Advertisement

ಚಂದ್ರಯಾನ-3: ಕೇವಲ ಯಾನವಲ್ಲ, ಆತ್ಮಾಭಿಮಾನ

12:31 AM Jul 15, 2023 | Team Udayavani |

ಅಟಲ್‌ ಬಿಹಾರಿ ವಾಜಪೇಯಿ ಭಾರತದ ಪ್ರಧಾನಿಯಾಗಿದ್ದಾಗ ಇಸ್ರೋದ ಚಂದ್ರಯಾನದ ಕನಸುಗಳು ಆರಂಭವಾದವು. ವಾಜ ಪೇಯಿಯೇ ಚಂದ್ರಯಾನವನ್ನು ಘೋಷಿಸಿದ್ದರು. ಆದರೆ ಚಂದ್ರಯಾನ-1 ಸಾಕಾರಗೊಂಡಿದ್ದು ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ. 2008ರಲ್ಲಿ ಹೊರಟ ಈ ನೌಕೆ, 2009ರಲ್ಲಿ ಚಂದ್ರನಲ್ಲಿ ನೀರಿದೆ ಎಂಬ ಅದ್ಭುತ ಸುಳಿವು ನೀಡಿ ಸಂಪರ್ಕ ಕಳೆದುಕೊಂಡಿತು. ಇದೂ ಕೂಡ ಅದ್ಭುತ ಯಶಸ್ಸು.

Advertisement

ಇದರ ಬೆನ್ನಲ್ಲೇ ಇಸ್ರೋ ತನ್ನ ಪ್ರಯತ್ನ ನಿಲ್ಲಿಸಲಿಲ್ಲ. 2019ರಲ್ಲಿ ಮತ್ತೆ ಚಂದ್ರ ಯಾನ-2ನೇ ಭಾಗ ಆರಂಭವಾಯಿತು. ಜು.22ಕ್ಕೆ ಹೊರಟ ವಿಕ್ರಮ್‌ ಲ್ಯಾಂಡರ್‌, ಪ್ರಜ್ಞಾನ್‌ ರೋವರ್‌ ಸೆ.6ಕ್ಕೆ ಚಂದ್ರನ ಮೇಲೆ ಇಳಿಯುವ ಹಂತದಲ್ಲಿ ಸಂಪರ್ಕ ಕಳೆದುಕೊಂಡಿತು. ಆಗ ಇಸ್ರೋ ಅಧ್ಯಕ್ಷರಾಗಿದ್ದವರು ಕೆ.ಶಿವನ್‌. ಈಗ ಪ್ರಧಾನಿ ನರೇಂದ್ರ ಮೋದಿ ಯ ವರ ಆಶಯ ಮತ್ತು ಎಸ್‌.ಸೋಮನಾಥ್‌ ನೇತೃತ್ವದಲ್ಲಿ ಇನ್ನೊಮ್ಮೆ ಚಂದ್ರಯಾನ ಆರಂಭವಾಗಿದೆ. ಹಿಂದೆ ಆದ ಯಾವುದೇ ತಪ್ಪಾಗದಂತೆ ನಿರಂತರ ಪರಿಶ್ರಮವಹಿಸಲಾಗಿದೆ. ಎಲ್‌ವಿಎಂ3-ಎಂ4 (ಹಿಂದಿನ ಜಿಎಸ್‌ಎಲ್‌ವಿ) ರಾಕೆಟ್‌ ಮೂಲಕ ಶುಕ್ರವಾರ ಚಂದ್ರನಲ್ಲಿಗೆ ನೌಕೆ ಹೊರಟಿದೆ. ಅಲ್ಲಿಗೆ ಉಡಾವಣೆ ಯಶಸ್ವಿಯಾಗಿದೆ. ಇಸ್ರೋ ವಿಜ್ಞಾನಿಗಳಿಗೆ ಭಾರೀ ಯಶಸ್ಸು ಲಭಿಸಿದೆ.

