“ಕಾಶ್ಮೀರದಲ್ಲಿ ಶಾಂತಿಯ ಮರವಿನ್ನು ಸತ್ತಿಲ್ಲ, ಅದರ ಬೇರುಗಳು ಜೀವಂತವಾಗಿರುವುದರಿಂದ ಹಸಿರು ಚಿಗುರುವುದನ್ನು ಕಾಣಬಯಸುತ್ತೇವೆ’ ಇದು ಗೃಹ ಸಚಿವ ರಾಜನಾಥ್ ಸಿಂಗ್ ಕೆಲ ಸಮಯದ ಹಿಂದೆ ಶ್ರೀನಗರದಲ್ಲಿ ಹೇಳಿದ ಮಾತು. ಇದೀಗ ಈ ಮಾತು ನಿಜವಾಗುವ ಒಂದೊಂದೇ ಸಾಧ್ಯತೆಗಳು ಗೋಚರಿಸುತ್ತಿವೆ. ಮುಖ್ಯವಾಗಿ ಕಾಶ್ಮೀರದ ಯುವ ಜನತೆಗೆ ಕಲ್ಲೆಸೆಯುವುದರಿಂದ ಮತ್ತು ಹಿಂಸಾಚಾರದಿಂದ ಏನನ್ನೂ ಸಾಧಿಸಲು ಆಗದು ಎಂದು ಅರ್ಥವಾಗಿರುವಂತೆ ಕಾಣಿಸುತ್ತದೆ. ಮುಖ್ಯವಾಹಿನಿಯಲ್ಲಿ ಬೆರೆಯಲು ಅವರಲ್ಲಿ ಹುಟ್ಟಿಕೊಂಡಿರುವ ಹಂಬಲವೇ ಇದನ್ನು ಸ್ಪಷ್ಟಪಡಿಸುತ್ತದೆ.
ಕೆಲವು ದಿನಗಳ ಹಿಂದೆ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೂಲಕ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವುದನ್ನೇ ಮುಖ್ಯ ಕಾರ್ಯಸೂಚಿಯನ್ನಾಗಿ ಮಾಡಿಕೊಂಡಿರುವ ಪಾಕಿಸ್ಥಾನದ ಲಷ್ಕರ್ ಎ ತಯ್ಯಬ ಸೇರಲು ಹೋದ ಯುವಕನೊಬ್ಬ ಒಂದೇ ವಾರದಲ್ಲಿ ಮರಳಿ ಬಂದಿದ್ದರೆ , ಇದೀಗ ಇಲ್ಲಿನ ಯುವತಿಯರ ಫುಟ್ಬಾಲ್ ತಂಡವೊಂದು ಆಟದ ಅಂಗಳಕ್ಕಳಿಯಲು ತಯಾರಾಗಿರುವುದು ಕಾಶ್ಮೀರದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ ಎನ್ನುವುದಕ್ಕೆ ಸಾಕ್ಷಿ. ಭದ್ರತಾ ಪಡೆಗಳ ಮೇಲೆ ಕಲ್ಲೆಸೆಯುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಅಫಾÏನ್ ಆಶಿಕ್ ಎಂಬಾಕೆಯೇ ಈ ಫುಟ್ಬಾಲ್ ತಂಡದ ನಾಯಕಿ ಎನ್ನುವುದು ಗಮನಾರ್ಹ ಅಂಶ. ಮಹಿಳಾ ಫುಟ್ಬಾಲ್ ತಂಡದವರು ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ನೀಡಲು ಮನವಿ ಮಾಡಿದ್ದಾರೆ. ಮಹಿಳಾ ಕ್ರೀಡಾಪಟುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದಾರೆ. ಈ ಬೆಳವಣಿಗೆ ಕಾಶ್ಮೀರ ಸಮಸ್ಯೆ ಬಗೆಹರಿಯುವ ನಿರೀಕ್ಷೆಯನ್ನು ಹುಟ್ಟಿಸಿದೆ.
