್ಯಾಕಾಶ ವಿಜ್ಞಾನಿಗಳ ಸಂಶೋಧನ ಯೋಜನೆ, ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ನಿರಂತರವಾಗಿ ನೆರವು ಮತ್ತು ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅಪ್ರತಿಮ ಸಾಧನೆ ತೋರುವ ಮೂಲಕ ವಿಶ್ವದಲ್ಲಿ ಮುಂಚೂಣಿಯಲ್ಲಿದೆ. ಮಂಗಳಯಾನ ಮತ್ತು ಚಂದ್ರಯಾನ ಯಶಸ್ಸಿನ ಬಳಿಕ ಬಲು ನಿರೀಕ್ಷಿತ ಮಾನವ ಸಹಿತ ಗಗನಯಾನ ಮತ್ತು ಶುಕ್ರಯಾನಕ್ಕೆ ಇಸ್ರೋ ಸಜ್ಜಾಗುತ್ತಿದೆ.

ಶುಕ್ರ ಗ್ರಹದ ಅಧ್ಯಯನಕ್ಕಾಗಿ ಬಾಹ್ಯಾಕಾಶ ನೌಕೆಯೊಂದನ್ನು ಕಳುಹಿಸಲು ಇಸ್ರೋ ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ಇನ್ನು ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ದೂರದೃಷ್ಟಿಯಿಂದ ಕೂಡಿರುವ ಮರುಬಳಕೆ ರಾಕೆಟ್‌ ಉತ್ಪಾದನೆಗೆ ಕೇಂದ್ರ ಸರಕಾರ ಅನುದಾನ ಘೋಷಿಸಿದೆ. ಇದೇ ವೇಳೆ ಮುಂದಿನ ನಾಲ್ಕು ವರ್ಷಗಳಲ್ಲಿ ಬಾಹ್ಯಾಕಾಶ ಕೇಂದ್ರ ಹೊಂದುವ ಯೋಜನೆಗೂ ಕೇಂದ್ರ ಸಂಪುಟ ಸಮ್ಮತಿಸಿದೆ. ಇವೆಲ್ಲವೂ ಭಾರತದ ಬಲುನಿರೀಕ್ಷಿತ ಗಗನ ಯೋಜನೆಗೆ ಪೂರಕವಾಗಿ ಕೈಗೆತ್ತಿಕೊಳ್ಳಲಾಗುತ್ತಿರುವ ಬಾಹ್ಯಾಕಾಶ ಯೋಜನೆಗಳಾಗಿವೆ.

ತಂತ್ರಜ್ಞಾನ ಕ್ಷೇತ್ರದಲ್ಲೂ ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳಿಗೆ ಒತ್ತು ನೀಡುತ್ತಲೇ ಬಂದಿರುವ ಕೇಂದ್ರ ಸರಕಾರ ಇದರ ಭಾಗವಾಗಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬಯೋ ರೈಡ್‌ ಯೋಜನೆಗೆ ತನ್ನ ಅನುಮೋದನೆಯನ್ನು ನೀಡಿದೆ. ಈ ಯೋಜನೆ ಸಮರ್ಪಕವಾಗಿ ಕಾರ್ಯಗತವಾದಲ್ಲಿ ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಸಹಭಾಗಿತ್ವವನ್ನು ಸುಲಭ ಸಾಧ್ಯವಾಗಿಸಲಿದೆಯಲ್ಲದೆ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೂ ಪೂರಕವಾಗಲಿದೆ.

Advertisement

ಪ್ರಧಾನಿ ನರೇಂದ್ರ ಮೋದಿ 3.0 ಸರಕಾರ ಶತದಿನಗಳನ್ನು ಪೂರೈಸಿದ ಬೆನ್ನಲ್ಲೇ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಭರಪೂರ ಅನುದಾನ ನೀಡಲು ತೀರ್ಮಾನಿಸಿರುವುದು ಹಾಲಿ ಸರಕಾರದ ದೂರದೃಷ್ಟಿಯ ಪ್ರತಿಬಿಂಬ ಎಂದೇ ವಿಶ್ಲೇಷಿಸಬಹುದು. ಭಾರತ ಕೈಗೊಳ್ಳುವ ಪ್ರತಿಯೊಂದೂ ಬಾಹ್ಯಾಕಾಶ ಯೋಜನೆಯ ಬಗೆಗೆ ಇಡೀ ವಿಶ್ವದ ಜನತೆ ಕುತೂಹಲದ ದೃಷ್ಟಿ ಬೀರಿದೆ. ಇದಕ್ಕೆ ಪೂರಕವಾಗಿ ಇಸ್ರೋ ಮತ್ತು ಕೇಂದ್ರ ಸರಕಾರ ಬಾಹ್ಯಾಕಾಶ ಕ್ಷೇತ್ರದಲ್ಲಿ ಸರಣಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಜ್ಜಾಗಿದ್ದು, ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಿವೆ. ಭವಿಷ್ಯದಲ್ಲಿ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ಸೃಷ್ಟಿಯಾಗಲಿರುವುದರಿಂದ ಸರಕಾರ ಈಗ ವ್ಯಯಿಸುತ್ತಿರುವ ಮೊತ್ತ ದೇಶದ ಭವಿಷ್ಯಕ್ಕಾಗಿನ ಹೂಡಿಕೆ ಎನ್ನಲಡ್ಡಿಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.