Advertisement

ಒಂದು ನಾಟಕದ ಕುರಿತು…

06:00 AM Oct 28, 2018 | |

ಚಂದ್ರಶೇಖರ ಕಂಬಾರರ ಹೊಸ ನಾಟಕ ಮಹಮೂದ್‌ ಗಾವಾನ್‌ ಇಂದು ಬಿಡುಗಡೆಯಾಗುತ್ತಿದೆ. ಇದರ ಮುನ್ನುಡಿಯ ಆಯ್ದ ಭಾಗವಿದು… 

Advertisement

ಇತ್ತೀಚಿನ ಸಾಹಿತ್ಯಚರ್ಚೆಗಳಲ್ಲಿ ಮತ್ತೆ ಮತ್ತೆ ಎದುರಾಗುವ ಪದ ಗ್ಲೋಬಲ್‌. ಒಮ್ಮೊಮ್ಮೆ ಈ ಪದ ಪಾಸಿಟಿವ್‌ ಅರ್ಥದಲ್ಲಿ, ಸಾರ್ವತ್ರಿಕ ಒಳಿತನ್ನು ಸೂಚಿಸುವಂತಹದ್ದು ಎನ್ನುವ ತರಹ ಬಳಕೆಯಾಗುತ್ತದೆ. ಆದರೆ, ಸ್ವಲ್ಪ ಸೂಕ್ಷ್ಮವಾಗಿ ನೋಡಿದಾಗ, ಇದರ ಹಲವಾರು ಅರ್ಥಗಳು- ಅಂತರಾರ್ಥಗಳು ಗೋಚರವಾಗುತ್ತ ಹೋಗುತ್ತವೆ. ಹೀಗೆ ಪಾಸಿಟಿವ್‌ ಎನ್ನುವ ಆಯಾಮದಿಂದ ಹಿಡಿದು ಹೆದರಿಕೆ ಹುಟ್ಟಿಸುವ, ಎಚ್ಚರಿಕೆಯ ಗಂಟೆ ಬಾರಿಸುವ ರೀತಿಯಲ್ಲೂ ಬಳಸಲಾಗುತ್ತಿದೆ ಈ ಪದವನ್ನು (ಹೆಚ್ಚಾಗಿ, ಜಾಗತೀಕರಣದ ರಾಜಕೀಯ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಮಾತನಾಡುವಾಗ ಈ ಹೆದರಿಕೆ ಎದ್ದು ಕಾಣುತ್ತದೆ). ಈ ಗ್ಲೋಬಲ್‌ ಎನ್ನುವ ಪದದ ಹಿನ್ನೆಲೆಯಲ್ಲಿರುವ ತಾತ್ವಿಕ ನಿಲುವುಗಳು ಬದಲಾಗುತ್ತ ಹೋಗುವುದನ್ನು ನೋಡುವುದು ಕುತೂಹಲದ ಸಂಗತಿ.

