Advertisement
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ 7ನೇ ಬಾರಿಗೆ ಸ್ಪರ್ಧಿಸುತ್ತಿರುವ ಸಿ.ಪಿ.ಯೋಗೇಶ್ವರ್ ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಕಾಣದ ಪೈಪೋಟಿ 2018ರ ಚುನಾವಣೆಯಲ್ಲಿ ಎದುರಿಸುತ್ತಿದ್ದಾರೆ. 2011ರ ಉಪಚುನಾವಣೆಯೂ ಸೇರಿದಂತೆ 6 ಬಾರಿ ಚುನಾವಣೆ ಎದುರಿಸಿರುವ “ಸೈನಿಕ’ ಕೇವಲ ಒಂದು ಬಾರಿ ಮಾತ್ರ ಸೋಲು ಕಂಡಿದ್ದಾರೆ. ಚನ್ನಪಟ್ಟಣ ಮತದಾರರ ನಾಡಿ ಮಿಡಿತ ಚೆನ್ನಾಗಿ ಬಲ್ಲ ಸಿಪಿವೈಗೆ 2018ರ ಚುನಾವಣೆಯಲ್ಲಿ ನಾಡಿ ಬಡಿತವೇ ಏರು-ಪೇರು ಮಾಡುವ ಸನ್ನಿವೇಶಗಳು ಸೃಷ್ಟಿಯಾಗಿವೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
Related Articles
Advertisement
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ವಿಧಾನಸಭಾ ಚುನಾವಣೆ ವಿಚಾರವಾಗಿ ಒಳಒಪ್ಪಂದ ನಡೆದಿದೆ. ರಾಜಕೀಯವಾಗಿ ತಮ್ಮಿಬ್ಬರಿಗೆ ಬದ್ಧ ವೈರಿಯಾಗಿರುವ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ಮಣಿಸಲು ಇಬ್ಬರು ನಾಯಕರು ಕೈಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿ ಹರಿದಾಡುತ್ತಿತ್ತು. ಅದೇ ವೇಳೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿಯೇ ತೀರುತ್ತೇವೆ ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದ್ದು, ಸಿದ್ದರಾಮಯ್ಯ ಅವರಿಗೆ ಸಹಿಸಲು ಆಗಲಿಲ್ಲ. ತಮ್ಮ ತವರಿನಲ್ಲಿ ತಮಗೇ ಸವಾಲು ಹಾಕಿದ ಕುಮಾರಸ್ವಾಮಿಗೆ ತಿರುಗೇಟು ನೀಡಬೇಕು ಎಂದು ನಿರ್ಧರಿಸಿದ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್‌ರನ್ನು ರಾಮನಗರದಿಂದ ಕಣಕ್ಕಿಳಿಸಲು ಹೈಕಮಾಂಡ್‌ಗೆ ತಾಕೀತು ಮಾಡಿದ್ದರು ಎನ್ನಲಾಗಿದೆ. ಆದರೆ ಈ ಪ್ರಯತ್ನ ಫಲಕೊಡದಿದ್ದರಿಂದ ಎಚ್.ಎಂ.ರೇವಣ್ಣ ಅವರನ್ನು ರಾಮನಗರದಿಂದ ಸ್ಪರ್ಧೆಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ ಹೈಕಮಾಂಡ್ ಈ ಮನವಿಯನ್ನು ಪುರಸ್ಕರಿಸದಿದ್ದರಿಂದ ಅಂತಿಮವಾಗಿ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಬಲ ಪೈಪೋಟಿ ನೀಡುವ ಉದ್ದೇಶದಿಂದ ಎಚ್.