ಶ್ರೀಹರಿಕೋಟಾ: ಬಹುನಿರೀಕ್ಷಿತ ಚಂದ್ರಯಾನ-3 ನೌಕೆಯನ್ನು, ಉಡಾವಣ ವಾಹಕ ಜಿಯೋ ಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್- ಮಾರ್ಕ್-3ಗೆ ಜೋಡಿಸಲಾಗಿದೆ. ಶ್ರೀಹರಿಕೋಟದಲ್ಲಿ ಇರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಈ ಮಹತ್ವದ ಕೆಲಸ ನಡೆದಿದೆ. ಈ ಮೂಲಕ ಚಂದ್ರಯಾನ-3 ಉಡಾವಣೆಯಲ್ಲಿ ಒಂದು ಘಟ್ಟವನ್ನು ಇಸ್ರೋ ತಲುಪಿದಂತೆ ಆಗಿದೆ. ಇಸ್ರೋ ಇದುವರೆಗೆ ಬಳಕೆ ಮಾಡಿದ ಉಪಗ್ರಹ ಉಡಾವಣ ವಾಹಕ ನೌಕೆಗಳ ಪೈಕಿ ಜಿಎಸ್‌ಎಲ್‌ವಿ ಮಾರ್ಕ್-3 ಅತ್ಯಂತ ಭಾರದ ಉಡಾವಣ ನೌಕೆಯಾಗಿದೆ.
ಇದರ ಜತೆಗೆ ಜಿಎಸ್‌ಎಲ್‌ವಿ ಮಾರ್ಕ್-3ಕ್ಕೆ ಇಂಧನ ಪೂರೈ ಸುವ ಭಾಗವನ್ನೂ ಯಶಸ್ವಿ ಯಾಗಿ ಜೋಡಿಸಲಾಗಿದೆ. ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಜ್ಞಾವನ್ನು ನಭಕ್ಕೆ ಕೊಂಡೊಯ್ಯಲಾಗುತ್ತದೆಯಾದರೂ, ಆರ್ಬಿಟರ್ ಅನ್ನು ತೆಗೆದುಕೊಂಡು ಹೋಗಲಾಗುತ್ತಿಲ್ಲ. 2019ರ ಸೆಪ್ಟಂಬರ್‌ನಲ್ಲಿ ನಡೆದಿದ್ದ ಚಂದ್ರ ಯಾನ-2ರಲ್ಲಿ ಇದೇ ವಿಚಾರದಲ್ಲಿ ವೈಫಲ್ಯವನ್ನು ಕಂಡಿದ್ದ ಹಿನ್ನೆಲೆಯಲ್ಲಿ ಲ್ಯಾಂಡರ್‌ನಲ್ಲಿ ಹಲವು ಬದಲಾ ವಣೆಗಳನ್ನು ಇಸ್ರೋ ಕೈಗೊಂಡಿದೆ.
ಉದ್ದೇಶಿತ ಉಡಾವಣೆಯನ್ನು ಜು.13ರಂದು ನಡೆಸಲು ಉದ್ದೇಶಿ ಸಲಾಗಿದ್ದರೂ, ಪರಿಸ್ಥಿತಿಯನ್ನು ಅವಲಂಬಿಸಿಕೊಂಡು ದಿನಾಂಕ ಜು.19ರವರೆಗೆ ವಿಸ್ತರಣೆಯಾಗುವ ಸಾಧ್ಯತೆಗಳಿವೆ.
ನ್ಯೂಯಾರ್ಕ್ ಟೈಮ್ಸ್ ಮೆಚ್ಚುಗೆ
ನ್ಯೂಯಾರ್ಕ್: ಭಾರತವು ಬಾಹ್ಯಾಕಾಶ – ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಮಾಡುತ್ತಿದ್ದು, ಈ ಕ್ಷೇತ್ರದ ನವೋದ್ಯಮಗಳ ಕ್ಷಿಪ್ರ ಪ್ರಗತಿಯು ವಿಶ್ವರಾಷ್ಟ್ರಗಳ ನಡುವೆ ವಿಶಿಷ್ಟ ಛಾಪು ಮೂಡಿಸುತ್ತಿದೆ. ಅಲ್ಲದೇ ಈ ಅಸಾಧಾರಣ ಪ್ರಯತ್ನವು ಚೀನಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಪ್ರಬಲ ಪ್ರತಿಸ್ಪರ್ಧಿಯನ್ನಾಗಿಸುವ ಕಾಲ ಸನ್ನಿಹಿತವಾಗಿದೆ ಎಂದು ಖ್ಯಾತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. “ದಿ ಸಪ್ಸೆಸಿಂಗ್ ಸ್ಟ್ರೈವರ್ ಇನ್ ದಿ ವರ್ಲ್ಡ್ ಸ್ಪೇಸ್ ಬಿಸಿನೆಸ್” ಎನ್ನುವ ಶೀರ್ಷಿಕೆಯ ಲೇಖನದಲ್ಲಿ ಭಾರತ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳನ್ನು ಪತ್ರಿಕೆ ಉಲ್ಲೇಖೀಸಿದೆ. ಭಾರತವು ಕನಿಷ್ಠ 140 ನೋಂದಾಯಿತ ಸ್ಪೇಸ್ ಟೆಕ್ ನವೋದ್ಯಮಗಳಿಗೆ ನೆಲೆಯಾಗಿದೆ ಎಂದು ತಿಳಿಸಲಾಗಿದೆ.