Advertisement
ಸಚಿವ ಎಸ್. ಸುರೇಶ್ ಕುಮಾರ್ ಅವರನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಬದಲಿಸಬೇಕೆಂಬ ಕೂಗು ಮೊದಲಿನಿಂದಲೂ ಇದ್ದು, ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾದ ದುರಂತದ ಬಳಿಕ ಅವರ ಬದಲಾವಣೆಗೆ ಇನ್ನಷ್ಟು ಆಗ್ರಹಗಳು ವ್ಯಕ್ತವಾಗುತ್ತಿವೆ.
Related Articles
Advertisement
ಜಿಲ್ಲಾ ವಕೀಲರ ಸಂಘದ ಒತ್ತಾಯ: ಕೆಲಮುಖಂಡರು ಪತ್ರಿಕಾಗೋಷ್ಠಿಗಳನ್ನೇ ನಡೆಸಿ ಸುರೇಶ್‌ಕುಮಾರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲಾ ವಕೀಲರಸಂಘದ ಅಧ್ಯಕ್ಷರು ಪದಾಧಿಕಾರಿಗಳು ಇತ್ತೀಚಿಗೆ ಸುದ್ದಿಗೋಷ್ಠಿ ನಡೆಸಿ, ಸುರೇಶ್‌ಕುಮಾರ್ ಅವರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಅವರು ವಿಫಲರಾಗಿದ್ದಾರೆ. ಆದ್ದರಿಂದ ಅವರನ್ನು ಉಸ್ತುವಾರಿಯಿಂದ ಬದಲಿಸಬೇಕೆಂದು ಒತ್ತಾಯಿಸಿದ್ದರು.
ಪ್ರಸ್ತುತ ಆಕ್ಸಿಜನ್ ಕೊರತೆ ದುರಂತ ನಡೆದ ಬಳಿಕವಂತೂ ಅವರ ವಿರುದ್ಧ ಅನೇಕ ಟೀಕೆಗಳು ಕೇಳಿ ಬಂದಿವೆ. ಕೋವಿಡ್ ಎರಡನೇ ಅಲೆ ಆರಂಭವಾದ ಬಳಿಕ ಎರಡು ಬಾರಿ ಕ್ಲುಪ್ತ ಸಭೆಗಳನ್ನುನಡೆಸಿ ಹೋಗಿದ್ದು ಬಿಟ್ಟರೆ, ಇಲ್ಲಿನ ಆಸ್ಪತ್ರೆಗಳ ಸಮಸ್ಯೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ, ಆಕ್ಸಿಜನ್ ಪೂರೈಕೆ, ಹಾಸಿಗೆಗಳ ಲಭ್ಯತೆಗೆ ಕೈಗೊಳ್ಳಬೇಕಾದ ಕ್ರಮಗಳು ಇತ್ಯಾದಿಯ ಬಗ್ಗೆ ಕಾಳಜಿವಹಿಸಲಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ
ಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರು ಫೇಸ್‌ಬುಕ್‌ನಲ್ಲಿ ಬಹಳ ಸಕ್ರಿಯರು. ಆಕ್ಸಿಜನ್ ದುರಂತದ ಬಗ್ಗೆ ಅದೇ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದವು. ಅವರು ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿರುತ್ತಾರೆ. ಆದರೆ ಆಕ್ಸಿಜನ್ ಕೊರತೆ ಅವರಿಗೆ ಗೊತ್ತಾಗಲಿಲ್ಲವೇ? ಎಂದು ಹಲವರು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ. ಸುರೇಶ್‌ಕುಮಾರ್ ಅವರು ಕೋವಿಡ್ ವಿಷಯದಲ್ಲಿ ತಮ್ಮ ಶಾಸಕ ಕ್ಷೇತ್ರ ರಾಜಾಜಿನಗರದ ಬಗ್ಗೆ ತೆಗೆದುಕೊಂಡಷ್ಟು ಆಸಕ್ತಿಯನ್ನು ತಮ್ಮ ಉಸ್ತುವಾರಿ ಜಿಲ್ಲೆಯ ಬಗ್ಗೆ ವಹಿಸುತ್ತಿಲ್ಲ ಎಂಬ ಟೀಕೆಗಳು ಫೇಸ್‌ಬುಕ್‌ನಲ್ಲಿ ವ್ಯಕ್ತವಾಗಿದ್ದವು.