ನಿಜವಾದ ಸವಾಲು ಇನ್ನು ಮುಂದೆ ಇರುವುದು. ಆಗಸ್ಟ್‌ 23ಕ್ಕೆ ಚಂದ್ರನ ದಕ್ಷಿಣ ಭಾಗದಲ್ಲಿ ಈ ನೌಕೆ ಇಳಿಯಬೇಕೆನ್ನುವುದು ಇಸ್ರೋ ಲೆಕ್ಕಾಚಾರ. ಒಂದು ವೇಳೆ ಇದು ಸಾಧ್ಯವಾದರೆ ಇಂತಹದ್ದೊಂದು ಅದ್ಭುತ ಸಾಧನೆ ಮಾಡಿದ ವಿಶ್ವದ 4ನೇ ದೇಶ ಎಂಬ ಹೆಗ್ಗಳಿಕೆ ಭಾರತಕ್ಕೆ ದಕ್ಕಲಿದೆ. ಈ ಕೆಲಸದಲ್ಲಿ ಭಾರತೀಯ ವಿಜ್ಞಾನಿಗಳ ಪರಿಶ್ರಮ, ತಾಕತ್ತು ಏನೆಂದು ಜಗತ್ತಿಗೇ ಗೊತ್ತು. ಜಗತ್ತಿನ ಅತೀ ಪ್ರಬಲ ಬಾಹ್ಯಾಕಾಶ ಸಂಶೋಧನಾ ಸಾಮರ್ಥ್ಯ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದಾಗುವುದಕ್ಕೆ ಇಸ್ರೋದ್ದು ಅತೀ ಮಹತ್ವದ ಕೊಡುಗೆ. ಹಾಗಾಗಿ ಇಲ್ಲಿ ನೌಕೆ ಯಶಸ್ವಿಯಾಗಿ ಇಳಿಯಬೇಕು ಎಂದು ಇಡೀ ದೇಶಕ್ಕೆ ದೇಶವೇ ಪ್ರಾರ್ಥನೆ ಮಾಡುತ್ತಿದೆ.

ಹಿಂದಿನ ಬಾರಿ ಯಶಸ್ವಿಯಾಗಿ ಇಳಿಯದಿರಲು ಕಾರಣ ಸಾಫ್ಟ್ ವೇರ್‌ನಲ್ಲಿ ಇದ್ದ ದೋಷ ಎಂದು ಸ್ವತಃ ಸೋಮನಾಥ್‌ ಹೇಳಿದ್ದಾರೆ. ಈ ಬಾರಿ ಅದನ್ನು ಸರಿಪಡಿಸಲಾಗಿದೆ, ಮಾತ್ರವಲ್ಲ ಯಾವುದೇ ರೀತಿಯಲ್ಲೂ ವ್ಯತ್ಯಾಸವಾಗದಂತೆ ಮುಂಜಾಗ್ರತೆ ವಹಿಸಲಾಗಿದೆ. ಸಂಪೂರ್ಣ ಭಾರತೀಯ ವಿಜ್ಞಾನಿಗಳದ್ದೇ ಕೊಡುಗೆಯಲ್ಲಿ ಮೊದಲಹಂತ ಯಶಸ್ವಿಯಾಗಿದೆ. ಅರ್ಥಾತ್‌ ನೌಕೆ ಉಡಾವಣೆಗೊಂಡಿದೆ. ಚಂದ್ರನ ದಕ್ಷಿಣ ಭಾಗದಲ್ಲಿ ಇಳಿಯಲೂ ಯಶಸ್ವಿಯಾದರೆ ನೆರೆಯ ಚೀನಕ್ಕೆ, ಬಾಹ್ಯಾಕಾಶದ ಮೇಲೆ ಭಾರೀ ನಿಯಂತ್ರಣ ಸಾಧಿಸಿರುವ ಅಮೆರಿಕಕ್ಕೆ ಇದು ಪ್ರಬಲ ಪ್ರತಿಸ್ಪರ್ಧೆಯಾಗಲಿದೆ.

ಅದರಲ್ಲೂ ಚೀನಕ್ಕೆ ಮುಖಭಂಗವಾಗಲಿದೆ. ಭಾರತವನ್ನು ಸಾಧ್ಯವಾ ದಲ್ಲೆಲ್ಲ ಸೋಲಿಸುವ ಅದರ ಹುನ್ನಾರ ಇಲ್ಲಿ ನಡೆಯುವುದಿಲ್ಲವೆಂದು ಸಾಬೀತಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಾಹ್ಯಾಕಾಶ ಜಗತ್ತಿನಲ್ಲಿ ಭಾರತಕ್ಕೊಂದು ದೊಡ್ಡ ಮಾರುಕಟ್ಟೆ ತೆರೆದುಕೊಳ್ಳಲಿದೆ. ಭಾರತದ ಆರ್ಥಿಕತೆಗೆ ದೊಡ್ಡ ಶಕ್ತಿ ತುಂಬುವ ತಾಕತ್ತು ಈ ಚಂದ್ರಯಾನ-3ರ ಯಶಸ್ಸಿಗಿದೆ. ಅಂತಹದ್ದೊಂದು ವೈಜ್ಞಾನಿಕ, ವೈಚಾರಿಕ, ಆತ್ಮಾಭಿಮಾನದ ಯಶಸ್ಸು ಭಾರತಕ್ಕೆ ಸಿಗಲಿ ಎನ್ನುವುದು ಎಲ್ಲರ ಪ್ರಾರ್ಥನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next