ಬೆಳಗಾವಿ ಸದ್ಯ ರಾಜ್ಯದಲ್ಲಿ ಪರ್ಯಾಯ ನಾಯಕತ್ವ ಆವಶ್ಯಕತೆ ಇದೆ. ಯುಗಾದಿ ಅನಂತರ ಹೊಸ ವರ್ಷಕ್ಕೆ ಬದಲಾವಣೆ ಆಗುವುದು ನಿಶ್ಚಿತ. ರಾಜ್ಯದಲ್ಲಿ ಒಳ್ಳೆಯ ಬದಲಾವಣೆ ಆಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಯಾಶೀಲ ಇದ್ದವರು ಮಂತ್ರಿ ಆಗುತ್ತಾರೆ. ಕೆಲವರು ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಕೆಲವರನ್ನು ಮಂತ್ರಿ ಸ್ಥಾನದಿಂದ ಮುಕ್ತಗೊಳಿಸಿ ಪಕ್ಷದ ಜವಾಬ್ದಾರಿ ಕೊಡಲಾಗುತ್ತದೆ. ನಾನಂತೂ ಮಂತ್ರಿ ಮಾಡುವಂತೆ ಮನವಿ ಮಾಡಿಲ್ಲ ಎಂದು ಹೇಳಿದರು.
ಕೆಲವು ಸಚಿವರು ಕರೆ ಸ್ವೀಕರಿಸುವುದಿಲ್ಲ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಯಾವ ಸಚಿವರು ಈ ತರಹ ಮಾಡುವುದಿಲ್ಲ. ಕೆಲವೊಂದು ಸಲ ಬ್ಯುಸಿ ಇರುತ್ತಾರೆ. ನಾನು ಯಾರಿಗೂ ಕಾಲ್ ಮಾಡುವುದಿಲ್ಲ. ನೇರವಾಗಿ ಕುಳಿತು ಮಾತನಾಡುತ್ತೇನೆ ಎಂದರು.
ಯಾರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗುತ್ತಾರೆ ಎನ್ನುವ ಕುರಿತು ಸಂಶಯ ಇದ್ದವರು ಹೋಗುವುದಿಲ್ಲ ಎಂದು ಸ್ಪಷ್ಟೀಕರಣ ನೀಡಲಿ ಎನ್ನುವ ಕಾರಣಕ್ಕೆ ಟೆಸ್ಟ್ ಮಾಡುವ ಸಲುವಾಗಿ ಆ ರೀತಿ ಹೇಳಿಕೆ ನೀಡಿದ್ದೆ. ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದೆ. ಈಗ ಬಿಟ್ಟು ಹೋದರೆ ಹೇಗೆ ಎಂದು ಹೇಳಿದರು.
ರಮೇಶ ಬಂದಿದ್ರು-ನಾನೂ ಹೋಗಿದ್ದೆ
ವಿಜಯಪುರದ ನಮ್ಮ ಮನೆಗೆ ಶಾಸಕ ರಮೇಶ ಜಾರಕಿಹೊಳಿ ಎರಡು ಸಲ ಊಟಕ್ಕೆ ಬಂದಿದ್ದರು. ಹೀಗಾಗಿ ನಾನೂ ಒಂದು ಸಲ ಅವರ ಮನೆಗೆ ಊಟಕ್ಕೆ ಹೋಗಿದ್ದೆ. ಮನೆಯಲ್ಲಿ ಕುಳಿತು ಊಟ ಮಾಡಿದರೆ ಬಣ ಎಂದರೆ ಹೇಗೆ? ಪ್ರಾದೇಶಿಕ ಪಕ್ಷ ರಚನೆಯಂತಹ ಹೊಲಸು ಕೆಲಸ ನಾನು ಮಾಡುವುದಿಲ್ಲ ಎಂದು ಯತ್ನಾಳ್ ಹೇಳಿದರು.