Advertisement

ಕನ್ನಡಕ್ಕೆ ದೊಡ್ಡ ಸೇವೆ ನೀಡಿದ ಸೀಮೆ ಧಾರವಾಡ

06:00 AM Sep 30, 2018 | |

84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರರನ್ನು ಆಯ್ಕೆ ಮಾಡಲಾಗಿದೆ. ಕಂಬಾರರ ತವರೂರಿನಲ್ಲಿಯೇ ಸಮ್ಮೇಳನಾಧ್ಯಕ್ಷರಾಗಿ ಸಾಹಿತ್ಯ ರಥವೇರುತ್ತಿರುವುದು ವಿಶೇಷ. ಈ ಹೊತ್ತಿನಲ್ಲಿ ಉದಯವಾಣಿಯೊಂದಿಗೆ ಹಂಚಿಕೊಂಡ ಅವರ ಮಾತುಗಳು ನಿಮ್ಮ ಮುಂದೆ.

Advertisement

ಬೆಂಗಳೂರು: “ಕೆಲವರು ಮಾತ್ರಕನ್ನಡ ನಾಡು-ನುಡಿ ಬೆಳವಣಿಗೆ ಬಗ್ಗೆ ಚಿಂತನೆ ನಡೆಸಿದರೆ ಏನೇನೂ ಪ್ರಯೋಜನ ಆಗುವುದಿಲ್ಲ. ನಾಡು -ನುಡಿ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಸೇರಿ ಚಿಂತನೆ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರನ್ನೂ ಜತೆಗೆ ಕೊಂಡೊಯ್ಯುವ ಕೆಲಸ ನಾನು ಮಾಡಲಿದ್ದೇನೆ’.

ಇದು, ಧಾರವಾಡದಲ್ಲಿ ಡಿ. 7ರಿಂದ 9ರ ವರೆಗೆ ನಡೆಯಲಿರುವ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರ ಮಾತುಗಳು. ಸಮ್ಮೇಳನ ಬಗ್ಗೆ ಮಾತನಾಡಿದ ಅವರು,ಧಾರವಾಡ ಕನ್ನಡಕ್ಕೆ ದೊಡ್ಡ ಸೇವೆ ನೀಡಿದ ಸೀಮೆ.ಅಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.

ನಿಮ್ಮೂರಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೀವು ಸಾರಥ್ಯ ವಹಿಸಿದ್ದೀರಿ ನಿಮಗೆ ಏನನಿಸುತ್ತದೆ?
            ನನಗೆ ಸಂತೋಷ ಜತೆಗೆ ಮನಸ್ಸಿನಲ್ಲಿ ಒಂದಿಷ್ಟು,ದುಃಖ ಕೂಡ ಇದೆ. ಗೆಳೆಯರಾದ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ, ಗಿರಡ್ಡಿ ಗೋವಿಂದರಾಜ ಈ ಸಂದರ್ಭದಲ್ಲಿ ನನಗೆ ನೆನಪಾಗುತ್ತಾರೆ. ಅವರು ಇದ್ದಿದ್ದರೆ ತುಂಬಾ ಖುಷಿ ಪಡ್ತಾ ಇದ್ದರು. ಅವ್ರು ಇಲ್ಲ ಅನ್ನೋದು ಮನಸ್ಸಿಗೆ  ತುಂಬಾ ನೋವುಂಟು ಮಾಡಿದೆ. ನಾನು, ಚಂದ್ರಶೇಖರ ಪಾಟೀಲ , ಸಿದ್ಧಲಿಂಗ ಪಟ್ಟಣ ಶೆಟ್ಟಿ ಸೇರಿದಂತೆ ನಮ್ಮದೊಂದು ದೊಡ್ಡ ಗೆಳೆಯರ ಬಳಗವೇ ಧಾರವಾಡದಲ್ಲಿತ್ತು. ಇದರಲ್ಲಿ ಕೆಲವರು ನಮ್ಮನ್ನು ಅಗಲಿದ್ದಾರೆ. ಕೆಲವರು ಇದ್ದಾರೆ. ಆದ್ರೆ, ಕಲಬುರ್ಗಿ ಮತ್ತು ಗಿರಡ್ಡಿ ತುಂಬಾ ನೆನಪಾಗುತ್ತಾರೆ.

ಸಾಹಿತ್ಯ ಸಮ್ಮೇಳನದ ನಿರ್ಣಗಳು ಜಾರಿಯಾಗದೇ ಬರೀ ನಿರ್ಣಯಗಳಾಗಿಯೇ ಉಳಿಯುತ್ತವೆ ಎಂಬ ಆರೋಪ ಇದೆಯಲ್ಲಾ ?
           ಕೆಲವು ನಿರ್ಣಯಗಳನ್ನು ಸರ್ಕಾರ ಜಾರಿಗೆ ತಂದಿದೆ ಆದರೂ,ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಸರ್ಕಾರ ಜಾರಿಗೊಳಿಸುವ ಸಂಬಂಧ ಪ್ರಯತ್ನ ಮಾಡಲಾಗುವುದು. ನಮ್ಮ ನಡುವೆ ಹಲವು ಮಂದಿ ಹಿರಿಯರಿದ್ದಾರೆ. ಅವರನ್ನೆಲ್ಲ ಕೂಡಿಕೊಂಡು, ಸಾಹಿತ್ಯ ಸಮ್ಮೇಳನದ ನಿರ್ಣಯಗಳ ಜಾರಿ ಬಗ್ಗೆ ಯಾವ ರೀತಿಯ ಕ್ರಮಕೈಗೊಳ್ಳಬೇಕು ಎಂಬುವುದರ ಕುರಿತು ಗಮನಹರಿಸಲಾಗುವುದು. ಸರ್ಕಾರದ ಮಟ್ಟದಲ್ಲೂ ಮಾತುಕತೆ ನಡೆಸಲಾಗುವುದು.

