Advertisement

ಭಕ್ತರ ದರ್ಶನಕ್ಕೆ ಗ್ರಹಣ ಹಿಡಿಸಿದ ಚಂದ್ರಗ್ರಹಣ

06:20 AM Feb 01, 2018 | |

ಬೆಂಗಳೂರು: ಚಂದ್ರಗ್ರಹಣದ ಪ್ರಯುಕ್ತ ರಾಜ್ಯಾದ್ಯಂತ ದೇವಾಲಯಗಳು ಬುಧವಾರ ಸಂಜೆ 4 ಗಂಟೆ ಬಳಿಕ ಬಾಗಿಲು ಮುಚ್ಚಿದ್ದವು.

Advertisement

ಶ್ರೀರಂಗಪಟ್ಟಣದ ರಂಗನಾಥ, ಧರ್ಮಸ್ಥಳದ ಮಂಜುನಾಥ, ಕೊಲ್ಲೂರಿನ ಮೂಕಾಂಬಿಕೆ, ಗೋಕರ್ಣದ ಮಹಾಬಲೇಶ್ವರ, ಕರೀಘಟ್ಟ ವೆಂಕಟರಮಣ ಸೇರಿ ರಾಜ್ಯದ ಪ್ರಸಿದ್ಧ ದೇಗುಲಗಳಲ್ಲಿ ಭಕ್ತರಿಗೆ ಸಂಜೆಯ ವೇಳೆ ದೇವರ ದರ್ಶನ ಲಭ್ಯವಿರಲಿಲ್ಲ. ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗಿತ್ತು. ಸಂಜೆ 4 ಗಂಟೆಯಿಂದ ರಾತ್ರಿ 9.30ರ ತನಕ ದೇವಾಲಯದಲ್ಲಿ ಯಾವುದೇ ಪೂಜೆ ನಡೆಯಲಿಲ್ಲ. ರಾತ್ರಿ 9.30ರ ಬಳಿಕ ದೇಗುಲ ಶುದ್ಧೀಕರಣ ಮಾಡಿದ ಮೇಲೆ ದೇವರಿಗೆ ಅಭಿಷೇಕ ಮಾಡಲಾಯಿತು.

– ಶ್ರೀರಂಗಪಟ್ಟಣದ ಗಂಜಾಂನ ನಿಮಿಷಾಂಬದಲ್ಲಿ ಹುಣ್ಣಿಮೆ ಪ್ರಯುಕ್ತ ಬುಧವಾರ ಮುಂಜಾನೆ 1 ಗಂಟೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಪುಣ್ಯಸ್ನಾನದೊಂದಿಗೆ ದೇವರಿಗೆ ಪೂಜೆ ಸಲ್ಲಿಸಿದರು. ಮಂಗಳವಾರ ಸಂಜೆಯಿಂದಲೇ ದೇವಾಲಯಕ್ಕೆ ಭಕ್ತರ ದಂಡು ಆಗಮಿಸಿತ್ತು. ಮಧ್ಯರಾತ್ರಿಯ ನಂತರ ಭಕ್ತರು ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದರು.

– ಯಾದಗಿರಿ ಜಿಲ್ಲೆ ಹಾಲಗೇರಾ ಗ್ರಾಮದ ಗ್ರಾಮ ದೇವತೆ ಯಲ್ಲಮ್ಮ ದೇವಿಯ ರಥೋತ್ಸವವನ್ನು ಚಂದ್ರಗ್ರಹಣ ನಿಮಿತ್ತ ಎರಡು ಗಂಟೆ ಹದಿನೈದು ನಿಮಿಷ ಮೊದಲೇ ಎಳೆಯಲಾಯಿತು. ಪ್ರತಿವರ್ಷ ಸಂಜೆ ಆರು ಗಂಟೆಗೆ ಎಳೆಯಲಾಗುತ್ತಿದ್ದ ರಥವನ್ನು ಈ ಸಲ ಮೂರು ಗಂಟೆ ನಲವತ್ತೈದು ನಿಮಿಷಕ್ಕೆ ಎಳೆಯಲಾಯಿತು. ರಾಯಚೂರು ಜಿಲ್ಲೆ ಮಸ್ಕಿಯ ಮಲ್ಲಿಕಾರ್ಜುನ ಸ್ವಾಮಿ, ಗಬ್ಬೂರಿನ ಬೂದಿಬಸವೇಶ್ವರ ರಥೋತ್ಸವ ಕೂಡ ಸಮಜೆ ಬದಲಿಗೆ ಮಧ್ಯಾಹ್ನವೇ ನೆರವೇರಿದವು.