ಕಳೆದ ವರ್ಷ ಬುರ್ಹಾನ್ ವಾನಿಯ ಹತ್ಯೆಯಾದ ಬಳಿಕ ಸುಮಾರು ಒಂದು ವರ್ಷ ಕಾಶ್ಮೀರ ಹೊತ್ತಿ ಉರಿಯುತ್ತಿತ್ತು. ಭದ್ರತಾ ಪಡೆಗಳು ಕಲ್ಲೆಸೆತ ಮತ್ತು ಉಗ್ರರ ಅಟ್ಟಹಾಸ ನಿತ್ಯದ ಸುದ್ದಿಯಾಗಿತ್ತು. ಈ ಸಮಯದಲ್ಲಿ ಒಂದೆಡೆ ಉಗ್ರರನ್ನು ಮಟ್ಟಹಾಕುವ ಕಠಿಣ ನಿರ್ಧಾರ ಕೈಗೊಂಡ ಸರಕಾರ ಜತೆಗೆ ಕಾಶ್ಮೀರದ ಯುವ ಜನತೆಯ ಮನವೊಲಿಕೆಗೆ ಮುಂದಾಯಿತು. ಹಾಫಿಜ್ ಸಯೀದ್, ಅಜರ್ ಮೆಹಮೂದ್ ಮತ್ತಿತರ ಪಾಕಿಸ್ಥಾನಿ ಉಗ್ರ ಮುಖಂಡರ ಮಾತು ಕೇಳಿ ದಾರಿತಪ್ಪಿದ್ದ ಯುವಕರೇ ಕಲ್ಲೆಸೆಯುವ ಪ್ರಕರಣಗಳ ಮುಂಚೂಣಿಯಲ್ಲಿದ್ದರು. ಯುವಜನತೆಯನ್ನು ಇದೇ ಹಾದಿಯಲ್ಲಿ ಮುಂದುವರಿಯಲು ಬಿಟ್ಟರೆ ಪರಿಸ್ಥಿತಿ ಇನ್ನಷ್ಟು ಹದಗೆಡುವುದನ್ನು ಮನಗಂಡ ಸರಕಾರ ತಕ್ಷಣ ಕಾರ್ಯಪ್ರವೃತ್ತವಾದ ಪರಿಣಾಮವಾಗಿ ಈಗ ಯುವಕರು ಸರಕಾರದ ಮಾತುಗಳನ್ನು ಕೇಳುತ್ತಿದ್ದಾರೆ. ಅವಕಾಶ ಸಿಕ್ಕಿದರೆ ತಾವು ಕೂಡ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಿಂಚಬಲ್ಲೆವು ಎನ್ನುವುದನ್ನು ಕಾಶ್ಮೀರದ ಹಲವು ಯುವಕರು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ದಂಗಲ್ ಚಿತ್ರದ ನಾಯಕಿ ಝೈರಾ ವಾಸಿಮ್‌ಳಂತಹ ಯುವತಿಯರು ಸಂಪ್ರದಾಯದ ಕಟ್ಟುಗಳಿಂದ ಬಿಡಿಸಿಕೊಂಡು ಸಿನೆಮಾ ಕ್ಷೇತ್ರದಲ್ಲಿ ಮಿಂಚಲು ಮುಂದಾಗಿರುವುದನ್ನು ಕೂಡ ಸಕಾರಾತ್ಮಕವಾದ ಬೆಳವಣಿಗೆ ಎಂದು ಪರಿಗಣಿಸಬಹುದು. ಹಲವು ಯುವತಿಯರಿಗೆ ಝೈರಾ ಪ್ರೇರಣೆಯಾಗಿದ್ದಾರೆ.