ಎಂ.ರೇವಣ್ಣ ಅವರನ್ನು ಕಣಕ್ಕಿಳಿಸಲು ಡಿ.ಕೆ.ಸಹೋದರರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ತ್ರೀಕೋನ ಸ್ಪರ್ಧೆ ಖಚಿತ: ಈಗ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ, ಕಾಂಗ್ರೆಸ್‌ನ ಎಚ್.ಎಂ.ರೇವಣ್ಣ ಹಾಗೂ ಬಿಜೆಪಿಯ ಸಿ.ಪಿ.ಯೋಗೇಶ್ವರ್ ನಡುವೆ ತ್ರಿಕೋನ ಪೈಪೋಟಿ ಏರ್ಪಟ್ಟಿದೆ.ಅಹಿಂದ ಮತಗಳ ಕ್ರೋಢೀಕರಣಕ್ಕೆ ಕಾಂಗ್ರೆಸ್ ಮುಂದಾಗಿದೆ. ಒಕ್ಕಲಿಗರ ಮತಗಳನ್ನು ಸಾರಾಸಗಟಾಗಿ ಸೆಳೆದು ಅಲ್ಪ$ಸಂಖ್ಯಾತರ ಮತ್ತು ದಲಿತ ಸಮುದಾಯಗಳ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಜೆಡಿಎಸ್ ಮುಂದಾಗಿದೆ. ಅಭಿವೃದ್ದಿ ಮಂತ್ರ ಜಪಿಸಿ ಎಲ್ಲಾ ವರ್ಗದ ಮತದಾರರನ್ನು ಸೆಳೆಯಲು ಹವಣಿಸಿದ್ದ ಸಿ.ಪಿ.ಯೋಗೇ ಶ್ವರ್ ಇದೀಗ ತಾವು ಜಾತಿ ಲೆಕ್ಕಾಚಾರಕ್ಕೆ ಇಳಿಯ ಬೇಕಾದ ಅನಿವಾರ್ಯತೆ ಎದುರಾಗಿದೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಸದ್ಯ 2.15 ಲಕ್ಷ ಮತದಾರರಿದ್ದಾರೆ. ಈ ಪೈಕಿ ಒಕ್ಕಲಿಗ ಮತದಾರರ ಸಂಖ್ಯೆ ಅಂದಾಜು 1 ಲಕ್ಷ ಇದೆ. ಎಸ್ಸಿ, ಎಸ್ಟಿ 35 ಸಾವಿರ, ಮುಸ್ಲಿಂ ಮತದಾರರು 25, ಕುರುಬರ 7 ಸಾವಿರ, ಲಿಂಗಾಯತರು 9 ಸಾವಿರ, ಬೆಸ್ತರು 10 ಸಾವಿರ, ತಿಗಳರು 8 ಸಾವಿರ, ಇತರರು 21 ಸಾವಿರ ಮತದಾರರಿದ್ದಾರೆ. ಅಹಿಂದ ಮಂತ್ರ ಜಪಿಸಿ ತಮ್ಮ ಬಗ್ಗೆ ಕಾಳಜಿ ತೋರಿಸದ ಸಿದ್ದರಾಮಯ್ಯ ಬಗ್ಗೆ ಒಕ್ಕಲಿಗರಲ್ಲಿ ಅಸಮಾಧಾನವಿರುವುದರಿಂದ ಒಕ್ಕಲಿಗರ ಪೈಕಿ ಇರುವ ಶೇ. 10 ರಿಂದ 15 ಸಾಂಪ್ರದಾಯಿಕ ಕಾಂಗ್ರೆಸ್ ಮತಗಳನ್ನು ಹೊರತು ಪಡೆಸಿ ಉಳಿದ ಮತಗಳನ್ನು “ದೊಡ್ಡಗೌಡರ’ (ಎಚ್.ಡಿ.ದೇವೇಗೌಡ) ಪರ ಸೆಳೆಯಲು ಜೆಡಿಎಸ್ ಮುಂದಾಗಿದೆ. ತಾವು ಒಕ್ಕಲಿಗರೇ ತಮಗೂ ಬೆಂಬಲ ಕೊಡಿ ಎಂದು ಸಿ.ಪಿ.ಯೋಗೇಶ್ವರ್ ಒಕ್ಕಲಿಗರ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ.
ಮುಸಲ್ಮಾನರ ಮತಗಳು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಂಚಿಕೆಯಾದರೂ ಚನ್ನಪಟ್ಟಣದ ಮುಸ್ಲಿಂ ಸಮುದಾಯದಲ್ಲಿ ಸಿ.ಪಿ.ಯೋಗೇಶ್ವರ್ ಬಗ್ಗೆ ವಿಶ್ವಾಸ ಇರುವುದರಿಂದ ಕನಿಷ್ಠ ಶೇ.25 ರಿಂದ 30ರಷ್ಟು ಮತಗಳು ಸಿಪಿವೈಗೆ ಲಭಿಸಲಿದೆ ಎಂದು ಹೇಳಲಾಗಿದೆ.
