Advertisement

ಪೆರುವಾಯಿ ನಾರಾಯಣ ಭಟ್ಟರಿಗೆ ಪಡ್ರೆ ಚಂದು ಪ್ರಶಸ್ತಿ

03:50 AM Feb 24, 2017 | |

ತೆಂಕುತಿಟ್ಟು ಯಕ್ಷಗಾನ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಲು ಮಾರ್ಗದರ್ಶಿ ಸಂಸ್ಥೆಯಾಗಿ ತಲೆಯೆತ್ತಿ ನಿಂತಿರುವ ಕಾಸರಗೋಡಿನ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರಕ್ಕೆ ಇದೀಗ ಹನ್ನೆರಡನೇ ವರ್ಷದ ಸಂಭ್ರಮ. ಯಕ್ಷಗಾನ ಕಲಿಕೆಯ ಬಗೆಗೆ ಆಸಕ್ತಿಯುಳ್ಳವರಿಗೆ ಉಚಿತವಾಗಿ ಊಟ ಹಾಗೂ ವಸತಿಯ ಸಹಿತ ತರಬೇತಿ ಒದಗಿಸುತ್ತಿರುವ ತೆಂಕಿನ ಏಕೈಕ ಕಲಾ ಕೇಂದ್ರವೆಂಬ ಅಗ್ಗಳಿಕೆಯೂ ಈ ಸಂಸ್ಥೆಗಿದೆ. ಖ್ಯಾತ ಯಕ್ಷಗಾನ ಕಲಾವಿದ ಸಬ್ಬಣಕೋಡಿ ರಾಮ ಭಟ್ಟರಿಂದ ಮುನ್ನಡೆಸಲ್ಪಡುತ್ತಿರುವ ಈ ಸಂಸ್ಥೆ ಪ್ರತಿ ವರ್ಷವೂ ತನ್ನ ವಾರ್ಷಿಕೋತ್ಸವದಂದು ಅರ್ಹ ಯಕ್ಷಗಾನ ಕಲಾವಿದರಿಗೆ “ಪಡ್ರೆ ಚಂದು ಪ್ರಶಸ್ತಿ’ಯನ್ನು ನೀಡಿ ಗೌರವಿಸುತ್ತಾ ಬಂದಿದೆ. ಪ್ರಸ್ತುತ ವರ್ಷ ಈ ಗೌರವಕ್ಕೆ ಪಾತ್ರರಾಗಿರುವವರು ಕಟೀಲು ಮೇಳದ ಹಿರಿಯ ಮದ್ದಳೆ ವಾದಕ ಬಿ. ನಾರಾಯಣ ಭಟ್‌ ಪೆರುವಾಯಿ.

Advertisement

ಬಂಟ್ವಾಳ ತಾಲೂಕಿನ ಒಂದು ಮೂಲೆಯಲ್ಲಿರುವ ಪೆರುವಾಯಿಯ ಕಡೆಂಗೋಡ್ಲು ಬರೆಮನೆ ಎಂಬಲ್ಲಿ ಇವರ ಜನನವಾಯಿತು. ತಂದೆ ಮಹಾಲಿಂಗ ಭಟ್‌ ಹಾಗೂ ತಾಯಿ ಮೂಕಾಂಬಿಕಾ. ಓದಿದ್ದು ಪಿಯುಸಿ, ಸೆಳೆದದ್ದು ಯಕ್ಷಗಾನ!  ಹಿರಿಯ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸಿŒಗಳೊಡನೆ 1974ರಲ್ಲಿ ಸೊರ್ನಾಡು ಮೇಳದಲ್ಲಿ ತಿರುಗಾಟ ಆರಂಭಿಸಿದ ನಾರಾಯಣ ಭಟ್‌, 1975ರಲ್ಲಿ ಬಲಿಪ ನಾರಾಯಣ ಭಾಗವತರ ಶಿಫಾರಸಿನ ಮೇಲೆ ಕಟೀಲು ಮೇಳಕ್ಕೆ ಪದಾರ್ಪಣೆ ಮಾಡಿದವರು. ಇರಾ ಗೋಪಾಲಕೃಷ್ಣ ಭಾಗವತ, ನೆಡ್ಲೆ ನರಸಿಂಹ ಭಟ್ಟರಂತಹ ದಿಗ್ಗಜರೊಂದಿಗೆ ಮದ್ದಳೆಯ ಪಟ್ಟುಗಳನ್ನು ಅರಿತವರು. ಪರಿಣಾಮವಾಗಿಯೇ 1981ರಿಂದ ಕಟೀಲು ಎರಡನೇ ಮೇಳದಲ್ಲಿ ಪ್ರಧಾನ ಮದ್ದಳೆವಾದಕರಾಗಿ ಸೇವೆ ಸಲ್ಲಿಸುತ್ತಾ ಬಂದಿರುವವರು.

