ಬೆಂಗಳೂರು: ಚಂದ್ರಯಾನ 3 ಲ್ಯಾಂಡರ್ ಮಾಡ್ಯೂಲ್ ವಿಕ್ರಮ್ ಚಂದ್ರನ ಮೇಲೆ ಸುರಕ್ಷಿತವಾಗಿ ಮತ್ತು ಮೃದುವಾಗಿ ಇಳಿದ ಸಂಭ್ರಮದಲ್ಲಿ ‘ಭಾರತವು ಚಂದ್ರನ ಮೇಲಿದೆ’ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.
“ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು.ನಮ್ಮ ವೈಫಲ್ಯದಿಂದ ನಾವು ಬಹಳಷ್ಟು ಕಲಿತಿದ್ದೇವೆ ಮತ್ತು ಇಂದು ನಾವು ಯಶಸ್ವಿಯಾಗಿದ್ದೇವೆ. ಚಂದ್ರಯಾನ-3 ಗಾಗಿ ನಾವು ಇಂದಿನಿಂದ ಮುಂದಿನ 14 ದಿನಗಳನ್ನು ಎದುರು ನೋಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ನಿಂದ ಚಂದ್ರಯಾನ-3 ಯಶಸ್ಸಿನ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಎಸ್. ಸೋಮನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದರು.ನಿಮ್ಮ ಹೆಸರೇ ಸೋಮನಾಥ, ಅದರ ಅರ್ಥ ಚಂದ್ರ ಎಂದರು.
ಚಂದ್ರನ ದಕ್ಷಿಣ ಧ್ರುವದ ಬಳಿ ಹೋದ ಮೊದಲ ದೇಶ ಭಾರತ ಎಂದು ಚಂದ್ರಯಾನ 3 ಮಿಷನ್‌ನ ಯೋಜನಾ ನಿರ್ದೇಶಕ ಪಿ. ವೀರಮುತ್ತುವೆಲ್ ಸಂಭ್ರಮ ವ್ಯಕ್ತಪಡಿಸಿದರು.
“ನನಗೆ ಮತ್ತು ನನ್ನ ತಂಡಕ್ಕೆ ಇದು ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ಕಳೆದ ಹಲವು ವರ್ಷಗಳಿಂದ ನಾವು ಶ್ರಮಿಸಿದ್ದೇವೆ. ನಾವು ನಮ್ಮ ಗುರಿಯನ್ನು ಸಾಧಿಸಿದ್ದೇವೆ” ಎಂದು ಚಂದ್ರಯಾನ 3 ಮಿಷನ್‌ನ ಸಹಾಯಕ ಯೋಜನಾ ನಿರ್ದೇಶಕಿ ಕಲ್ಪನಾ ಹೇಳಿದ್ದಾರೆ.
ಬೆಂಗಳೂರಿನ ಇಸ್ರೋ ಮಿಷನ್ ಕಂಟ್ರೋಲ್ ಸೆಂಟರ್ ನಲ್ಲಿ ಚಂದ್ರಯಾನ-3 ಮಿಷನ್ ಚಂದ್ರನ ಮೇಲ್ಮೈಗೆ ಇಳಿಯುತ್ತಿದ್ದಂತೆ ಸಂಭ್ರಮಾಚರಣೆ ಆರಂಭವಾಯಿತು. ‘ವಂದೇ ಮಾತರಂ’ ಘೋಷಣೆಗಳಿಂದ ತುಂಬಿತ್ತು. ಎಲ್ಲರೂ ಗೆಲುವಿನ ಕೇಕೆ ಹಾಕಿದರು.