ನಿರ್ದೇಶಕ ರವಿಶ್ರೀವತ್ಸ “ಟೈಗರ್ ಗಲ್ಲಿ’ ಚಿತ್ರ ಕಥೆ ಹೇಳಿದ್ದು ಒಬ್ಬಿಬ್ಬರಿಗಲ್ಲ. ಮೂವರು ಹೀರೋಗಳಿಗೆ! ಹಾಗಂತ, ರವಿ ಶ್ರೀವತ್ಸ ಹೇಳಿದ ಕಥೆ ಕೇಳಿ ಆ ಮೂವರ ಪೈಕಿ ಒಪ್ಪಿದ್ದು, ನೀನಾಸಂ ಸತೀಶ್ ಇರಬೇಕು ಅಂತಂದುಕೊಂಡರೆ ಆ ಊಹೆ ತಪ್ಪು. ಯಾಕೆಂದರೆ, ನೀನಾಸಂ ಸತೀಶ್ ಕಥೆ ಕೇಳಿದ ನಾಲ್ಕನೇ ಹೀರೋ! ಹೌದು, ನಿರ್ದೇಶಕ ರವಿ ಶ್ರೀವತ್ಸ ಸ್ವತಃ ಇದನ್ನು ಹೇಳಿಕೊಂಡಿದ್ದಾರೆ.
“ಟೈಗರ್ ಗಲ್ಲಿ’ ಕಥೆ ಮಾಡಿಕೊಂಡ ಬಳಿಕ ನೇರ ಎನ್.ಎಂ.ಕುಮಾರ್ ಬಳಿ ಹೋಗಿ ಕಥೆ ವಿವರಿಸಿದರಂತೆ ರವಿಶ್ರೀವತ್ಸ. ಕಥೆ ಕೇಳಿದ ಕುಮಾರ್, “ನೀನು ಎಲ್ಲವನ್ನೂ ಮಾಡ್ತೀಯ. ಆದರೆ, ಎಲ್ಲೋ ಒಂದು ಕಡೆ ಸಿನಿಮಾಗೆ ಬೇಕಾಗಿದ್ದನ್ನೇ ಮಾಡೋದಿಲ್ಲ. ನಿನ್ನ ಸಿನಿಮಾದಲ್ಲಿ ಮನರಂಜನೆಯೇ ಇರೋದಿಲ್ಲ ಅಂದಾಗ, ರವಿಶ್ರೀವತ್ಸ ಅವರಿಗೂ ಅದು ಸರಿಯೆನಿಸಿ, ಪುನಃ ಕಥೆಯಲ್ಲೊಂದಷ್ಟು ಸೆಂಟಿಮೆಂಟ್, ಎಮೋಷನ್ಸ್ ಮತ್ತು ಮನರಂಜನೆಗೆ ಬೇಕಾದ ಎಲಿಮೆಂಟ್ಸ್ ಇಟ್ಟು ಮತ್ತೂಮ್ಮೆ ಕಥೆ ಹೇಳಿದರಂತೆ.
ಆಗ ಯಾವುದೇ ಕಾರಣಕ್ಕೂ ಕಥೆ ಬದಲಿಸಬೇಡ, ನೇರ ಕಥೆಗೆ ಬೇಕಾದ ಹೀರೋ ಮನೆಗೆ ಹೋಗಿ, ಹೀರೋ ಬದಲಾದರೂ ಸರಿ, ನೀವು ಮಾಡಿಕೊಂಡಿರುವ ಸ್ಕ್ರಿಪ್ಟ್ ಬದಲಾಯಿಸಬೇಡಿ’ ಅಂದರಂತೆ ಕುಮಾರ್. ಎಲ್ಲವೂ ಸರಿಯೆನಿಸಿ, ನಿರ್ದೇಶಕರು ಮೊದಲು ಒಬ್ಬ ಹೀರೋ ಬಳಿ ಹೋದರಂತೆ, ಆ ಹೀರೋ ಬದಲಾವಣೆ ಬಯಸಿದರಂತೆ, ಪುನಃ ಮತ್ತೂಬ್ಬ ಹೀರೋ ಬಳಿ ಹೋದಾಗ ಅವರೂ ಕೆಲ ಬದಲಾವಣೆ ಹೇಳಿದರಂತೆ, ಇನ್ನೊಬ್ಬ ಹೀರೋ ಕೂಡ ಆ ಪಾತ್ರ ಹೈಲೈಟ್ ಆಗುತ್ತೆ,
ಈ ಪಾತ್ರ ಎದ್ದೇಳುತ್ತೆ, ಆ ಮೂವರು ಹುಡುಗರಿಗೆ ಜಾಸ್ತಿ ಜಾಗವಿದೆ. ಅವೆಲ್ಲವನ್ನು ಕಿತ್ತು ಹಾಕಿ ಅಂತಾನೇ ಹೇಳಿದರಂತೆ. ಕೊನೆಗೆ ರವಿಶ್ರೀವತ್ಸ ಆ ಹೀರೋಗಳ ಮಾತುಗಳಿಂದ ಬೇಸರಗೊಂಡು ಮುಂದೇನು ಮಾಡೋದು ಅಂತ ಬ್ಲಾಂಕ್ ಆಗಿ ಕುಳಿತಾಗ, ಅವರ ಮುಂದೆ ಬಂದದ್ದು ನೀನಾಸಂ ಸತೀಶ್. ಅವರಿಗೆ ಕಥೆ ಹೇಳಾಯ್ತು, ಅವರು ಕಥೆಯೊಳಗಿನ ಪಾತ್ರ ನಿರ್ವಹಿಸಬಲ್ಲೆನೆ ಅಂತಾನೂ ಕೇಳಾಯ್ತು, ನಿರ್ದೇಶಕರು ಧೈರ್ಯ ಕೊಟ್ಟಿದ್ದಾಯ್ತು. ಸಿನಿಮಾ ಕೂಡ ಅಂದುಕೊಂಡಂತೆಯೇ ನಡೆದದ್ದಾಯ್ತು.