ಪಡ್ರೆ ಚಂದು, ಕೇದಗಡಿ ಗುಡ್ಡಪ್ಪ ಗೌಡ, ಬಣ್ಣದ ಮಾಲಿಂಗ, ಅಳಿಕೆ ರಾಮಯ್ಯರೈ, ಪೆರುವಾಯಿ ನಾರಾಯಣ ಶೆಟ್ಟಿ ಮೊದಲಾದ ಕಲಾವಿದರ ಒಡನಾಟ ಇವರನ್ನು ಮಾಗಿಸಿತು ಎಂಬುದರಲ್ಲಿ ಸಂಶಯವಿಲ್ಲ. ಹಲವಾರು ಕಡೆಗಳಲ್ಲಿ ಹಿಮ್ಮೇಳ ವಾದನದ ತರಗತಿಯನ್ನೂ ನಡೆಸಿ ಶಿಷ್ಯರನ್ನೂ ರೂಪಿಸಿದ ಹೆಗ್ಗಳಿಕೆ ಇವರದು. ಇವರಿಗೆ ಪಡ್ರೆ ಚಂದು ಪ್ರಶಸ್ತಿ ಅರ್ಹವಾಗಿಯೇ ಒಲಿದು ಬಂದಿದೆ.

ಪೂಕಳರಿಗೆ ಅಡ್ಕಸ್ಥಳ ಪ್ರಶಸ್ತಿ 
ಯಕ್ಷ ಗಾನ ಕೇಂದ್ರದ ವಾರ್ಷಿಕ ಉತ್ಸವ ದಂದು ಅಡ್ಕಸ್ಥಳ ಪ್ರಶಸ್ತಿ ಯನ್ನು ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ಟರಿಗೆ ನೀಡಲಾಗುತ್ತಿದೆ. ಖ್ಯಾತ ಅರ್ಥಧಾರಿ ಪೂಕಳ ಕೃಷ್ಣ ಭಟ್‌ ಹಾಗೂ ಶಂಕರಿ ಅಮ್ಮನವರ ಪುತ್ರನಾದ ಇವರು ಮೂವತ್ತೈದಕ್ಕೂ ಹೆಚ್ಚು ವರ್ಷಗಳಿಂದ ಕಲಾಸೇವೆಗೈಯುತ್ತಿದ್ದಾರೆ. ಪ್ರೇಕ್ಷಕರ, ಕಲಾವಿದರ, ಸಂಘಟಕರ ಹೀಗೆ ಎಲ್ಲರ ಮನಗೆದ್ದ ಈ ಕಲಾವಿದನಿಗೆ ಈ ಬಾರಿಯ ಅಡ್ಕಸ್ಥಳ ಪ್ರಶಸ್ತಿ ದೊರೆತಿದೆ. ಇದೇ ಸಂದರ್ಭದಲ್ಲಿ ಖ್ಯಾತ ಮೃದಂಗ ವಿದ್ವಾನ್‌ ಶಂಕರ ಭಟ್‌ ಕುಕ್ಕಿಲ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಗುತ್ತದೆ.

ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ     ಪೆರ್ಲದಲ್ಲಿ ಫೆಬ್ರವರಿ 25ರಂದು  ನಡೆಯಲಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಸಹಿತ ವಿವಿಧ ಕಾರ್ಯಕ್ರಮಗಳು, ಯಕ್ಷಗಾನ ಪ್ರದರ್ಶನಗಳು ಜರಗಲಿವೆ.

Advertisement

ರಾಕೇಶ್‌ ಕುಮಾರ್‌ ಕಮ್ಮಜೆ

Advertisement

Udayavani is now on Telegram. Click here to join our channel and stay updated with the latest news.

Next