ಈ ಗ್ಲೋಬಲ್‌ ಪದದ ಪ್ರಸಕ್ತಿ ನನ್ನ ಮಾತಿನಲ್ಲಿ ಮೂಡಿಬಂದಿದ್ದು ಚಂದ್ರಶೇಖರ ಕಂಬಾರರ ಹೊಸ ನಾಟಕ ಮಹಮೂದ್‌ ಗಾವಾನ್‌ನನ್ನು ಓದಿ, ಅದರ ಬಗ್ಗೆ ನನ್ನ ಅನಿಸಿಕೆಗಳನ್ನು ಬರೆಯಲು ಹೊರಟಾಗ. ಇಲ್ಲಿ ಸ್ವಲ್ಪನನ್ನ ಆತ್ಮಕಥೆಯನ್ನೂ ಹೇಳಬೇಕೆನ್ನಿಸುತ್ತದೆ. ಅರವತ್ತರ ದಶಕದಲ್ಲಿ ಕಂಬಾರರ ಬರಹದ ಪರಿಚಯ ನನಗಾಗಿದ್ದು, ನವ್ಯದ ರುಚಿಗೆ ಒಗ್ಗಿದ್ದ ನನ್ನ ನಾಲಿಗೆಗೆ ಅವರ ಬರಹ ಬಹಳ ಹೊಸತೆನ್ನಿಸುವಂತಿತ್ತು. ಬಹಳ ಬೇರೆಯಾಗಿ ಕಂಡಿದ್ದೂ ಸಹಜ. ಇದು ಅವರ ಹೇಳತೀನಿ ಕೇಳಾ ಕಾಲಘಟ್ಟ. ಆದರೆ, ಅವರ ಜೋಕುಮಾರಸ್ವಾಮಿ ಹೊರಬರುವ ಹೊತ್ತಿಗೆ ಕಂಬಾರರ ಸಾಹಿತ್ಯಕ ಉದ್ದೇಶಗಳು, ಅವರ ಬರಹದ ಕೌತುಕ ಉಂಟುಮಾಡುವಂತಹ ಹರಹು- ಇವೆಲ್ಲ ತಿಳಿಯತೊಡಗಿತ್ತು. ಈ ನಾಟಕ ಒಂದು ರೀತಿಯ ಟಚssಜಿಟn ಉತ್ಕಟತೆಯ (ಲೈಂಗಿಕ, ದೈಹಿಕ, ಹಾಗೂ ರಾಜಕೀಯ ಸ್ತರಗಳಲ್ಲಿ ಕಾಣುವಂತಹದ್ದು) ಸಂದೇಶವನ್ನು ಸಾರುವಂತೆ ತೋರುತ್ತಿತ್ತು. ಈ ಉತ್ಕಟತೆಯನ್ನು ಯಾವುದೇ ಕಾನೂನಿನ ಸಣ್ಣ ಚೌಕಟ್ಟು ಅಥವಾ ಸಾಮಾನ್ಯ ಸಾಮಾಜಿಕ ನೈತಿಕ ನಿಲುವುಗಳು, ಇಂತಹ ಮಿತಿಗಳಲ್ಲಿ ಹಿಡಿದಿಡುವುದು ಅಸಾಧ್ಯ ಎಂದು ಹೇಳುತ್ತಿದ್ದಂತೆ ಕಾಣುತ್ತಿತ್ತು. ಈ ಉತ್ಕಟತೆ ಒಂದು ಪ್ರಖರವಾದ ಭಾವವಾಗಿ ಕಂಬಾರರ ಎಲ್ಲಾ ಬರಹಗಳಲ್ಲೂ ಹೊಮ್ಮಿಬರುತ್ತಿತ್ತು. ಈ ಸಮಯದಲ್ಲಿ ಆ ಬರಹ ನನಗೆ ಲಾರೆನ್ಸ್‌ನು° ನೆನಪಿಗೆ ತಂದಿದ್ದು ಸಹಜ. ನಾನಾಗಲೇ ಕಂಬಾರರ ಸಾಹಿತ್ಯ ಮತ್ತು ಅದರ ಬೆಳವಣಿಗೆಯ ಜಾಡನ್ನು ಹಿಂಬಾಲಿಸುತ್ತ ಹೊರಟಿದ್ದೆ. ಅದರಲ್ಲೂ ಹೇಗೆ ಸೆಕ್ಸ್‌ನಂತಹ ತೀಕ್ಷ್ಣವಾದ ವಸ್ತು ಅವರ ಬರಹದ ಕೇಂದ್ರವಾಗಿದ್ದು, ಹಾಗೇ ಅವರು ಹೇಗೆ ಅದರ ಹಿಡಿತದಿಂದ ಹೊರಬರಲು ಪ್ರಯತ್ನಿಸುತ್ತಿದ್ದರು ಎನ್ನುವುದು- ಈ ಎರಡೂ ವಿಷಯಗಳು ಗೋಚರವಾಗ‌ಹತ್ತಿದ್ದವು. ಕಂಬಾರರು ನಂತರ ಬರೆದ ಕೃತಿಗಳಲ್ಲಿ ಈ ಪ್ರಬಲ ಶಕ್ತಿ ಸೆಕ್ಸ್‌ನ ಮಿತಿಯನ್ನು ದಾಟಿ, ಬೇರೆ ಬೇರೆ ಸೃಜನಾತ್ಮಕ ಅನುಭವಗಳು ಹಾಗೂ ಆಯಾಮಗಳ ವ್ಯಾಪ್ತಿಯನ್ನು ಒಳಗೊಳ್ಳುವ ಪ್ರಯತ್ನ ಕಾಣತೊಡಗುತ್ತದೆ (ಆದರೆ, ಅವರ ಹೊಸ ನಾಟಕ ಮಹಮೂದ್‌ ಗಾವಾನ್‌ನಲ್ಲೂ ಈ ಲೈಂಗಿಕ ಉತ್ಕಟತೆಯ ನವಿರಾದ ಎಸಳು ಕಾಣಸಿಗುತ್ತದೆ). ಕಂಬಾರರ ಒಟ್ಟಾರೆ ಬರಹವನ್ನು ನೋಡಿದಾಗ ಎಲ್ಲೆಡೆಯಲ್ಲೂ ಕಾಣುವ ಈ ಸೆಲೆ, ಅವರ ಇಡೀ ಸಾಹಿತ್ಯಸೃಷ್ಟಿಯ ನೆಲೆ ಎನ್ನುವುದು ಖಚಿತವಾಗುತ್ತದೆ.