Advertisement

ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳಂತಾಗುತ್ತವೆ ಎಂಬ ಮಾತಿದೆಯಲ್ಲಾ ?
          ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳಾದರೂ ತಪ್ಪಿಲ್ಲ. ಅಕ್ಷರ ಲೋಕದ ಈ ಜಾತ್ರೆ  ನಿರಂತರವಾಗಿ ಹೀಗೆ ನಡೆಯುತ್ತಲೇ ಇರಬೇಕು. ಸಾಹಿತ್ಯ ಸಮ್ಮೇಳನಗಳು ಜಾತ್ರೆ ರೀತಿಯಲ್ಲಿ ನಡೆಯುವುದರಿಂದ ಕನ್ನಡ ಪುಸ್ತಕಗಳು ಮಾರಾಟವಾಗುತ್ತವೆ, ಪುಸ್ತಕಗಳ ಬಗ್ಗೆ ಅನೇಕ ಸಾಹಿತಿಗಳು ಮಾತನಾಡುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ಕನ್ನಡಿಗರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತದೆ.ಹೀಗಾಗಿ ಸಾಹಿತ್ಯ ಜಾತ್ರೆಗಳು ನಡೀತಿರಬೇಕು.

ಕನ್ನಡ ಉಳಿಯಬೇಕು ಎಂಬ ಹೋರಾಟದ ನಡುವೆಯೇ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿದೆಯಲ್ಲಾ?
          ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಒಳ್ಳೆಯ ಬೆಳವಣಿಗಯಲ್ಲ. ಸರ್ಕಾರ ಯಾವುದೇ ಕಾರಣಕ್ಕೂ ಈ ಶಾಲೆಗಳನ್ನು ಮುಚ್ಚಲು ಮುಂದಾಗಬಾರದು. ಇದನ್ನು ನಾನು ವಿರೋಧಿಸುತ್ತೇನೆ. ಕನ್ನಡ ಶಾಲೆಗಳನ್ನು ಮುಚ್ಚುವ ಬದಲು ಸರ್ಕಾರ ಅವುಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕು ಎಂದು ಸಲಹೆ ನೀಡುತ್ತೇನೆ.

ಇಂದಿನ ಯುವ ಸಾಹಿತಿಗಳಿಗೆ ನಿಮ್ಮ ಕಿವಿಮಾತು ಏನು ?
          ಇತ್ತೀಚಿನ ದಿನಗಳಲ್ಲಿ ಹಲವು ಸಂಖ್ಯೆಯಲ್ಲಿ ಯುವ ಸಾಹಿತಿಗಳು ಅಕ್ಷರ ಲೋಕಕ್ಕೆ ಪರಿಚಯವಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆೆ. ಯುವ ಸಾಹಿತಿಗಳು ಹೆಚ್ಚೆಚ್ಚು ಸಾಹಿತ್ಯ ರಚಿಸಬೇಕು. ಆದರೆ, ಯಾವುದೇ ಕಾರಣಕ್ಕೂ ಉತ್ಸಾಹ ಕಳೆದುಕೊಳ್ಳಬಾರದು. ಸಾಧ್ಯವದಷ್ಟು ಮಟ್ಟಿಗೆ ಮೊಬೈಲ್‌ ಗೀಳನ್ನು ಬಿಟ್ಟು ಜಗತ್ತಿನ ಆಗು -ಹೋಗುಗಳತ್ತ ಚಿಂತನೆ ಹರಿಸಬೇಕು.

ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ  ಈ ಹೊತ್ತಿನಲ್ಲಿ ಯಾರನ್ನು ನೆನೆಸಿಕೊಳ್ಳಲು ಇಷ್ಟಪಡುತ್ತೀರಿ?
          ನಮ್ಮೂರಿನಲ್ಲಿ ನಾನು ಶಾಲೆ ಕಲಿಯುತ್ತಿದ್ದಾಗ ಸಂ.ಶಿ.ಭೂಸನೂರ ಮಠ ಎಂಬ ಗುರುಗಳು ಇದ್ದರು. ಅವರ ಜತೆಗೆ ಕಳೆದಂತ ದಿನಗಳನ್ನು ನೆನಪಿಸಿಕೊಳ್ಳಲು ಇಷ್ಟುಪಡುತ್ತೇನೆ. ಅವರು ಕೊಟ್ಟ ಕನಸುಗಳಿಂದಾಗಿ ನಾನು ಸಾಹಿತ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು.

ಇಂದು ಅಧಿಕೃತ ಆಹ್ವಾನ
84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾಟಕಕಾರ ಹಾಗೂ ಜಾನಪದ ವಿದ್ವಾಂಸ ಡಾ. ಚಂದ್ರಶೇಖರ ಕಂಬಾರ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಅಧಿಕೃತವಾಗಿ ಆಹ್ವಾನ ನೀಡಲಿದೆ. ಸಂಜೆ 4 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರರ್‌ ನೇತೃತ್ವದ ನಿಯೋಗ ಬನಶಂಕರಿಯ 3ನೇ ಹಂತದಲ್ಲಿರುವ ಕಂಬಾರರ ನಿವಾಸಕ್ಕೆ ಭೇಟಿ ನೀಡಿ, ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಳ್ಳುವಂತೆ ಆಹ್ವಾನಿಸಲಿದೆ.

ಸಂದರ್ಶನ: ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next