ಕುರುಬರ ಮತಗಳ ಬಹುತೇಕ ಎಚ್.ಎಂ.ರೇವಣ್ಣ ಬಾಚಿಕೊಳ್ಳಲಿದ್ದಾರೆ. ಲಿಂಗಾಯತರ ಮತಗಳ ಪೈಕಿ ಬಹುತೇಕ ಮತಗಳು ಸಿಪಿವೈಗೆ ದಕ್ಕಲಿದೆ. ಎಸ್ಸಿ, ಎಸ್ಟಿ, ಬೆಸ್ತರು, ತಿಗಳರ ಮತಗಳು ನಿರ್ಣಾಯಕವಾಗಲಿದೆ. ಎಸ್ಸಿ ಎಸ್ಟಿ ಮತಗಳನ್ನು ಸಳೆಯಲು ಜೆಡಿಎಸ್ ಪಕ್ಷ ಬಿಎಸ್‌ಪಿ ಮುಖ್ಯಸ್ಥೆ ಮಾಯವತಿ ಅವರ ವರ್ಚಸ್ಸು ಸಮರ್ಥವಾಗಿ ಬಳಸಿಕೊಂಡರೆ ಎಸ್ಸಿ, ಎಸ್ಟಿ ಸಮುದಾಯದ ಮತಗಳು ಚದುರಿ ಹೋಗಿ ಕಾಂಗ್ರೆಸ್‌ಗೆ ಪೆಟ್ಟು ನೀಡಬಹುದು. ಒಟ್ಟಾರೆ ಜಾತಿವಾರು ಮತಗಳಿಕೆ ಲೆಕ್ಕಾಚಾರ, ಅಭಿವೃದ್ಧಿ ಪರ ಲೆಕ್ಕಾಚಾರದ ಬಗ್ಗೆ ಕ್ಷೇತ್ರದಲ್ಲಿ ಕೂಡು, ಕಳಿ ನಿರಂತರವಾಗಿ ನಡೆಯುತ್ತಿದೆ. ಮೇ 12ರಂದು ಮತದಾರ ತನ್ನ ನಿರ್ಣಯವನ್ನು ಎವಿಎಂ ಯಂತ್ರಗಳ ಮೂಲಕ ದಾಖಲಿಸಲಿದ್ದಾನೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಯಾರೇ ಸ್ಪರ್ಧಿಸಿದರೂ ಎಚ್.ಡಿ. ಕುಮಾರಸ್ವಾಮಿ ಗೆಲುವು ಖಚಿತ. ಕುಮಾರಸ್ವಾಮಿಗೆ, ಕುಮಾರಸ್ವಾಮಿ ಅವರೇ ಸಾಟಿ. ಅವರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.– ಅನಿತಾ ಕುಮಾರಸ್ವಾಮಿ, ಮಾಜಿ ಶಾಸಕಿ ಚನ್ನಪಟ್ಟಣ ಕ್ಷೇತ್ರವನ್ನು ಸಿದ್ದರಾಮಯ್ಯ ಸರಕಾರ ಕಡೆಗಣಿಸಿಲ್ಲ. ನೀರಾವರಿ ಯಶಸ್ಸಿಗೆ ಕಾಂಗ್ರೆಸ್ ಕೊಡುಗೆ ಇದೆ. ಜನಪರ ಯೋಜನೆಗಳು ಈ ಕ್ಷೇತ್ರದ ಮತದಾರರನ್ನು ತಲುಪಿದೆ. ಹೀಗಾಗಿ ತಮ್ಮ ಗೆಲುವು ನಿಶ್ಚಿತ.
– ಎಚ್.ಎಂ.ರೇವಣ್ಣ, ಕಾಂಗ್ರೆಸ್ ಅಭ್ಯರ್ಥಿ ಐದು ಬಾರಿ ಹರಸಿರುವ ಮತದಾರರು, ಈ ಬಾರಿಯೂ ಆಶೀರ್ವದಿಸುವ ವಿಶ್ವಾಸ ಇದೆ. ಜನರ ಸಂಕಷ್ಟಕ್ಕೆ ಸ್ಪಂದಿಸಿ ದ್ದೇನೆ. ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಮಾದರಿ ಕೆಲಸ ಮಾಡಿದ್ದೇನೆ. ಯಾರೇ ಸ್ಪರ್ಧಿಸಿದರೂ ಜನ ನನ್ನ ಕೈಬಿಡಲ್ಲ.
– ಸಿ.ಪಿ.ಯೋಗೇಶ್ವರ್, ಹಾಲಿ ಶಾಸಕ. – ಬಿ.ವಿ. ಸೂರ್ಯಪ್ರಕಾಶ್