ಅಕ್ಟೋಬರ್ 27 ಕ್ಕೆ ರಾಜ್ಯಾದ್ಯಂತ ಚಿತ್ರ ಪ್ರೇಕ್ಷಕರ ಮುಂದೆ ಬರುವುದಕ್ಕೂ ರೆಡಿಯಾಯ್ತು. ಹೀರೋಗಳ ಬಳಿ ಕಥೆ ಹೇಳಲು ಹೋದ ನಿರ್ದೇಶಕರಿಗೆ ಕಥೆ ಮತ್ತು ಕೆಲ ಪಾತ್ರ ಬದಲಿಸಿ ಅಂದಾಗ, ನೋವಾಗಿದ್ದು ನಿಜ. ಆದರೆ, ಈಗ ಅವರಿಗೆ ಅವರನ್ನು ಬದಿಗಿರಿಸಿ ಚಿತ್ರ ಮಾಡಿದ್ದಕ್ಕೂ ಖುಷಿಯಾಗಿದೆಯಂತೆ. ಪ್ರತಿಯೊಬ್ಬ ನಿರ್ದೇಶಕನಿಗೆ ಗುರುತಿಸಿಕೊಂಡ ನಟನ ಬಳಿ ಹೋಗಿ ಕಥೆ ಹೇಳಬೇಕು ಅನಿಸಿದರೆ, ರವಿಶ್ರೀವತ್ಸ ಅವರು ಮಾತ್ರ, ಅದನ್ನು ಪಕ್ಕಕ್ಕಿಟ್ಟು, ತಂತ್ರಜ್ಞರನ್ನು ಸೇರಿಸಿ ಸಿನಿಮಾ ಮಾಡೋಕೆ ಮುಂದಾದರು.
ಅವರಿಗೆ ಸಾಥ್ ಕೊಟ್ಟಿದ್ದು ನಿರ್ದೇಶಕರಾದ ಶಿವಮಣಿ, ಅಯ್ಯಪ್ಪ ಮತ್ತು ಜಟ್ಟ ಗಿರಿರಾಜ. ಇವರಿಗೆ ಒಂದಷ್ಟು ಸಲಹೆ ಕೊಟ್ಟು, ತಿದ್ದಿ ತೀಡಿದ್ದು ಕೆ.ವಿ.ರಾಜು. ಎಲ್ಲರ ಪ್ರೋತ್ಸಾಹದಿಂದ “ಟೈಗರ್ ಗಲ್ಲಿ’ ಹೊಸ ರೂಪ ಪಡೆದಿದೆ ಎಂಬುದು ನಿರ್ದೇಶಕರ ಮಾತು. ಇಷ್ಟೆಲ್ಲಾ ಹೇಳಿಯೂ ರವಿ ಶ್ರೀವತ್ಸ ಅವರಿಗೊಂದು ಬಲವಾದ ನಂಬಿಕೆ ಇದೆ.
ಅದೇನೆಂದರೆ, ಚಿತ್ರ ರಿಲೀಸ್ ದಿನದ ಮಧ್ಯಾಹ್ನದ ಹೊತ್ತಿಗೆ ನಾನು ಕಥೆ ಹೇಳಿದ ಆ ಮೂವರು ಹೀರೋಗಳು ಈ ಸ್ಕ್ರಿಪ್ಟ್ ಮಿಸ್ ಮಾಡಿಕೊಂಡೆವು ಅಂತ ಅಂದುಕೊಳ್ಳುವುದು ಗ್ಯಾರಂಟಿ. ಅಷ್ಟೇ ಅಲ್ಲ, ಸಂಜೆ ಹೊತ್ತಿಗೆ ಅವರು ನನಗೆ ಕಾಲ್ ಮಾಡಿ ಮಾತಾಡುವುದೂ ಅಷ್ಟೇ ಗ್ಯಾರಂಟಿ ಕೊಡ್ತೀನಿ. ಅಂದು ಸಂಜೆ ನಾನೇ ಕುಳಿತು, ಮಾಧ್ಯಮ ಮುಂದೆ ನಾನು ಕಥೆ ಹೇಳಿದ ಆ ಹೀರೋಗಳ್ಯಾರು ಎಂಬುದನ್ನು ಹೇಳುತ್ತೇನೆ ಅಂತ ಹೇಳಿ ಸುಮ್ಮನಾಗುತ್ತಾರೆ ರವಿ ಶ್ರೀವತ್ಸ.