ಉತ್ತರಕರ್ನಾಟಕದ ಜಾನಪದಕ್ಕೆ ಹತ್ತಿರವಾಗಿದ್ದುಕೊಂಡೇ, ನಮ್ಮ ಕಾಲದ ರಾಜಕೀಯ ಹಾಗೂ ಹೊಸಬದಲಾವಣೆಗಳ ತುಡಿತಗಳಿಗೆ ಸ್ಪಂದಿಸುವ ಬರಹಗಾರ, ಕಂಬಾರ. ಋಷ್ಯಶೃಂಗ, ಜೋಕುಮಾರಸ್ವಾಮಿಯಿಂದ ಹಿಡಿದು ಇತ್ತೀಚಿನ ಶಿಖರಸೂರ್ಯ, ಶಿವನ ಡಂಗುರ ಅಥವಾ ಮಹಮೂದ್‌ ಗಾವಾನ್‌ನಲ್ಲೂ ಕೂಡ ಈ ಜಾಗತಿಕ ಸಂದರ್ಭದ ಅರಿವು ಕಂಡುಬರುತ್ತದೆ. ಹೀಗಿದ್ದಲ್ಲಿ, ಈ ಗ್ಲೋಬಲ್‌ ಎನ್ನುವ ಪದ ಕಂಬಾರರ ಸಾಹಿತ್ಯಕ್ಕೆ ಹೇಗೆ ಪ್ರಸಕ್ತವಾಗುತ್ತದೆ? ಕಂಬಾರರು ಯಾವ ರೀತಿಯಲ್ಲಿ ಗ್ಲೋಬಲ್‌ ಬರಹಗಾರರು?- ಈ ಪ್ರಶ್ನೆಗಳು ಬಹಳ ಮುಖ್ಯ ಎಂದು ನನಗನ್ನಿಸುತ್ತದೆ. ಅವರ ಇತ್ತೀಚಿನ ಕಾದಂಬರಿ ಶಿವನ ಡಂಗುರದಲ್ಲಂತೂ ನವ-ವಸಾಹತುಶಾಹಿ ಹಾಗೂ ಜಾಗತೀಕರಣದ ಸಂದರ್ಭಗಳು, ಮತ್ತವುಗಳ ಟೀಕೆ ಎದ್ದು ಕಾಣುತ್ತವೆ. ಸ್ವಲ್ಪ$ಭಿನ್ನವಾಗಿ, ಮಹಮೂದ್‌ ಗಾವಾನ್‌ನಲ್ಲೂ ಈ ಅಂತರಾಷ್ಟ್ರೀಯ ರಾಜಕೀಯ ಹಾಗೂ ಸಾಂಸ್ಕೃತಿಕ ಘರ್ಷಣೆ-ಸಮ್ಮಿಲನಗಳ ಅಂಶಗಳನ್ನು ಗುರುತಿಸಬಹುದೇ? ಅದೂ ಉತ್ತರ ಕರ್ನಾಟಕದ ಬಹಳ ಹಿಂದಿನ ಬಹಮನಿ ಸುಲ್ತಾನರ ಆಡಳಿತಕಾಲದ ಇತಿಹಾಸ ಘಟ್ಟವೊಂದರಲ್ಲಿ? ಹೌದು, ಈ ನಾಟಕದಲ್ಲಿ, ಕಂಬಾರರು ಇಂತಹ ಅಂತರಾಷ್ಟ್ರೀಯ ಅಥವಾ ಗ್ಲೋಬಲ್‌ ಅಂಶಗಳನ್ನು ಬಹಳ ಸೂಕ್ಷ್ಮವಾಗಿ ಹೊರತರುತ್ತಾರೆ. 