ಕಾಶ್ಮೀರದಲ್ಲಿ ಕಳೆದ ಕೆಲವು ತಿಂಗಳಿಂದೀಚೆಗೆ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಗಣನೀಯವಾಗಿ ಸುಧಾರಣೆಯಾಗಿರುವುದು ಕಂಡುಬರುತ್ತದೆ. ಆಜಾದಿ ಬೇಡಿಕೆಯ ಬೃಹತ್ ಮೆರವಣಿಗೆಗಳು ನಡೆಯದೆ ತಿಂಗಳುಗಳೇ ಕಳೆದಿವೆ. ಪೆಲ್ಲೆಟ್ ಗನ್‌ಗಳಿಂದ ಗುಂಡುಗಳು ಹಾರುವುದು ನಿಂತಿದೆ. ಜನಜೀವನವೂ ಸಹಜ ಸ್ಥಿತಿಗೆ ಬಂದಿದ್ದು ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ. ವಾಣಿಜ್ಯ, ಕ್ರೀಡೆ ಮತ್ತಿತರ ಚಟುವಟಿಕೆಗಳು ಮಾಮೂಲಿನಂತೆ ನಡೆಯುತ್ತಿವೆ. ಮುಖ್ಯವಾಗಿ ಜನರನ್ನು ಆಡಳಿತದ ವಿರುದ್ಧ ಎತ್ತಿಕಟ್ಟುವ ಪ್ರತ್ಯೇಕತಾವಾದಿಗಳ ಸದ್ದಡಗಿದೆ. ಭದ್ರತಾ ಪಡೆಗಳು ನಡೆಸುತ್ತಿರುವ ನಿರಂತರ ಕಾರ್ಯಾಚರಣೆ ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಈ ವರ್ಷ ಈಗಾಗಲೇ 200ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿಯಲಾಗಿದೆ. ಹಾಗೆಂದು ಕಾಶ್ಮೀರದಲ್ಲಿ ಬರೀ ಭಯೋತ್ಪಾದನೆಯೊಂದೇ ಸಮಸ್ಯೆಯಲ್ಲ. ಈಗ ಇದರ ಜತೆಗೆ ಮಾದಕವಸ್ತುವಿನ ಸಮಸ್ಯೆಯೂ ಬೃಹದಾಕಾರವಾಗಿ ಬೆಳೆದು ನಿಂತಿದೆ. ಈ ವರ್ಷ 500ಕ್ಕೂ ಅಧಿಕ ಮಾದಕ ವಸ್ತು ಪ್ರಕರಣಗಳು ದಾಖಲಾಗಿವೆ ಮತ್ತು ಸುಮಾರು 19,000 ಮಂದಿ ಡ್ರಗ್ ವ್ಯವಸನ ಮುಕ್ತಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಿತ್ತು ತಿನ್ನುವ ಬಡತನ ಮತ್ತು ನಿರುದ್ಯೋಗ ಜನರನ್ನು ಮಾದಕವಸ್ತು ವ್ಯಾಪಾರಕ್ಕಿಳಿಯುವಂತೆ ಮಾಡುತ್ತಿದೆ. ಕಣಿವೆಯ ಹಲವೆಡೆ ರಾಜಾರೋಷವಾಗಿ ಗಾಂಜಾ ಬೆಳೆಯಲಾಗುತ್ತಿದ್ದರೂ ಅಧಿಕಾರಿಗಳು ನೋಡಿಯೂ ನೋಡದವರಂತೆ ವರ್ತಿಸುತ್ತಿರುವುದು ಅಪಾಯಕಾರಿ. ಭಯೋತ್ಪಾದನೆಯಿಂದ ವಿಮುಖರಾದ ಯುವ ಜನತೆ ಡ್ರಗ್ಸ್ ದಾಸರಾಗದಂತೆ ನೋಡಿಕೊಳ್ಳುವ ಕೆಲಸವೂ ಆಗಬೇಕಿದೆ. ಇದಕ್ಕೆ ಮುಖ್ಯವಾಗಿ ನಿರುದ್ಯೋಗ ನಿವಾರಿಸುವ ಮಾರ್ಗೋಪಾಯಗಳನ್ನು ತ್ವರಿತವಾಗಿ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಮುಖ್ಯವಾಹಿನಿಗೆ ಬಂದ ಯುವ ಜನತೆ ಕೆಲವೇ ಸಮಯದಲ್ಲಿ ಭ್ರಮೆನಿರಸನ ಹೊಂದಿ ಮತ್ತೆ ಭಯೋತ್ಪಾದನೆಯತ್ತ ಆಕರ್ಷಿತರಾಗುವ ಅಪಾಯವಿದೆ.