ಎಲ್ಲವೂ ಸರಿ ಇದೆ ಎಂಬುದನ್ನು ನಂಬಿದ ಸಚಿವರು
ಸಚಿವರು ಜಿಲ್ಲೆಗೆ ಬಂದಾಗ ಜಿಲ್ಲಾಧಿಕಾರಿ ಡಾ.ರವಿ ಅವರು ನೀಡುವ ಎಲ್ಲವೂ ಸರಿಯಾಗಿದೆ ಎಂಬ ಮಾಹಿತಿಗಳನ್ನೇ ನಂಬಿದರು. ಆಕ್ಸಿಜನ್‌ಕೊರತೆ ವಿಷಯದಲ್ಲೂ ಇದೇ ದುರಂತಕ್ಕೆ ಕಾರಣವಾಯಿತು ಎನ್ನಲಾಗುತ್ತಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆಕ್ಸಿಜನ್ ಕೊರತೆ ತೀವ್ರವಾಗಿತ್ತು. ಆದರೆ ಜಿಲ್ಲಾಧಿಕಾರಿಯವರು ಮಾತ್ರ ಹಾಸಿಗೆಗಳಿಗೆ ಕೊರತೆಯಿಲ್ಲ, ಆಕ್ಸಿಜನ್‌ಗೆ ಕೊರತೆಯಿಲ್ಲ ಎಂದೇ ಹೇಳುತ್ತಿದ್ದರು. ಸುದ್ದಿಗೋಷ್ಠಿಗಳಲ್ಲೂ ಆಲ್ ಈಸ್ ವೆಲ್ ಎಂಬುದೇ ಅವರ ಧ್ಯೇಯ ವಾಕ್ಯವಾಗಿತ್ತು. ಇದೇ ಮಾಹಿತಿಯನ್ನೇ ಉಸ್ತುವಾರಿ ಸಚಿವರಿಗೂ ಕೊಡುತ್ತಿದ್ದರು. ಹೀಗಾಗಿ ಸಮಸ್ಯೆಗಳ ತೀವ್ರತೆ ಸುರೇಶ್‌ಕುಮಾರ್ ಅವರಿಗೆ ಅರಿವಾಗಲಿಲ್ಲ. ಅದನ್ನು ಪರಿಹರಿಸಲು ಕ್ರಮವನ್ನೂ ಕೈಗೊಳ್ಳಲಾಗಲಿಲ್ಲ. ಹೀಗಾಗಿ ಆಕ್ಸಿಜನ್ ಕೊರತೆ ಇರುವ ಭೀಕರ ಸಮಸ್ಯೆಯೊಂದು ಅವರು ಗಮನಕ್ಕೆ ಬರಲಿಲ್ಲ.
ಸ್ವಪಕ್ಷದವರ ಅಸಮಾಧಾನ
ಸುರೇಶ್‌ಕುಮಾರ್ ಕಾರ್ಯವೈಖರಿಯ ಬಗ್ಗೆ ಜಿಲ್ಲೆಯ ಬಿಜೆಪಿ ವಲಯದಲ್ಲೇ ಅಸಮಾಧಾನಗಳಿವೆ. ಸ್ಥಳೀಯ ಬಿಜೆಪಿ ಮುಖಂಡರನ್ನು ಅವರು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪ್ರಮುಖ ಮುಖಂಡರು, ಕಾರ್ಯಕರ್ತರನ್ನು ಪರಿಗಣಿಸಿಲ್ಲ ಎಂಬ ಅತೃಪ್ತಿ ಅನೇಕ ಮುಖಂಡರಲ್ಲಿದೆ. ಪಕ್ಷದ ಮುಖಂಡರೇ ಅವರನ್ನು ಜಿಲ್ಲಾ ಉಸ್ತುವಾರಿಯಿಂದ ಬದಲಿಸಬೇಕೆಂದು ವರಿಷ್ಠರಲ್ಲಿ ಒತ್ತಾಯ ಮಾಡಿದ್ದೂ ಇದೆ. ಈ ಬಗ್ಗೆ ಬಹಿರಂಗವಾಗಿ ಮಾತನಾಡಲಾಗದೇ, ಪಕ್ಷದ ಘಟಕಗಳಲ್ಲಿ, ಪರಸ್ಪರ ಅಸಮಾಧಾನ ಹಂಚಿಕೊಂಡಿದ್ದಾರೆ
ಸಚಿವ ಅಶೋಕ್ ಹೇಳಿಕೆ ಹಂಚಿಕೊಂಡು ಸಂತಸ
ಕೆಲವು ತಿಂಗಳ ಹಿಂದೆ ಚಾಮರಾಜನಗರಕ್ಕೂಎಸ್.ಟಿ. ಸೋಮಶೇಖರ್ ಅವರನ್ನೇ ಉಸ್ತುವಾರಿ ಸಚಿವರಾಗಿ ನೇಮಿಸಬೇಕೆಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಮದ್ದೂರಿನ ಸಭೆಯೊಂದರಲ್ಲಿ ಹೇಳಿದ್ದರು. ಆ ಪತ್ರಿಕೆಯ ಕಟಿಂಗ್ ಅನ್ನು ಜಿಲ್ಲೆಯ ಬಿಜೆಪಿಯ ಹಲವು ಪದಾಧಿಕಾರಿಗಳು ಗ್ರೂಪ್‌ಗಳಲ್ಲಿ, ವೈಯಕ್ತಿಕವಾಗಿ ಹಂಚಿಕೊಂಡು ಸಂಭ್ರಮಿಸಿದ್ದರು.