ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಚಿತ್ರ ಸಾಹಿತಿಗಳನ್ನು ಅಸ್ಪೃಶ್ಯರ ರೀತಿಯಲ್ಲಿ ಕಾಣಲಾಗುತ್ತಿದೆ ಎಂದು ಹಿರಿಯ ಕವಿ ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಬೇಸರ ವ್ಯಕ್ತಪಡಿಸಿದರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಶನಿವಾರ ಟೋಟಲ್ ಕನ್ನಡ ಆಯೋಜಿಸಿದ್ದ ಡಿ.ಎಸ್. ಶ್ರೀನಿವಾಸಪ್ರಸಾದ್ ಅವರ “ಸಾಹಿತ್ಯಶಿಲ್ಪಿ ಚಿ.ಉದಯಶಂಕರ್’ ಕೃತಿ ಬಿಡುಗಡೆ ಮತ್ತು ಚಿ.ಉದಯಶಂಕರ್ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿನಿಮಾ ಕ್ಷೇತ್ರದ ಜತೆಗೆ ಸಂಪರ್ಕ ಇಟ್ಟುಕೊಂಡ ಕಾರಣಕ್ಕೆ ಸಾಹಿತ್ಯಲೋಕದಿಂದ ದೂರವಿಡುವುದು ಸರಿಯಲ್ಲ. ಸೃಜನಶೀಲ ಸಾಹಿತ್ಯ ಕ್ಷೇತ್ರಕ್ಕೆ ನಾವು ಕೂಡ ಸಾಕಷ್ಟು ಕೊಡುಗೆ ಕೊಟ್ಟಿದ್ದೇವೆ. ತೆಲುಗು, ಹಿಂದಿ ಭಾಷೆಗಳಲ್ಲಿ ಗುಲ್ಜಾರ್, ಅವರನ್ನು ಕೂಡ ಸಾಹಿತಿಗಳೆಂದೇ ಒಪ್ಪಿಕೊಳ್ಳಲಾಗಿದೆ. ನಮ್ಮಲ್ಲಿರುವ ಸ್ಥಿತಿ ಅಲ್ಲೆಲ್ಲೂ ಇಲ್ಲ. ಇಂತಹ ಮನೋಪ್ರವೃತ್ತಿ ಮೊದಲು ಬದಲಾಗಬೇಕು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಹಿರಿಯ ಚಿತ್ರ ನಿರ್ದೇಶಕ ಭಾರ್ಗವ, ಉದಯಶಂಕರ್ ಅವರ ಗುಣಗಾನ ಮಾಡಿದರು. ಅವಳ ಹೆಜ್ಜೆ, ಕರ್ಣ, ಹೃದಯಗೀತೆ ಸೇರಿದಂತೆ ನನ್ನ 25 ಸಿನಿಮಾಗಳಿಗೆ ಗೀತರಚನೆ ಮಾಡಿದ್ದ ಉದಯಶಂಕರ್, ಅವರನ್ನು ಸರಸ್ವತಿಪುತ್ರ ಎಂದರೂ ತಪ್ಪಿಲ್ಲ.
ಡಾ. ರಾಜ್‌ಕುಮಾರ್ ಅವರ 96 ಸಿನಿಮಾಗಳಿಗೆ ಚಿತ್ರ ಸಾಹಿತ್ಯ ಬರೆದ ಉದಯಶಂಕರ್, ಜನಪ್ರಿಯ ಗೀತೆಗಳ ಮೂಲಕವೆ ನಾಡಿನ ಮನೆ ಮಾತಾಗಿದ್ದಾರೆ ಎಂದರು. ಸಮಾರಂಭದಲ್ಲಿ ಚಿ.ಉದಯಶಂಕರ್ ಅವರ ಪುತ್ರ ಚಿ.ಗುರುದತ್ತ, ವಿಮರ್ಶಕ ಶ್ರೀಧರ್ ಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
15 ನಿಮಿಷದಲ್ಲೇ ಗೀತೆ ರಚನೆ: “ಸರಳ ಭಾಷೆಯಲ್ಲೇ ಹಾಡು ಬರೀ, ಅದು ಜನರಿಗೆ ಬೇಗ ತಲುಪತ್ತದೆ ಎಂದು ಹೇಳಿ ಕೊಟ್ಟವರು ಹಿರಿಯ ಚಿತ್ರ ಸಾಹಿತಿ ಚಿ.ಉದಯಶಂಕರ್. ಹಾಡುಬರೆಯುವ ಗುಟ್ಟನ್ನು ಅವರಿಂದಲೇ ತಿಳಿದುಕೊಂಡೆ. ನಾವು ನಿತ್ಯ ಬಳಸುತ್ತಿದ್ದ ಪದಗಳನ್ನೇ ಇಟ್ಟುಕೊಂಡು ಅವರು ಗೀತೆ ರಚಿಸುತ್ತಿದ್ದ ಪರಿ ವಿಶೇಷವಾದದ್ದು,
ಯಾವಾಗಲೂ ಪಾದರಸದಂತೆ ಇರುತ್ತಿದ್ದ ಅವರು, ಹಲವರನ್ನು ಪೋತ್ಸಾಹಿಸುತ್ತಿದ್ದರು. ಬಸ್ ಟಿಕೆಟ್ ಇದ್ದರೆ ಅದರ ಮೇಲೇ ಗೀತೆ ರಚಿಸಿಕೊಡುತ್ತಿದ್ದ ಅವರು, ಒಂದು ಗೀತೆ ರಚನೆಗೆ ಅತಿಹೆಚ್ಚೆಂದರೆ 15 ನಿಮಿಷ ತೆಗೆದುಕೊಳ್ಳುತ್ತಿದ್ದರು. ಹಾಗಾಗಿ ಚಿ.ಉದಯಶಂಕರ್ ಕನ್ನಡದ ಕಣ್ಣದಾಸನ್,’ ಎಂದು ಡಾ.ದೊಡ್ಡರಂಗೇಗೌಡ ಬಣ್ಣಿಸಿದರು.