ಶಿವಮೊಗ್ಗ: ಇಸ್ರೋ (ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ) ನಡೆಸಿದ ಚಂದ್ರಯಾನ-2 ನಮ್ಮ ಯುವ ಸಮೂಹಕ್ಕೆ ಮುಂದಿನ ಹಲವು ಕೌತುಕ ಸಂಶೋಧನೆಗಳಿಗೆ ಪ್ರೇರಣಾ ಶಕ್ತಿಯಾಗಿದ್ದು ಯುವ ಸಮೂಹ ಯಾವುದೇ ಸೋಲು ಹಾಗೂ ಸವಾಲುಗಳಿಗೆ ಅಂಜದೆ ಹೊಸತನದ ಚಿಂತನೆಯೆಡೆಗೆ ಸಾಗಬೇಕಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ| ಕೆ.ಶಿವನ್ ಹೇಳಿದರು.
ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎನ್‌ಇಎಸ್(ರಾಷ್ಟ್ರೀಯ ಶಿಕ್ಷಣ ಸಮಿತಿ)ನ ಅಮೃತ ಮಹೋತ್ಸವದ ನಿಮಿತ್ತ ಉಪನ್ಯಾಸ ಸರಣಿ ಉದ್ಘಾಟಿಸಿ ಮಾತನಾಡಿದ ಅವರು, ಎಷ್ಟೇ ಹೊಸ ತಂತ್ರಜ್ಞಾನಗಳು ಬಳಕೆಗೆ ಲಭ್ಯವಾದರೂ ಮನುಷ್ಯಾಧಾರಿತ ಸಂಶೋಧನೆಗಳು ಮತ್ತಷ್ಟು ಮುನ್ನಡೆಯಬೇಕಿದೆ ಎಂದರು.
ಸರ್ಕಾರಿ ಶಾಲೆಯಲ್ಲಿ ಓದಿದ ನನಗೆ ಕೆಲಸಕ್ಕಾಗಿ ವಿದೇಶಗಳಿಗೆ ತೆರಳದೆ ಭಾರತದಲ್ಲಿಯೇ ಸೇವೆ ಸಲ್ಲಿಸುವಂತೆ ಪ್ರೇರಣೆ ನೀಡಿತು. ಬೆಳೆದ ಪರಿಸರ ಮತ್ತು ಆತ್ಮವಿಶ್ವಾಸ ರೈತಾಪಿಯಿಂದ ಇಸ್ರೋ ಅಧ್ಯಕ್ಷ ಹುದ್ದೆಯವರೆಗೆ ಏರುವಂತೆ ಮಾಡಿತು. ಹಾಗಾಗಿಯೇ ನಮ್ಮ ನಡುವಿನ ಪರಿಸರದಿಂದ ನಾವು ನಿಜವಾದ ಪ್ರೇರಣೆ ಪಡೆಯಬೇಕಾಗಿದೆ ಎಂದರು.
ಇಸ್ರೋ ಭೂ ಸರ್ವೇಕ್ಷಣಾ ಉಪಗ್ರಹಗಳ ಮೂಲಕ ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ಹೆಚ್ಚು ನಿಗಾ ವಹಿಸಲು ಸಾಧ್ಯವಾಗಲಿದ್ದು ಕೃಷಿ, ಅರಣ್ಯ ಸೇರಿದಂತೆ ಎಂತಹುದೇ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿಯೂ ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ರವಾನಿಸಲಿದೆ. ಇದರೊಂದಿಗೆ ಸಾಗರ, ಪರ್ವತ, ಗಣಿ, ಖನಿಜ ಸಂಪತ್ತು ಸೇರಿದಂತೆ ಭೂಮಿಯ ಬಾಹ್ಯರೇಖೆಯ ಸಂಪೂರ್ಣ ಮಾಹಿತಿ ಒದಗಿಸಲಿದೆ ಎಂದರು.
ಎನ್‌ಇಎಸ್ ಅಧ್ಯಕ್ಷ ಎ.ಎಸ್. ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಸ್.ಎನ್. ನಾಗರಾಜ್, ಖಜಾಂಚಿ ಸಿ.ಆರ್. ನಾಗರಾಜ್, ನಿರ್ದೇಶಕರಾದ ಡಾ|ಪಿ.ನಾರಾಯಣ್, ಜಿ.ಎಸ್.ನಾರಾಯಣ ರಾವ್, ಎನ್.ಟಿ. ನಾರಾಯಣ ರಾವ್, ಎಚ್.ಸಿ. ಶಿವಕುಮಾರ್, ಕುಲಸಚಿವ ಪ್ರೊ| ಹೂವಯ್ಯ ಗೌಡ, ಪ್ರಾಚಾರ್ಯ ಡಾ| ಕೆ.ನಾಗೇಂದ್ರ ಪ್ರಸಾದ್, ಶೈಕ್ಷಣಿಕ ಡೀನ್ ಡಾ| ಪಿ.ಮಂಜುನಾಥ ಇದ್ದರು.
ಟಿಪ್ಪು ಬಾಹ್ಯಾಕಾಶ ತಂತ್ರಜ್ಞಾನ ಬಳಸಿಕೊಂಡ ಮೊದಲ ರಾಜ
ಪ್ರತಿಯೊಬ್ಬ ಭಾರತೀಯನೂ ಬಾಹ್ಯಾಕಾಶ ತಂತ್ರಜ್ಞಾನದೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ಸಂಬಂಧ ಹೊಂದಿದ್ದಾನೆ. ಅದರೆ ಅನೇಕರಲ್ಲಿ ಇಸ್ರೋ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ಇಲ್ಲದಿರುವುದು ವಿಷಾದನೀಯ. ಟಿಪ್ಪು ಸುಲ್ತಾನ್ ತನ್ನ ಶತ್ರುಗಳನ್ನು ಸೋಲಿಸಲು ಬಾಹ್ಯಾಕಾಶ ತಂತ್ರಜ್ಞಾನ ಅಳವಡಿಸಿಕೊಂಡ ಮೊದಲ ರಾಜ ಎಂದು ಡಾ| ಕೆ.ಶಿವನ್ ಹೇಳಿದರು.
ಪೇಲೋಡ್, ರಾಕೆಟ್, ಗನ್ ಪೌಡರ್‌ನಂತಹ ಸಂಶೋಧನೆಗಳನ್ನು ಅಂದೇ ಅಳವಡಿಸಿಕೊಂಡಿದ್ದು ಅಚ್ಚರಿಯ ವಿಚಾರ. ಇದೇ ಮಾದರಿಯಲ್ಲಿ ನಾವಿನ್ಯತೆ ಮತ್ತು ಹೊಸತನದ ಅವಶ್ಯಕತೆಗಳ ಕುರಿತು ಅರಿತ ಡಾ|ವಿಕ್ರಮ್ ಸಾರಾಭಾಯ್ ಇಸ್ರೋ ಸ್ಥಾಪಿಸಿದರು. ಈ ಮೂಲಕ ಅನೇಕ ಕ್ರಾಂತಿಕಾರಿ ನಾವೀನ್ಯಯುತ ಬದಲಾವಣೆಗಳಿಗೆ ನಾಂದಿ ಹಾಡಿದರು. ಇಂದು ಭಾರತದ ವಿಜ್ಞಾನಿಗಳು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ತಂತ್ರಜ್ಞಾನಗಳೊಂದಿಗೆ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಆವಿಷ್ಕಾರ ನಡೆಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.