ಗಾವಾನ್‌ ನಾಟಕದಲ್ಲಿ ಕಂಬಾರರು ಬಳಸುವ ಭಾಷೆ ಉತ್ತರ ಕರ್ನಾಟಕದ ಜಾನಪದ ಅಥವಾ ಆಡುಭಾಷೆ ಅಲ್ಲವೆನ್ನುವುದು ಕುತೂಹಲಕರ. ಅವರ ಹೇಳತೀನಿ ಕೇಳಾ ಅಥವಾ ಜೋಕುಮಾರಸ್ವಾಮಿಯಲ್ಲಿನ ಭಾಷೆಗಿಂತ ಬಹಳ ಭಿನ್ನವಾಗಿದೆ. ಒಂದು ರೀತಿಯಲ್ಲಿ nಛಿuಠಿrಚl ಅನ್ನಬಹುದಾದ ಭಾಷೆ. ಇಲ್ಲಿ ಜಾನಪದ ನುಡಿಯನ್ನು ಬೇಕೆಂದೇ ಬಳಸಲಿಲ್ಲ ಎನ್ನಿಸುತ್ತದೆ. ಈ ನಾಟಕದ ಕೇಂದ್ರವಾದ ಗಾವಾನ್‌ನನ್ನೇ ನೋಡಿ- ಆತ ಕನ್ನಡದವನಲ್ಲ, ವಿದೇಶೀಯ. ಅವನು ಹದಿನೈದನೆಯ ಶತಮಾನದ ಬಹಮನಿ ರಾಜ್ಯದ ರಾಜಕೀಯ ಪ್ರಪಂಚವನ್ನು ಪ್ರವೇಶಿಸುತ್ತಾನೆ. ಈ ಎಲ್ಲ ವಿಷಯಗಳನ್ನು ನೋಡಿದರೆ ಕಂಬಾರರು ಬೇರೊಂದು ಹೊಸ ಸನ್ನಿವೇಶ, ಹೊಸ ಆಯಾಮವನ್ನು ಇಲ್ಲಿ ತೆರೆದಿಡುತ್ತಿದ್ದಾರೆ ಎನ್ನಿಸುತ್ತದೆ. ಇಲ್ಲಿನ ಸನ್ನಿವೇಶ ಬೇರೆ ರೀತಿಯ ಐತಿಹಾಸಿಕ ಸಾಧ್ಯತೆಗಳನ್ನು ಸೂಚಿಸುತ್ತದೆ. ಅದು ಕೇವಲ ಸ್ಥಳೀಯ ಎನ್ನಬಹುದಾದ ಅಥವಾ ಕನ್ನಡದ ಸನ್ನಿವೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಕಂಬಾರರು ಕನ್ನಡ, ಕರ್ನಾಟಕವನ್ನು ಮೀರಿದ ಮತ್ತಾವುದೋ ವಸ್ತುವನ್ನು ತಮ್ಮ ನಾಟಕದೊಳಗೆ ತರುತ್ತಿದ್ದಾರೆ. ವಿಶೇಷವೆೆಂದರೆ, ತಮ್ಮದೇ ಆದ ಜಾನಪದ ಭಾಷೆಯನ್ನು ಬಿಟ್ಟು ಹೊಸತರಹದ ಭಾಷೆ ಹಾಗೂ ಹೊಸರೀತಿಯ ಸನ್ನಿವೇಶಗಳನ್ನು ಬಳಸಲು ಹೊರಟಿದ್ದಾರೆ. ಜೋಕುಮಾರಸ್ವಾಮಿಯಲ್ಲಿರುವಂತಹ ಭಾಷೆ ಸೆಕ್ಸ್‌ನ ಉತ್ಕಟತೆಯಂತಹ ವಸ್ತುವನ್ನು ಮೀರಿ ಹೊಸ ನಾಟಕವಸ್ತು ಮತ್ತು ಹೊಸ ಸನ್ನಿವೇಶಗಳಿಗೆ ತಕ್ಕಂತಹ ಭಾಷಾ ಪ್ರಯೋಗವನ್ನು ಮಾಡುತ್ತಿದ್ದಾರೆ. ಲೋಕಲ್‌ ಅಥವಾ ಸ್ಥಳೀಯತೆ ಇಲ್ಲದಿರುವುದೇ, ಈ ನಾಟಕ ಹೆಚ್ಚು ಗ್ಲೋಬಲ್‌ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.

Advertisement

ರಾಜೀವ ತಾರಾನಾಥ್‌

Advertisement

Udayavani is now on Telegram. Click here to join our channel and stay updated with the latest news.

Next