ಬೆಂಗಳೂರು: ಯಾವುದೇ ದೇಶದ ಇತಿಹಾಸ, ಸಮಾಜ ಮತ್ತು ಸಂಸ್ಕೃತಿಯು ಯುವ ಬರಹಗಾರರಲ್ಲಿ ಹೊಸ ಅಲೆ ಮತ್ತು ಆಲೋಚನೆಯನ್ನು ಹುಟ್ಟಿಹಾಕುತ್ತದೆ. ಆವಿಷ್ಕಾರಕ್ಕೂ ಕಾರಣವಾಗಲಿದೆ ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ತಿಳಿಸಿದರು.
ಸಾಹಿತ್ಯ ಅಕಾಡೆಮಿ ವತಿಯಿಂದ 24 ಯುವ ಬರಹಗಾರರಿಗೆ “ಯುವ ಪುರಸ್ಕಾರ್-2020′ ವಿತರಿಸಿ ಮಾತನಾಡಿದ ಅವರು, ಯಾವುದೇ ಬರಹಗಾರರು ತಾವು ಇರುವ ಸ್ಥಳವನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿ ಮತ್ತು ಅಲ್ಲಿನ ಸಂಸ್ಕೃತಿಯ ಸಂಪರ್ಕವನ್ನು ವಿವರಿಸುವ ಕೆಲಸ ಮಾಡುವಂತೆ ಮನವಿ ಮಾಡಿದರು.
ಸಾಹಿತ್ಯ ಅಕಾಡೆಮಿಯು ಯುವ ಬರಹಗಾರರಿಗೆ ವೇದಿಕೆಯಾಗಿದೆ. ದೇಶದ ವಿವಿಧ ಭಾಗಗಳಲ್ಲಿರುವ ಯುವ ಬರಹಗಾರರಿಗೆ ಈ ಪ್ರಶಸ್ತಿಯು ಮತ್ತಷ್ಟು ಉತ್ತೇಜನ ನೀಡುತ್ತಿದೆ. ತಮ್ಮ ಬರಹಗಳಲ್ಲಿ ಮತ್ತಷ್ಟು ಶ್ರೇಷ್ಠತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ಪ್ರಶಸ್ತಿ ದೊರೆಯುವುದರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹ ವೇದಿಕೆಯಾಗಿದೆ.
ಯಾವುದೇ ಸಂಸ್ಕೃತಿಯು ಬರವಣಿಗೆಗೆ ಸ್ಫೂರ್ತಿದಾಯಕ ತಳಹದಿಯಾಗಿರುತ್ತದೆ. ಇಂದು ನಾನೊಬ್ಬ ಬರಹಗಾರನಾಗಿ ನೋಡುವುದಾದರೆ, ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಲಾರೆನ್ಸ್, ಏಲಿಯೇಟ್ಸ್ ಬರಹಗಾರರೂ ಕೂಡ ತಮ್ಮದೇ ನೇಟಿವಿಟಿ ಆಧಾರದಲ್ಲಿ ಬರವಣಿಗೆಯನ್ನು ಬರೆದಿದ್ದಾರೆ. ಯುವ ಬರಹಗಾರರು ಸಮಕಾಲೀನ ಸಂದರ್ಭದ ಆಧಾರದಲ್ಲಿ ಬರವಣಿಗೆಗಳನ್ನು ರಚಿಸಿದರೆ, ಹೆಚ್ಚು ಪ್ರಸ್ತುತ ಎನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ :ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಎಫ್ ಡಿಐಗೆ ಆಹ್ವಾನ: ಮುರುಗೇಶ್ ನಿರಾಣಿ
24 ಬರಹಗಾರರಿಗೆ ಪ್ರಶಸ್ತಿ
ಕನ್ನಡಕ್ಕೆ ಚಾಮರಾಜನಗರದ ಸ್ವಾಮಿ ಪೊನ್ನಾಚಿ (ಕೆ.ಎಸ್ .ಮಹದೇವಸ್ವಾಮಿ), ಸಂಪದ ಕುಂಕೋಳಿಕರ್ (ಕೊಂಕಣಿ), ಯಾಶಿಕಾ ದತ್ (ಇಂಗ್ಲಿಷ್), ಅಂಕಿತ್ ನರ್ವಾಲ್ (ಹಿಂದಿ) ಸೇರಿದಂತೆ 24 ಮಂದಿಗೆ ಯುವ ಪುರಸ್ಕಾರ ಪ್ರಶಸ್ತಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿಂದಿ ಕವಿ ಅರುಣ್ ಕಮಲ್, ಅಕಾಡೆಮಿ ಕಾರ್ಯದರ್ಶಿ ಕೆ. ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.