ಆಳಂದ: ಸಮಾನ ಶಿಕ್ಷಣದಿಂದ ಸಮಾನ ಅವಕಾಶಗಳು ದೊರಯುತ್ತವೆ ಅವುಗಳನ್ನು ಸರಿಯಾಗಿ ಬಳಸಿಕೊಂಡರೆ ಶಿಕ್ಷಣದ ಸಾರ್ಥಕತೆ ಮನದಟ್ಟಾಗುತ್ತದೆ ಎಂದು ಶಾಸಕ ಸುಭಾಷ್ ಗುತ್ತೇದಾರ ಹೇಳಿದರು.
ತಾಲೂಕಿನ ರುದ್ರವಾಡಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ ಮಂಜೂರಾದ ರೂ. 41 ಲಕ್ಷ ರೂ.ಗಳ 4 ಶಾಲಾ ತರಗತಿ ಕೋಣೆಗಳ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಮಕ್ಕಳ ಶಿಕ್ಷಣ ವ್ಯವಸ್ಥೆ ಕ್ರಾಂತಿಕಾರಕ ಬದಲಾವಣೆಗಾಗಿ ತಾಲೂಕಿನಾದ್ಯಂತ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಬಹಳ ವರ್ಷಗಳ ಹಿಂದೆ ಕಟ್ಟಿದ ಶಾಲೆಗಳಿಗೆ ಕಾಯಕಲ್ಪ ನೀಡುವ ಹಂತವಾಗಿ ಶಾಲಾ ಕೋಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಭೌತಿಕ ಸಂಪನ್ಮೂಲ ಭರ್ತಿಯಾಗಿ ವಿದ್ಯಾರ್ಥಿಗಳು ಶಾಲೆಗಳತ್ತ ಹೆಜ್ಜೆ ಹಾಕುತ್ತಾರೆ ಎಂದು ಅಭಿಪ್ರಾಯಪಟ್ಟರು.
ಶೈಕ್ಷಣಿಕ ವ್ಯವಸ್ಥೆ ಸುಧಾರಿಸದ ಹೊರತು ಸಾಮಾಜಿಕ ವ್ಯವಸ್ಥೆ ಬದಲಾಗುವುದಿಲ್ಲ. ಅದಕ್ಕಾಗಿ ಸರ್ವರಿಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರಗಳು ಶ್ರಮಿಸುತ್ತಿವೆ. ಅದರಂಗವಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ನೂರಾರು ಯೋಜನೆಗಳು ಚಾಲ್ತಿಯಲ್ಲಿವೆ. ಇದರ ಲಾಭವನ್ನು ಸಮಾಜದ ಜನತೆ ಪಡೆಯಬೇಕು ಎಂದು ಕರೆ ನೀಡಿದರು.
ರುದ್ರವಾಡಿ ಗ್ರಾಮದ ಜನರ ಆಶಯದಂತೆ ಶಾಲಾ ಕೋಣೆಗಳು ನಿರ್ಮಾಣವಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮದ ಇತರೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಅಲ್ಲದೇ ಬಹಳ ವರ್ಷಗಳ ಬೇಡಿಕೆಯಾದ ಬಬಲೇಶ್ವರ-ರುದ್ರವಾಡಿ ರಸ್ತೆಗೆ ಅನುದಾನ ಮಂಜೂರಿ ಮಾಡಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಪ್ರಕಾಶ ಭೂಸಣಗೆ, ಗ್ರಾಮದ ಮುಖಂಡರಾದ ಗುರುನಾಥ ಹೀರಾ, ಬಸವರಾಜ ಮೂಲಗೆ, ಶ್ರೀಧರ ಕೊಟ್ಟರ್ಕಿ, ವಿಠೊಬಾ ಕಾಮಶೆಟ್ಟಿ, ರಘುನಾಥ ಪಾಟೀಲ, ಸಾಯಬಣ್ಣ ಪೂಜಾರಿ, ಕಾಶಿನಾಥ ಕೊಟ್ಟರ್ಕಿ, ಗೌತಮ ವಾಘ್ಮೋರೆ, ಆಕಾಶ ವಾಘ್ಮೋರೆ, ರಾಜಕುಮಾರ, ಶಿವಲಿಂಗ ಡಿಗ್ಗಿ, ಶಿವಪ್ರಕಾಶ ಹೀರಾ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಸಂದೀಪ, ರುದ್ರವಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.