– ಗ್ರಹಣ ನಿಮಿತ್ತ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಬುಧವಾರ ಸಂಜೆ ಸುದರ್ಶನ ಹೋಮ, ಧನ್ವಂತರಿ ಹೋಮ, ಮಂಜುಸೂಕ್ತ ಹೋಮಗಳನ್ನು ನೆರವೇರಿಸಲಾಯಿತು. ಜತೆಗೆ, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಶೀಘ್ರ ಗುಣಮುಖರಾಗಲಿ ಎಂದು ಸಂಸ್ಕೃತ ಪಾಠಶಾಲೆ ಮಕ್ಕಳು, ಶ್ರೀಮಠದ ಸಿಬ್ಬಂದಿ, ಭಕ್ತರು 108 ಗುರು ರಾಯರ ಸ್ತೋತ್ರ ಪಠಿಸಿದರು. ಬುಧವಾರ ಬೆಳಗ್ಗೆಯಿಂದಲೇ ಯಾವುದೇ ಪೂಜೆ ಇರಲಿಲ್ಲ. ಜತೆಗೆ ಪ್ರಸಾದ, ಉಪಾಹಾರದ ವ್ಯವಸ್ಥೆ ಕೂಡ ಇರಲಿಲ್ಲ.

Advertisement

– ಶೃಂಗೇರಿಯಲ್ಲಿ ಮಧ್ಯಾಹ್ನದ ನಂತರ ಪೂಜಾದಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಭಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ಭೋಜನ ರದ್ದುಪಡಿಸಲಾಗಿತ್ತು. ಗ್ರಹಣ ಮೋಕ್ಷದ ನಂತರ ತುಂಗಾ ನದಿಯಲ್ಲಿ ಭಕ್ತಾದಿಗಳು ತರ್ಪಣ ಬಿಟ್ಟರು.

– ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಂಜೆ 5.45 ರಿಂದ ರಾತ್ರಿ 7.30ರವರೆಗೆ ದೇವಿಗೆ ವಿಶೇಷ ಅಭಿಷೇಕ ನಡೆಸಲಾಯಿತು. ಈ ವೇಳೆ, ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು.

– ನಂಜನಗೂಡಿನಲ್ಲಿ ಸಾವಿರಾರು ಭಕ್ತರು ಕಪಿಲೆಯಲ್ಲಿ ಸ್ನಾನ ಮಾಡಿದರು. ಮಾಸಿಕ ಹುಣ್ಣಿಮೆಯ ರಥೋತ್ಸವವನ್ನು ಗ್ರಹಣದ ಪ್ರಯುಕ್ತ 4.30ಕ್ಕೆ ಮುಂಚಿತವಾಗಿ ಮುಗಿಸಲಾಯಿತು. ಗ್ರಹಣ ಪ್ರಾರಂಭವಾದ ನಂತರ ಕಪಿಲಾ ನದಿಯಿಂದ ಅಗ್ರೋದಕ ತಂದು ಶ್ರೀಕಂಠೇಶ್ವರನಿಗೆ ವಿಶೇಷ ಅಭಿಷೇಕ ಮಾಡಲಾಯಿತು.

– ಬಳ್ಳಾರಿ ಜಿಲ್ಲೆ ಶ್ರೀಗುರು ಕೊಟ್ಟೂರೇಶ್ವರ ಮತ್ತು ಉಜ್ಜಯಿನಿಯ ಶ್ರೀಮರುಳಸಿದ್ದೇಶ್ವರ ದೇವಸ್ಥಾನಗಳಲ್ಲಿ ಎಂದಿನಂತೆ ದೇವಾಲಯದ ಬಾಗಿಲು ತೆರೆದು, ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಎರಡೂ ದೇವಾಲಯದಲ್ಲಿ ಎಂದಿನಂತೆ ಪೂಜೆಗಳು ನಡೆದವು.ಗ್ರಹಣವಿದ್ದರೂ ಸಹ ದೇವಾಲಯಗಳ ಬಾಗಿಲು ಮುಚ್ಚದೆ ಭಕ್ತರಿಗೆ ದರ್ಶನ ನೀಡುವುದು ಇಲ್ಲಿ ಮೊದಲಿನಿಂದ ಬಂದ ವಾಡಿಕೆ.

Advertisement

Udayavani is now on Telegram. Click here to join our channel and stay updated with the latest news.

Next