Advertisement

ಚಂದ್ರೇಗೌಡರು ಎಲ್ಲೂ ಸ್ಥಿರವಾಗಿ ನಿಲ್ಲಲಿಲ್ಲ: ಸಚಿವ ರಮೇಶ್‌ ಕುಮಾರ್‌

11:56 AM Oct 09, 2017 | |

ಬೆಂಗಳೂರು: “ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರನ್ನ ಯಾವ ಹುದ್ದೆಯಲ್ಲಿ ಕೂರಿಸಬೇಕಿತ್ತೋ ಅಲ್ಲಿ ಕೂರಿಸದೆ ಎಲ್ಲ ಹುದ್ದೆ ನೀಡಿದರು. ಅಂತಹದ್ದೇ ಪರಿಸ್ಥಿತಿ ಹಿರಿಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡ ಅವರದ್ದು’ ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್‌ ಮಾರ್ಮಿಕವಾಗಿ ನುಡಿದು ಡಿಬಿಸಿ ಅವರ ರಾಜಕೀಯ ಸ್ಥಿತಿಗತಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.

Advertisement

ಭಾನುವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸಹ್ಯಾದ್ರಿ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಡಿ.ಬಿ.ಚಂದ್ರೇಗೌಡ (ಡಿಬಿಸಿ)ಅವರಿಗೆ ಸಹ್ಯಾದ್ರಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಯುವ ಕಾಂಗ್ರೆಸಿನ ಅಧ್ಯಕ್ಷರಿಂದ ಹಿಡಿದು ಈ ದಿವಸದ ವರೆಗೆ ನಾಲ್ಕೂ ಸದನಗಳನ್ನು ಡಿ.ಬಿ.ಚಂದ್ರೇಗೌಡ ಪ್ರತಿನಿಧಿಸಿದ್ದಾರೆ. ಕೇವಲ ಸದಸ್ಯರಾಗಿ ಅಲ್ಲ, ಮುಖಂಡರಾಗಿಯೂ ಕೆಲಸ ಮಾಡಿದ್ದಾರೆ. ಆದರೆ, ಯಾವುದು ಆಗಬೇಕಾಗಿತ್ತೋ ಅದೊಂದು ಆಗಲಿಲ್ಲ. ದೇವರಾಜ ಅರಸು ಅವರ ನಂತರ ಮುಖ್ಯಮಂತ್ರಿಯಾಗಬೇಕಿದ್ದ ಅವರು ಏಕಾಏಕಿ ಕೆಳಕ್ಕೆ ಕುಸಿದರು.

ರಾಜಕೀಯದ ಮಸಲತ್ತು ಹೇಗಿರುತ್ತದೆ ಅಂದರೆ, ಇಂದಿರಾಗಾಂಧಿಯರವರ ಗೆಲುವಿಗೆ ಸಹಕರಿಸಿದ, ತಮ್ಮ ಅಧಿಕಾರವನ್ನೇ ಪಣವಾಗಿಟ್ಟ ಚಂದ್ರೇಗೌಡರನ್ನೇ ಇಂದಿರಾಗಾಂಧಿ ಅವರ ವಿರೋಧಿಗಳು ಎಂದು ಬಣ್ಣಿಸಿ ಅವರನ್ನು ಕೆಲವರು ದೂರವಿಟ್ಟರು ಎಂದು ಹೇಳಿದರು.

ರಾಜಕಾರಣದಲ್ಲಿ ಸಜ್ಜನರಾಗಿರುವುದೇ ಕೆಟ್ಟದು. ಇಲ್ಲಿ ಘಾಟಿತನ ಇರಬೇಕು. ಮುಖ್ಯಮಂತ್ರಿ ಆಗಬೇಕಾದ ಅವರನ್ನು ಸ್ಪೀಕರ್‌ ಮಾಡಲಾಯಿತು. ನನ್ನನ್ನೂ ಕೂಡ ನನ್ನ 43ನೇ ವಯಸ್ಸಿಗೆ ಸ್ಪೀಕರ್‌ ಮಾಡಿದರು.  ನನ್ನಾಸೆ ಏನಪ್ಪಾ ಅಂದ್ರೆ ಅವರು ಮುಖ್ಯಮಂತ್ರಿ ಆಗಿದ್ದರೆ ನನಗೊಂದು ಒಳ್ಳೆಯ ಖಾತೆ ಸಿಗುತ್ತಿತ್ತೇನೋ ಎಂದು ಚಟಾಕಿ ಹಾರಿಸಿದರು.

Advertisement

ಚಂದ್ರೇಗೌಡರು ಯಾಕೆ ಸರ್ವೋತ್ಛ ನಾಯಕರು ಆಗಲು ಸಾಧ್ಯವಾಗಲಿಲ್ಲ ಎಂದರೆ, ಸರ್ವೋತ್ಛ ನಾಯಕರಿಗೆ ಅಂದೊಂದೇ ಅಜೆಂಡಾ. ಆದರೆ ಇವರಿಗೆ ಅದು ಬಿಟ್ಟು ಬೇರೆ ಎಲ್ಲಾ ಅಂಜೆಂಡಾಗಳು ಇದ್ದುದರಿಂದ ಸರ್ವೋತ್ಛ ನಾಯಕರಾಗಲು ಆಗಲಿಲ್ಲ. ರಾಷ್ಟ್ರಕವಿ ಕುವೆಂಪು ಅವರನ್ನು ಆದರ್ಶವಾಗಿಟ್ಟುಕೊಂಡು ತಮ್ಮ ಸೈದ್ಧಾಂತಿಕ ನಿಲುವುಗಳ ಮೂಲಕ ರಾಜಕಾರಣ ಮಾಡಿದ್ದ ಡಿಬಿಸಿ ಅವರು, ಅತ್ಯಂತ ಪ್ರಾಮಾಣಿಕ ರಾಜಕಾರಣಿ.

ಅವರಿಗೆ ಸಹ್ಯಾದ್ರಿ ಪ್ರಶಸ್ತಿ ಸಂದಿರುವುದು ಸಮಂಜಸವಾಗಿದೆ ಎಂದು ಹೇಳಿದರು. ಸಹ್ಯಾದ್ರಿ ಸಂಘದ ಅಧ್ಯಕ್ಷ ಕೆ.ವಿ.ಆರ್‌.ಟ್ಯಾಗೋರ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪುರುಷೋತ್ತಮಗೌಡ, ಗಂಗಪ್ಪಗೌಡ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next