Advertisement

CM ಹುದ್ದೆ ಬಿಟ್ಟು ಕೊಡಲಿ; ಸ್ವಾಮೀಜಿ ಹೇಳಿಕೆ ಬಳಿಕ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ

06:00 PM Jun 27, 2024 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಡಿಸಿಎಂ ಹುದ್ದೆಗಳು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತಾಗಿ ಬಣ ರಾಜಕಾರಣ ನಡೆಯುತ್ತಿರುವ ವೇಳೆಯಲ್ಲೇ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ಚಂದ್ರ ಶೇಖರ ಸ್ವಾಮೀಜಿ ಅವರು ಸರಕಾರಿ ಕಾರ್ಯಕ್ರಮದ ವೇದಿಕೆಯ ಮೇಲೆ ನೀಡಿದ ಹೇಳಿಕೆ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಒಂದು ರೀತಿಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

Advertisement

ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಮಾತನಾಡಿದ ಚಂದ್ರ ಶೇಖರ ಸ್ವಾಮೀಜಿ ” ಮುಖ್ಯಮಂತ್ರಿ ಹುದ್ದೆ ಅನುಭವಿಸಿದ್ದೀರಿ. ಇನ್ನು ಉಳಿದ ಅವಧಿಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಿ. ಸಿಎಂ ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಹೇಳಿಕೆ ನೀಡಿದ್ದಾರೆ.

ಸ್ವಾಮೀಜಿ ಹೇಳಿಕೆ ನೀಡುವ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವೇದಿಕೆಯಲ್ಲಿದ್ದರು. ಸಭಾಸದರಾಗಿದ್ದ ಕೆಲವರು ಚಪ್ಪಾಳೆ ಮತ್ತು ಸಿಳ್ಳೆ ಹಾಕಿದ್ದಾರೆ. ಸ್ವಾಮೀಜಿ ನೀಡಿದ ಹೇಳಿಕೆ ಎಲ್ಲರಿಗೂ ಒಂದು ರೀತಿಯಲ್ಲಿ ಶಾಕಿಂಗ್ ಆಗಿ ಪರಿಣಮಿಸಿತು.

ವೇದಿಕೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಸ್ಪಟಿಕಪುರಿ ಶ್ರೀ ನಂಜಾವದೂತ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯೂ ಇತ್ತು.

ಹೈಕಮಾಂಡ್ ತೀರ್ಮಾನ
ಸ್ವಾಮೀಜಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ‘ಕಾಂಗ್ರೆಸ್ ಪಕ್ಷ ಹೈಕಮಾಂಡ್ ಪಕ್ಷ. ಯಾವುದೇ ತೀರ್ಮಾನವಿದ್ದರೂ ಹೈಕಮಾಂಡ್ ಕೈಗೊಳ್ಳುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಡಿಸಿಎಂ ಪ್ರತಿಕ್ರಿಯೆ
ಸ್ವಾಮೀಜಿ ಹೇಳಿಕೆ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ‘ಸ್ವಾಮೀಜಿ ಅವರ ಅಭಿಪ್ರಾಯ ಹೇಳಿದ್ದಾರೆ. ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಹೇಳಿದ್ದಾರೆ.

ಬದಲಾವಣೆ ಆಗುವುದಿಲ್ಲ
ಸ್ವಾಮೀಜಿ ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಮಾಡಲು ಆಗುವುದಿಲ್ಲ. ಹೈಕಮಾಂಡ್ ಹೇಳಿದರೆ ಮಾತ್ರ ಬದಲಾವಣೆ ಮಾಡುವುದು. ಸಿದ್ದರಾಮಯ್ಯ ಚೆನ್ನಾಗಿ ಆಡಳಿತ ನಡೆಸುತ್ತಿದ್ದು, ಈ ವಿಚಾರದ ಬಗ್ಗೆ ಹೈಕಮಾಂಡ್ ಉತ್ತರ ನೀಡುತ್ತದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀಗಳು ಸ್ಥಾನ ಬಿಟ್ಟು ಕೊಟ್ಟರೆ ನಾನು ಸ್ವೀಕರಿಸುತ್ತೇನೆ!
ಸಚಿವ ಕೆ.ಎನ್.ರಾಜಣ್ಣ ಅವರು ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿ ‘ ಸ್ವಾಮೀಜಿ ಪೀಠ ಬಿಟ್ಟು ಕೊಡುತ್ತಾರಾ? ಬಿಟ್ಟು ಕೊಟ್ಟರೆ ಕಾವಿ ಧರಿಸಿ ನಾನೇ ಸ್ವೀಕರಿಸುತ್ತೇನೆ . ಶ್ರೀಗಳು ಸದುದ್ದೇಶದಿಂದ ಹೇಳಿಕೆ ನೀಡಿದ್ದಾರೋ, ದುರುದ್ದೇಶದಿಂದ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಡಿಕೆಶಿ ಅವರೇ ಹೇಳಿಸಿದ್ದಾ?
ವಿಪಕ್ಷ ನಾಯಕ ಆರ್.ಅಶೋಕ್ ಅವರು ಸ್ವಾಮೀಜಿ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ’ ಹೇಳಿಕೆಯನ್ನು ಸ್ವಪ್ರೇರಣೆಯಿಂದ ಹೇಳಿದ್ದಾರೋ? ಡಿ.ಕೆ.ಶಿವಕುಮಾರ್ ಅವರೇ ಹೇಳಿಸಿದ್ದಾರೋ ಗೊತ್ತಿಲ್ಲ. ಸರಕಾರಿ ಕಾರ್ಯಕ್ರಮದಲ್ಲಿ ಈ ರೀತಿ ಆಗಿರಲಿಲ್ಲ. ಇಷ್ಟು ಅವಮಾನ ಆಗಿ ಸಿಎಂ ಸಿದ್ದರಾಮಯ್ಯ ಹುದ್ದೆಯಲ್ಲಿ ಮುಂದುವರಿಯಬಾರದು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next