ಆರಂಭದಲ್ಲಿ ಕಿರುಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಬಳಿಕ “ಮೂಕ ವಿಸ್ಮಿತ’, “ಸಿಲಿಕಾನ್ ಸಿಟಿ’, “ಕಿಸ್’ ಸಿನಿಮಾಗಳಲ್ಲಿ ಸಪೋರ್ಟಿಂಗ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ಚಂದ್ರ ಕೀರ್ತಿ ಈಗ “ತೂತು ಮಡಿಕೆ’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚಿತ್ರಕ್ಕೆ ಚಂದ್ರ ಕೀರ್ತಿ ಅವರೇ ಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಸಹಜವಾಗಿಯೇ ಈ ಸಿನಿಮಾ ಮೇಲೆ ಅವರ ನಿರೀಕ್ಷೆ ಹೆಚ್ಚಿದೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಹಿಟ್ ಆಗಿರುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಹೊಸಬರ ಹೊಸತನವನ್ನು ಪ್ರೋತ್ಸಾಹಿಸುವ ಪ್ರೇಕ್ಷಕ “ತೂತು ಮಡಿಕೆ’ಯನ್ನು ಇಷ್ಟಪಡುತ್ತಾರೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.
“ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಷ್ಟು “ಲೂಪ್ ಹೋಲ್ಸ್’ ಇದ್ದೇ ಇರುತ್ತದೆ. ಅಂಥ “ಲೂಪ್ ಹೋಲ್ಸ್’ ಮುಚ್ಚಿಕೊಂಡಾಗಲಷ್ಟೇ ಆತ ಏನಾದರೂ ಸಾಧಿಸ ಬಲ್ಲ, ದೊಡ್ಡವನಾಗಬಲ್ಲ. ನಮ್ಮ ನಡುವೆಯೇ ಇರುವಂಥ ಇಂಥ ಸ್ವಾರ್ಥ, ದುರಾಸೆ, ವ್ಯಾಮೋಹ ಮೊದಲಾದ “ಲೂಪ್ ಹೋಲ್ಸ್’ಗಳ ನಡುವಿನ ಕಥೆಯೇ “ತೂತು ಮಡಿಕೆ’. ಇದು ಪ್ರತಿಯೊಬ್ಬನಿಗೂ ಕನೆಕ್ಟ್ ಆಗುವಂಥ ವಿಷಯ. ಸಾದಾಸೀದಾ ವಿಷಯವನ್ನು ಇಟ್ಟುಕೊಂಡು ನೋಡುಗರಿಗೆ ಮನಮುಟ್ಟುವಂತೆ ತೆರೆಮೇಲೆ ಹೇಳುತ್ತಿದ್ದೇವೆ’ ಎನ್ನುವುದು “ತೂತು ಮಡಿಕೆ’ ಚಿತ್ರತಂಡದ ಮಾತು.
“ಕಾಸಿನ ದುರಾಸೆಯಿಂದ ಅತ್ಯಮೂಲ್ಯ “ಆ್ಯಂಟಿಕ್ ಪೀಸ್’ ಒಂದರ ಹಿಂದೆ ಬೀಳುವ ಒಂದಷ್ಟು ಪಾತ್ರಗಳ ಸುತ್ತ ಏನೆಲ್ಲ ನಡೆಯುತ್ತದೆ. ಕೊನೆಗೆ ಈ “ಆ್ಯಂಟಿಕ್ ಪೀಸ್’ ಹಿಂದೆ ಬಿದ್ದವರಿಗೆ ದಕ್ಕುತ್ತದೆಯಾ? ಇಲ್ಲವಾ? ಹೀಗೆ, “ಆ್ಯಂಟಿಕ್ ಪೀಸ್’ ಹಿಂದೆ ಬಿದ್ದು “ಪೀಸ್’ (ಶಾಂತಿ) ಕಳೆದುಕೊಂಡವರ ಕಥೆ “ತೂತು ಮಡಿಕೆ’ಯಲ್ಲಿದೆ’ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ಪಾವನಾ ನಾಯಕಿಯಾಗಿದ್ದಾರೆ. ಉಳಿದಂತೆ ಉಳಿದಂತೆ ಪ್ರಮೋದ್ ಶೆಟ್ಟಿ, ಗಿರೀಶ್ ಶಿವಣ್ಣ, ಉಗ್ರಂ ಮಂಜು, ನಂದಗೋಪಾಲ್, ಶಂಕರ್ ಅಶ್ವಥ್, ಅರುಣ್ ಮೂರ್ತಿ, ರಾಘವೇಂದ್ರ ನರೇಶ್, ಸಿತಾರಾ ಮತ್ತಿತರ ಕಲಾವಿದರ ದೊಡ್ಡ ದಂಡೇ “ತೂತು ಮಡಿಕೆ’ ಸಿನಿಮಾದಲ್ಲಿದೆ.
ಚಿತ್ರಕ್ಕೆ ನವೀನ್ ಚಲ್ಲ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನವಿದೆ. ಚಿತ್ರದ ಎರಡು ಹಾಡುಗಳಿಗೆ ಸ್ವಾಮಿನಾಥನ್ ಆರ್. ಕೆ ಸಂಗೀತ ಸಂಯೋಜಿಸಿದ್ದಾರೆ. ವಿಜಯ ಪ್ರಕಾಶ್, ಚೇತನ್ ನಾಯಕ್ ಧ್ವನಿಯಾಗಿದ್ದು, ಹಾಡುಗಳಿಗೆ ಚೇತನ್ ಕುಮಾರ್, ನಿತಿನ್ ಜೈ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.
ಮೋಹನ್ ಮಾಸ್ಟರ್ ಈ ಗೀತೆಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಚಂದ್ರ ಕೀರ್ತಿ, ಎಎಸ್‌ಜಿ ಮತ್ತು ಡಾಲರ್ ಚಿತ್ರಕಥೆ, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. “ಸರ್ವತಾ ಸಿನಿ ಗ್ಯಾರೇಜ್’ ಬ್ಯಾನರ್‌ನಲ್ಲಿ ಮಧುಸೂದನ್ ರಾವ್ ಮತ್ತು ಶಿವಕುಮಾರ್ ಕೆ. ಬಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.