ಕಾಪು: ಸಮಾಜ ಸೇವೆಗಾಗಿ ಯುಎಇ ದುಬಾೖಯಲ್ಲಿ ಯೂತ್ ಐಕಾನ್ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಫಾರೂಕ್ ಚಂದ್ರನಗರ, ಪತ್ರಿಕೋದ್ಯಮ ಮತ್ತು ಸಮಾಜ ಸೇವೆಯಲ್ಲಿ ಕೇರಳ ರಾಜ್ಯದ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿವಾಕರ ಬಿ. ಶೆಟ್ಟಿ ಕಳತ್ತೂರು, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ದುಬಾೖ ಘಟಕದ ವತಿಯಿಂದ ಸಮಾಜ ಬಂಧು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ| ಸಿಬ್ಗತ್ ಉಲ್ಲಾ ಶರೀಫ್ ಅವರನ್ನು ಅಭಿನಂದನ ಸಮಿತಿ ಮತ್ತು ಅಭಿಮಾನಿ ಬಳಗದ ವತಿಯಿಂದ ಕಾಪು ಚಂದ್ರನಗರ ಬಟರ್ ಫ್ಲೈ ಅತಿಥಿಗೃಹದ ಸಭಾಂಗಣದಲ್ಲಿ ಸಾರ್ವಜನಿಕವಾಗಿ ಸಮ್ಮಾನಿಸಲಾಯಿತು.
ಮಜೂರು ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ರಶೀದ್ ಸಖಾಫಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಉದ್ಯಮಿಗಳೆಲ್ಲರೂ ಸಮಾಜ ಸೇವಕರಾಗಿ ಮೂಡಿ ಬರಲು ಸಾಧ್ಯವಿಲ್ಲ. ಗಳಿಸಿದ ಒಂದಿಷ್ಟು ಹಣವನ್ನು ಸಾಮಾಜಿಕ ಸೇವೆಗೆ ಬಳಸುವುದು ಔದಾರ್ಯದ ಗುಣವಾಗಿದೆ. ಅಂತಹ ನಿಸ್ವಾರ್ಥಿ ಸಾಧಕರನ್ನು ಗುರುತಿಸುವುದು ಸಮಾಜದ ಕರ್ತವ್ಯವೂ ಹೌದು ಎಂದರು.
ಮುಖ್ಯ ಅತಿಥಿಯಾಗಿದ್ದ ಸಮಾಜ ಸೇವಕ ಬಳಕೆದಾರರ ವೇದಿಕೆಯ ಅಜೀವ ಗೌರವಾಧ್ಯಕ್ಷ ಅಬೂಬಕ್ಕರ್ ಪರ್ಕಳ ಮಾತನಾಡಿ, ಸಮಾಜ ಸೇವೆಗೈದು ಮಾದರಿಯಾಗುವ ಸಾಧಕರಿಗೆ ನೀಡುವ ಸಮ್ಮಾನಗಳು ಸಮಾಜ ಸೇವೆಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಸಮ್ಮಾನಿತರಿಂದ ಮತ್ತಷ್ಟು ಸಮಾಜಮುಖೀ ಕಾರ್ಯಗಳು ಮೂಡಿಬರಲಿ ಎಂದು ಹಾರೈಸಿದರು.
ಕಳತ್ತೂರು ಕುಶಲಶೇಖರ ಶೆಟ್ಟಿ ಇಂಟರ್‌ನ್ಯಾಶನಲ್ ಆಡಿಟೋರಿಯಂನ ಆಡಳಿತ ನಿರ್ದೇಶಕ ಶೇಖರ್ ಬಿ. ಶೆಟ್ಟಿ ಕಳತ್ತೂರು ಅಧ್ಯಕ್ಷತೆ ವಹಿಸಿದ್ದರು. ಸಾಧಕರನ್ನು ಅಭಿನಂದನ ಸಮಿತಿ, ಅಭಿಮಾನಿ ಬಳಗ ಸಹಿತವಾಗಿ ಉಮ್ಮಬ್ಬ ಇದಿನಬ್ಬ ಫ್ಯಾಮಿಲಿ ಟ್ರಸ್ಟ್ ಮಜೂರು, ಕ್ರೆಸೆಂಟ್ ಇಂಟರ್‌ನ್ಯಾಶನಲ್ ಸ್ಕೂಲ್ ಚಂದ್ರನಗರ, ಎಸ್‌ವೈಎಸ್ ಮಜೂರು ಮತ್ತು ನಾಗರಿಕ ನ್ಯಾಯದ ಧ್ವನಿ ಸಮಿತಿ ಮೂಡುಬಿದಿರೆ ಸಂಸ್ಥೆಗಳ ವತಿಯಿಂದಲೂ ಗೌರವಿಸಲಾಯಿತು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಅರುಣಾಕರ ಡಿ. ಶೆಟ್ಟಿ ಕಳತ್ತೂರು, ಕಳತ್ತೂರು ಗರಡಿ ಅರ್ಚಕ ವಿಶ್ವನಾಥ ಪೂಜಾರಿ ಗರಡಿಮನೆ, ಚಂದ್ರನಗರ ಕ್ರೆಸೆಂಟ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಸ್ಥಾಪಕ ಅಧ್ಯಕ್ಷ ಸಂಶುದ್ದೀನ್ ಯೂಸುಫ್, ಕೆಪಿಸಿಸಿ ಎನ್‌ಆರ್‌ಐ ವಿಂಗ್ ಉಡುಪಿ ಘಟಕದ ಅಧ್ಯಕ್ಷ ಶೇಖ್ ವಾಹಿದ್ ದಾವೂದ್, ಬಟರ್ ಫ್ಲೈ ಗೆಸ್ಟ್ ಹೌಸ್‌ನ ಮಾಲಕ ಉಮ್ಮರಬ್ಬ ಚಂದ್ರನಗರ ಅತಿಥಿಗಳಾಗಿದ್ದರು.
ಅಭಿನಂದನ ಸಮಿತಿಯ ಪ್ರಧಾನ ಸಂಚಾಲಕ ದಿವಾಕರ ಡಿ. ಶೆಟ್ಟಿ ಸ್ವಾಗತಿಸಿದರು. ದಿನೇಶ್ ಆಚಾರ್ಯ ಶಿರ್ವ ಅಭಿನಂದನ ಪತ್ರ ವಾಚಿಸಿ, ವಂದಿಸಿದರು. ನಿರ್ಮಲ್ ಕುಮಾರ್ ಹೆಗ್ಡೆ ನಿರ್ವಹಿಸಿದರು.